ಮೈಸೂರು: ರಂಗಾಯಣದ ಸಂಚಾರಿ ರಂಗ ಘಟಕದ ವತಿ ಯಿಂದ ಹಮ್ಮಿಕೊಂಡಿರುವ ಪ್ರಸಕ್ತ ಸಾಲಿನ ಮೊದಲ ಹಂತದ ರಂಗಸಂಚಾರಕ್ಕೆ (ವಿವಿಧ ಸ್ಥಳಗಳಲ್ಲಿ ನಾಟಕ ಪ್ರದರ್ಶನ) ಭಾನು ವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.
ರಂಗಾಯಣದ ಆವರಣದಲ್ಲಿ ರಂಗ ನಿರ್ದೇಶಕ ಶ್ರೀಪಾದಭಟ್, ಪ್ರದರ್ಶನ ನೀಡಲು ಹೊರಟಿರುವ ರಂಗಾಯಣದ ಕಿರಿಯ ಕಲಾವಿದರಿಗೆ ಪ್ರಸಾಧನ ಮಾಡುವ ಮೂಲಕ ರಂಗ ಸಂಚಾರಕ್ಕೆ ಚಾಲನೆ ನೀಡಿದರು.
ಪ್ರವಾಸ ಪ್ರದರ್ಶನಕ್ಕಾಗಿ 3 ನಾಟಕ ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು, ಇವು ಕನ್ನಡ ಭಾಷೆಯಲ್ಲಿ ಪ್ರದರ್ಶನಗೊಳ್ಳಲಿವೆ. ಕೇರಳದ ಚಂದ್ರದಾಸನ್ ನಿರ್ದೇಶನದ `ಆರ್ಕೇಡಿಯಾದಲ್ಲಿ ಪಕ್’, ಚಿದಂಬರ ರಾವ್ ಜಂಬೆ ನಿರ್ದೇಶನದ `ಬೆಂದಕಾಳು ಆನ್ ಟೋಸ್ಟ್’ ಹಾಗೂ ಶ್ರವಣ್‍ಕುಮಾರ್ ನಿರ್ದೇಶನದ `ರೆಕ್ಸ್ ಅವರ್ಸ್-ಡೈನೋ ಏಕಾಂಗಿ ಪಯಣ’ ನಾಟಕಗಳನ್ನು 45 ದಿನಗಳ ಸಂಚಾರದ ಅವಧಿಯಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ.
ಮೂವರು ತಂತ್ರಜ್ಞರು ಸೇರಿದಂತೆ ಒಟ್ಟು 15 ಮಂದಿ ರಂಗಾಯಣದ ಕಿರಿಯ ಕಲಾವಿದರು ಈ ರಂಗ ಪಯಣದಲ್ಲಿ ಅಭಿ ನಯ ನೀಡಲಿದ್ದಾರೆ. ಇದು ಈ ಸಾಲಿನ ಮೊದಲ ಹಂತದ ರಂಗ ಸಂಚಾರವಾಗಿದ್ದು, 2ನೇ ಹಂತದ ರಂಗ ಸಂಚಾರ 2020ರ ಫೆಬ್ರವರಿ ಕೊನೆ ವಾರದಲ್ಲಿ ಆರಂಭಗೊಳ್ಳ ಲಿದೆ. ರಂಗಾಯಣದ ಸಿ.ಕೆ.ಪಲ್ಲವಿ, ಶಿಲ್ಪಾ ಎಸ್.ಶೆಟ್ಟಿ, ಧನ್ಯಾ ಕೋಟ್ಯಾನ್, ಎಸ್. ಸೌಮ್ಯ, ಕಾವ್ಯ, ಓ.ಶುಭಗೌರಿ, ಆರ್. ದುರ್ಗಾ ಪರಮೇಶ, ಶ್ರೀಕಾಂತ್, ಚಂದ್ರ ಶೇಖರೇಗೌಡ, ಹೆಚ್.ಎಂ.ಅಭಿಷೇಕ್, ದಾನಪ್ಪ ತಳಗೇರಿ, ರಾಜಶೇಖರ್, ಎಂ.ಅರ್ಜುನ್, ಜಿ.ವಿನೋದ್ ಹಾಗೂ ಚಂದನ್ ರಂಗ ದಲ್ಲಿ ಅಭಿನಯ ನೀಡಲಿದ್ದಾರೆ. ನೇಪಥ್ಯ ದಲ್ಲಿ ರಾಘವ ಕಮ್ಮಾರ್ ಸಂಗೀತ ನೀಡಿ ದರೆ, ಪಿ.ಶಿವಕುಮಾರ್ ಧ್ವನಿ ಮತ್ತು ಬೆಳ ಕಿನ ವ್ಯವಸ್ಥೆ ನೋಡಿಕೊಳ್ಳಲಿದ್ದು, ವಸ್ತ್ರ ವಿನ್ಯಾಸವನ್ನು ಮೋಹನ್ ಮಾಡಲಿದ್ದಾರೆ.
ರಂಗ ಸಂಚಾರ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ರಂಗಾ ಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿ ಕಾರ್ಜುನಸ್ವಾಮಿ, ಸ್ಥಳೀಯ ರಂಗ ಸಂಘ ಟನೆಗಳ ಸಹಯೋಗದೊಂದಿಗೆ ನಮ್ಮ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. 3 ಪ್ರದರ್ಶನಕ್ಕೆ 15 ಸಾವಿರ ಸಂಭಾವನೆ ನೀಡಲಿರುವ ಸ್ಥಳೀಯ ರಂಗ ಸಂಘಟನೆ ಗಳು ಪ್ರದರ್ಶನದ ಟಿಕೆಟ್ ದರವನ್ನು ತಾವೇ ನಿಗದಿಪಡಿಸಲಿವೆ ಎಂದರು.
ರಂಗ ಪಯಣದ ವೇಳೆ ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳು ಹೆಚ್ಚುವರಿ ಪ್ರದರ್ಶನಕ್ಕೆ ಕೋರಿಕೆ ನೀಡಿದರೆ ಇಂತಹ ಪ್ರತಿ ಪ್ರದರ್ಶನಕ್ಕೆ 5 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗುವುದು. ಈ ಹಣದಲ್ಲಿ ಶೇ.50ರಷ್ಟನ್ನು ನಮ್ಮ ಕಲಾವಿದರಿಗೆ ಹಂಚಲಿದ್ದೇವೆ ಎಂದು ವಿವರಿಸಿದರು.
ಪ್ರದರ್ಶನದ ವಿವರಗಳಿಗೆ ಮೈಸೂರು ರಂಗಾ ಯಣದ ದೂ.ಸಂ. 0821-2512639 ಸಂಪ ರ್ಕಿಸಬಹುದು. ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಂಚಾರಿ ರಂಗ ಘಟಕದ ಮುಖ್ಯಸ್ಥ ಪ್ರಕಾಶ್ ಗರುಡ, ಪ್ರವಾಸ ವ್ಯವಸ್ಥಾಪಕ ಅರಸೀಕೆರೆ ಯೋಗಾನಂದ ಮತ್ತಿತರರು ಹಾಜರಿದ್ದರು.