ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಸಜ್ಜು
ಮೈಸೂರು

ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಸಜ್ಜು

September 15, 2019

ಬೆಂಗಳೂರು, ಸೆ.14(ಕೆಎಂಶಿ)- ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆಯ ವಿಳಂ ಬಕ್ಕೆ ಬೇಸತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯನವರು ಶಾಸಕಾಂಗ ಸಭೆ ಕರೆಯುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಸಮಾಲೋಚನೆಗೆಂದು ಪಕ್ಷದ ವರಿಷ್ಠರು ದೆಹಲಿಗೆ ಆಹ್ವಾನ ನೀಡಿದ್ದರೂ, ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪ್ರತಿ ಪಕ್ಷದ ಸ್ಥಾನ ಪಡೆಯಲು ಸಿದ್ದರಾಮಯ್ಯ ವಿಧಾನ ಪರಿಷತ್ತಿನ ಕೆಲವು ಸದಸ್ಯರನ್ನು ಮುಂದಿಟ್ಟು ಕೊಂಡು ದೆಹಲಿಯಲ್ಲಿ ಸೋನಿಯಾಗಾಂಧಿ ಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಸೇರಿದಂತೆ ಕೆಲವು ಮುಖಂಡರನ್ನು ಭೇಟಿ ಮಾಡಿದ್ದರು. ಸೋನಿಯಾ ಭೇಟಿಗೂ ಪ್ರಯತ್ನ ನಡೆಸಿದ್ದರು. ಅದು ಫಲಪ್ರದವಾಗಲಿಲ್ಲ. ನಿನ್ನೆ ರಾತ್ರಿ ದಿಢೀರನೇ ನಗರಕ್ಕೆ ಹಿಂತಿರುಗುತ್ತಿ ದ್ದಂತೆ ಯಾವುದೇ ಮಹತ್ವದ ರಾಜಕೀಯ ವಿದ್ಯ ಮಾನವಾಗಲೀ, ವಿಧಾನಮಂಡಲದ ಅಧಿವೇಶನ ವಾಗಲೀ ಇಲ್ಲದಿದ್ದರೂ, ಶಾಸಕಾಂಗ ಸಭೆ ಕರೆ ಯುವ ನಿರ್ಧಾರ ಕೈಗೊಂಡರು. ಸೆ.18ರಂದು ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯ ಲಿದ್ದು, ಪಕ್ಷದ ಎಲ್ಲಾ ಶಾಸಕರು ಅಂದಿನ ಸಭೆಗೆ ಹಾಜರಾಗುವಂತೆ ಸಂದೇಶ ರವಾನೆ ಮಾಡಿದ್ದಾರೆ. ರಾಜ್ಯದಲ್ಲಿ ನೆರೆಯಿಂದ ಉಂಟಾದ ಹಾನಿಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಚರ್ಚೆ ನಡೆಸುವ ಉದ್ದೇಶ ಎಂದು ಮೇಲ್ನೋ ಟಕ್ಕೆ ಹೇಳಿದ್ದರಾದರೂ, ಅಧಿಕಾರ ಪಡೆಯಲು ಈ ಸಭೆಯನ್ನೇ ಬಳಸಿಕೊಳ್ಳಲು ಮುಂದಾಗಿ ದ್ದಾರೆ. ರಾಜ್ಯದ ಹಲವಾರು ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಸರ್ಕಾರ ಒದಗಿಸಿರುವ ನೆರವು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಆಗುತ್ತಿರುವ ತಾರತಮ್ಯ ಹಾಗೂ ಅನುದಾನ ಕಡಿತದ ಬಗ್ಗೆ ಚರ್ಚಿಸುವುದಾಗಿ ಸಿದ್ದರಾಮಯ್ಯ ಸಭೆಯ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಹಾಲಿ ರಾಜ್ಯ ಸರ್ಕಾರ, ಬೆಂಗಳೂರು ನಗರದ ಶಾಸಕರಿಗೆ, ಬಿಬಿಎಂಪಿ ಸದಸ್ಯರಿಗೆ, ಹೈದರಾಬಾದ್-ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ಈ ಹಿಂದಿನ ಸರ್ಕಾರಗಳು ಮಂಜೂರು ಮಾಡಿದ ಅನುದಾನವನ್ನು ಕಡಿತ ಮಾಡಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಮರುಹಂಚಿಕೆ ಮಾಡಿದೆ. ರಾಜ್ಯದಲ್ಲಿ ನೆರೆ ಮತ್ತು ಪ್ರವಾಹದಿಂದಾಗಿ 22 ಜಿಲ್ಲೆಗಳು ಹೈರಾಣವಾಗಿವೆ. 2ನೇ ಹಂತದ ಪ್ರವಾಹದಿಂದಾಗಿ ಮುಂಬೈ ಕರ್ನಾಟಕದ ಬಹಳಷ್ಟು ಜಿಲ್ಲೆಗಳು ಸಂಕಷ್ಟಕ್ಕೀಡಾ ಗಿವೆ. ಆದರೆ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ 10 ಸಾವಿರ ರೂ.ಗಳ ತಾತ್ಕಾಲಿಕ ಪರಿಹಾರ ನೀಡಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಆರ್ಥಿಕ ನೆರವು ನೀಡಿಲ್ಲ. ಕೇಂದ್ರ ಸರ್ಕಾರವಂತೂ ನೆರೆ ಪರಿಸ್ಥಿತಿಗೆ ಒಂದು ಬಿಡಿಗಾಸು ಹಣ ಕೊಟ್ಟಿಲ್ಲ. ರಾಜ್ಯದ ಸುಮಾರು 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ. ಒಂದೆಡೆ ಅತಿವೃಷ್ಟಿಯಾದರೆ ಮತ್ತೊಂದೆಡೆ ಮಳೆಯಿಲ್ಲದೆ ಬೆಳೆಗಳು ಒಣಗಿ ಹೋಗಿವೆ. ಬಿತ್ತಿದ ಬೆಳೆಗಳು ಕಮರಿ ಹೋಗಿವೆ. ಆದರೆ ರಾಜ್ಯ ಸರ್ಕಾರ ಬರ ನಿರ್ವಹಣೆಗೂ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಈ ಬಗ್ಗೆ ಚರ್ಚಿಸಿ, ಮುಂದಿನ ಹೋರಾಟದ ಬಗ್ಗೆ ಯೋಜನೆ ರೂಪಿಸೋಣ ಎಂದು ಹೇಳಿದ್ದಾರೆ. ಇದಕ್ಕಿಂತಲೂ ಪ್ರಮುಖವಾಗಿ ರಾಜ್ಯ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆಗೆ ವರಿಷ್ಠರು ವಿಳಂಬ ಮಾಡುತ್ತಿದ್ದಾರೆ. ಸದರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯನವರು ಸತತ ಪ್ರಯತ್ನ ನಡೆಸಿದರೂ ಅದಕ್ಕೆ ಬೆಲೆ ನೀಡುತ್ತಿಲ್ಲ. ಮೂಲ ಕಾಂಗ್ರೆಸಿಗರು ವಿಪಕ್ಷ ನಾಯಕನ ಆಯ್ಕೆಗೆ ಅಡ್ಡಗಾಲಾಕಿದ್ದಾರೆ. ಹೀಗಾಗಿ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸುವ ಮೂಲಕ ತಮ್ಮ ಬಲಾಬಲವನ್ನು ಸಾಬೀತುಪಡಿಸಿ ವರಿಷ್ಠರಿಗೆ ಸಂದೇಶ ನೀಡಲು ಮುಂದಾಗಿದ್ದಾರೆ.

Translate »