ಮೈಸೂರು,ಡಿ.5(ಆರ್‍ಕೆಬಿ)-ಮೈಸೂರಿನ ರಂಗವಲ್ಲಿ ತಂಡ ಡಿ.6ರಿಂದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಮೂರು ದಿನಗಳ `ರಂಗವಲ್ಲಿ ರಂಗ ಸಂಭ್ರಮ’ ನಾಟಕೋತ್ಸವ ಆಯೋಜಿಸಿದೆ ಎಂದು ತಂಡದ ಪದಾಧಿಕಾರಿ ಮಂಜುನಾಥ ಶಾಸ್ತ್ರಿ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ನಾಟಕೋತ್ಸವದ ವಿವರಗಳನ್ನು ನೀಡಿ, ಪ್ರತಿದಿನ ಸಂಜೆ 7 ಗಂಟೆಗೆ ನಾಟಕಗಳು ನಡೆಯಲಿದ್ದು, ನಾಟಕಗಳಿಗೂ ಮುನ್ನ ವಿವಿಧ ಪ್ರಕಾರದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸ ಲಾಗುವುದು ಎಂದರು. ಡಿ.6ರಂದು ಸಂಜೆ 4 ಗಂಟೆಗೆ ಕಲಾಮಂದಿರ ಮನೆಯಂಗಳದಲ್ಲಿ ರಂಗಸಂಭ್ರಮಕ್ಕೆ ರಂಗಭೂಮಿ ಮತ್ತು ಚಲನಚಿತ್ರ ಹಿರಿಯ ನಟ ಶರತ್ ಲೋಹಿತಾಶ್ವ ಚಾಲನೆ ನೀಡುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ ಅಧ್ಯಕ್ಷತೆ ವಹಿಸುವರು. ರಂಗಾಯಣ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಅತಿಥಿಯಾಗಿ ಭಾಗವಹಿಸುವರು.
ಮೊದಲ ದಿನ (ಡಿ.6) ಸಂಜೆ 5 ಗಂಟೆಗೆ ದಕ್ಷಿಣ ಕನ್ನಡ ಬಂಟ್ವಾಳದ ನಾದ ಮಣಿ ನಾಲ್ಕೂರು ತಂಡದಿಂದ ತತ್ವಪದ ಗಾಯನ, ಸಂಜೆ 7 ಗಂಟೆಗೆ ಬಿ.ಆರ್. ವೆಂಕಟರಮಣ ಐತಾಳ್ ನಿರ್ದೇಶನದಲ್ಲಿ ಗಿರೀಶ್ ಕಾರ್ನಾಡರ `ರಾಕ್ಷಸ-ತಂಗಡಿ’ ನಾಟಕವನ್ನು ಹೆಗ್ಗೋಡು ನೀನಾಸಂ ತಿರುಗಾಟ ಪ್ರಸ್ತುತಪಡಿಸಲಿದೆ ಎಂದರು.
ಡಿ.7ರಂದು ಸಂಜೆ 4 ಗಂಟೆಗೆ ಮೈಸೂರಿನ ಭಾರತ್ ಬ್ರಾಸ್ ಬ್ಯಾಂಡ್ ವತಿ ಯಿಂದ ಬ್ಯಾಂಡ್ ಬಚಾವೋ, ಸಂಜೆ 7ಕ್ಕೆ ನಾಟಕ `ಕರ್ಣ ಸಾಂಗತ್ಯ’, ಕನ್ನಡದ ಹಲವು ಕಾವ್ಯಗಳನ್ನು ಆಧರಿಸಿದ ರಂಗಪಠ್ಯವಾದ ಇದನ್ನು ಗಣೇಶ್ ಮಂದರ್ತಿ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ಪ್ರಸ್ತುತಪಡಿಸಲಿದೆ. ಡಿ.8ರಂದು ಸಂಜೆ 4 ಗಂಟೆಗೆ ಅನಿರುದ್ಧ್ ಐತಾಳ್ ಹಿಂದೂಸ್ತಾನಿ ಸಂಗೀತ ಪ್ರಸ್ತುತಪಡಿಸುವರು.
ಪಂಡಿತ್ ಭೀಮಾಶಂಕರ್ ತಬಲಾ, ದೀಪಕ್ ನಾಗಣ್ಣವರ್ ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ. ಸಂಜೆ 7ಕ್ಕೆ ಶ್ರೀನಿವಾಸ ವೈದ್ಯರ ಬರಹಗಳನ್ನಾಧರಿಸಿದ `ಪಾಶ್ರ್ವ ಸಂಗೀತ’ ನಾಟಕವನ್ನು ಮೈಸೂರಿನ ರಂಗವಲ್ಲಿ ತಂಡವು ಪ್ರಶಾಂತ್ ಹಿರೇಮಠ ನಿರ್ದೇಶನದಲ್ಲಿ ಪ್ರಸ್ತುತ ಪಡಿಸುವರು. ಅಲ್ಲದೆ ಡಿ.6ರಿಂದ 8ರವರೆಗೆ ಪ್ರತಿದಿನ ಬೆಳಿಗ್ಗೆ11ರಿಂದ ಸಂಜೆ 6 ಗಂಟೆವರೆಗೆ ಕಲಾವಿದ ಎ.ಆರ್.ಮಂಜುನಾಥ್ ಅವರ ಜಲವರ್ಣ ಕಲಾಕೃತಿಗಳ ಭಾವಚಿತ್ರ ಪ್ರದರ್ಶನವಿದೆ ಎಂದು ಹೇಳಿದರು. ನಾಟಕೋತ್ಸವ ಕುರಿತಂತೆ ಹೆಚ್ಚಿನ ಮಾಹಿತಿಗೆ ಮೊ- 9448871815, 9901626701 ಸಂಪರ್ಕಿಸಬಹುದು. ಸುದ್ದಿಗೋಷ್ಠಿ ಯಲ್ಲಿ ಸಂಚಾಲಕ ರವಿಪ್ರಸಾದ್, ವಿನಾಯಕ ಕೃಷ್ಣ, ಮುರಳಿ ಉಪಸ್ಥಿತರಿದ್ದರು.