ಪ್ರವಾಹ ಪೀಡಿತ ಪ್ರದೇಶಗಳ ಬೆಳೆ ಹಾನಿ ರಿಯಾಯಿತಿ ನೀಡಲು ಬ್ಯಾಂಕ್‍ಗಳಿಗೆ ಆರ್‍ಬಿಐ ಮಾರ್ಗಸೂಚಿ
ಕೊಡಗು

ಪ್ರವಾಹ ಪೀಡಿತ ಪ್ರದೇಶಗಳ ಬೆಳೆ ಹಾನಿ ರಿಯಾಯಿತಿ ನೀಡಲು ಬ್ಯಾಂಕ್‍ಗಳಿಗೆ ಆರ್‍ಬಿಐ ಮಾರ್ಗಸೂಚಿ

October 12, 2018

ಮಡಿಕೇರಿ:  ಪ್ರವಾಹ ಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಿಸಿರುವ ತಾಲೂಕುಗಳಲ್ಲಿ ಆಗಿರುವ ಬೆಳೆಹಾನಿಗೆ ಹಲವು ರೀತಿಯ ರಿಯಾಯಿತಿ ನೀಡಲು ಬ್ಯಾಂಕ್‍ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗ ದರ್ಶಿ ಸೂತ್ರದ ಪ್ರಕಾರ ಕಾಫಿ ಬೆಳೆಯುವ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಕಾಫಿ ಬೆಳೆಗಾರರಿಗೂ ಅನೇಕ ರೀತಿಯ ಆರ್ಥಿಕ ಪರಿಹಾರ ದೊರಕಲಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ನರಸಿಂಹರಾಜಪುರ, ಮೂಡಿಗೆರೆ, ಶೃಂಗೇರಿ ಮತ್ತು ಕೊಪ್ಪ ತಾಲೂಕನ್ನು ಪ್ರವಾಹ ಪೀಡಿತ ತಾಲ್ಲೂಕುಗಳೆಂದು ಘೋಷಿಸಿದೆ. ಇದೇ ರೀತಿ ಹಾಸನ ಜಿಲ್ಲೆಯ ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಆಲೂರು, ಕೊಡಗು ಜಿಲ್ಲೆಯ ಮಡಿಕೇರಿ, ಸೋಮ ವಾರಪೇಟೆ, ವಿರಾಜಪೇಟೆಯನ್ನು ಈ ಪಟ್ಟಿಗೆ ಸೇರಿಸಲಾಗಿದೆ.

ಇತ್ತೀಚೆಗೆ ರಾಜ್ಯಮಟ್ಟದ ಬ್ಯಾಂಕ್ ಗಳ ಒಕ್ಕೂಟದ ಸಭೆಯಲ್ಲಿ ಅತಿವೃಷ್ಠಿಯಿಂದ ಕಾಫಿ, ಕಾಳು ಮೆಣಸು ಬೆಳೆ ಹಾಳು, ವಿಪರೀತ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಕೆಲವು ಕಾಫಿ ತೋಟಗಳೆ ಭೂಕುಸಿತಕ್ಕೆ ತುತ್ತಾಗಿ ನಾಶವಾಗಿರುವುದು ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೆಲವು ಕಡೆ ಈ ರೀತಿ ಅನಾಹುತಗಳಾಗಿದೆ. ಕೊಡಗಿನಲ್ಲಿ ಒಟ್ಟು 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮಳೆ ಹಾವಳಿಯಿಂದ ತೋಟಗಳು ನಾಶವಾಗಿದ್ದರೆ, ಹಾಸನ ಜಿಲ್ಲೆಯ ಹತ್ತೂರು ಹೋಬಳಿ ಯಲ್ಲೂ ತೋಟಗಳೆ ಕಾಣೆಯಾಗಿವೆ ಎಂದು ವಿವರಿಸಿರುವುದಾಗಿ ತಿಳಿಸಿದರು.

ಬ್ಯಾಂಕ್‍ಗಳು ಕಾಫಿ ಬೆಳೆಗಾರರ ಸಂಕಷ್ಟವನ್ನು ಅರ್ಥ ಮಾಡಿ ಕೊಂಡು ಅವರ ಸಾಲ ವಸೂಲಿಗೆ ಮುಂದಾಗದೆ ಬಡ್ಡಿ ಮನ್ನಾ ಮತ್ತು ಸಾಲ ವಸೂಲಿ ಮುಂದೂಡಿಕೆಗೆ ಮುಂದಾಗಬೇಕೆಂದು ಸಭೆಯಲ್ಲಿ ತಾವು ಒತ್ತಾಯಿ ಸಿದ್ದಾಗಿ ಭೋಜೇಗೌಡ ತಿಳಿಸಿದ್ದಾರೆ.

Translate »