ಆ.13ಕ್ಕೆ ವಿಚಾರಣೆ: ವಿಶೇಷ ಸರ್ಕಾರಿ ಅಭಿಯೋಜಕರಾಗಿ ರಾಮಮೂರ್ತಿ, ಗಿರಿಜೇಶ್ ನೇಮಕ
ಮೈಸೂರು

ಆ.13ಕ್ಕೆ ವಿಚಾರಣೆ: ವಿಶೇಷ ಸರ್ಕಾರಿ ಅಭಿಯೋಜಕರಾಗಿ ರಾಮಮೂರ್ತಿ, ಗಿರಿಜೇಶ್ ನೇಮಕ

June 14, 2019

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಯಾಗಿದ್ದ ಸಿ.ಶಿಖಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣದ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿ ಮೈಸೂರಿನ 3ನೇ ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ. ಜಿಪಂ ಮಾಜಿ ಅಧ್ಯಕ್ಷ ಕೆ.ಮರೀ ಗೌಡ, ಮಂಜುನಾಥ್ ಹಾಗೂ ಇತರರ ವಿರುದ್ಧದ ಪ್ರಕರಣ ಇಂದು ವಿಚಾರಣೆಗೆ ಬಂದಿತ್ತು. ಈ ಸಂದರ್ಭದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ರಾಗಿ ಜಿ.ವಿ.ರಾಮಮೂರ್ತಿ ಹಾಗೂ ಆರ್.ಗಿರಿಜೇಶ್ ಅವರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು, ವಿಶೇಷ ಅಭಿಯೋಜಕರಿಗೆ ಆರೋಪಿಗಳ ವಿಚಾರಣೆ ಹಾಗೂ ವಾದ ಮಂಡಿಸಲು ಅವಕಾಶ ನೀಡಿದರು. ಅಲ್ಲದೆ ಮುಂದಿನ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಪಡಿಸಿಕೊಳ್ಳಲಾಗಿರುವ ಸಿಡಿ ಇನ್ನಿತರ ಮಾಲುಗಳನ್ನು ಹಾಜರುಪಡಿಸುವಂತೆ ಸೂಚಿಸಿದರು.

ಶಿಖಾ ಅವರು ಜಿಲ್ಲಾಧಿಕಾರಿಯಾಗಿದ್ದಾಗ 2016 ಜುಲೈ 4ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿಗೆ ಆಗಮಿಸಿದ್ದರು. ಸರ್ಕಾರಿ ಅತಿಥಿಗೃಹದಲ್ಲಿದ್ದ ಸಿದ್ದ ರಾಮಯ್ಯನವರ ಭೇಟಿಗೆ ಹೋಗಿದ್ದ ಶಿಖಾ ಅವರನ್ನು ಕೆ.ಮರೀಗೌಡ, ಮಂಜುನಾಥ್ ಇನ್ನಿತರರು, ತಹಶೀಲ್ದಾರ್ ವರ್ಗಾವಣೆ ವಿಚಾರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದ್ದಲ್ಲದೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರೆಂದು ಆರೋಪಿಸಿ, ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ದೇವರಾಜ ಉಪವಿಭಾಗದ ಅಂದಿನ ಎಸಿಪಿ ರಾಜಶೇಖರ್ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Translate »