`ಮಾತು ಆಡಿದರೆ ಕೆಡ್ತು- ಮುತ್ತು ಒಡೆದರೆ ಹೋಯ್ತು’ ಇತ್ತೀಚೆಗೆ ಕುಮಾರಣ್ಣನ ಮಾತಿನಿಂದ ಅವರ ಅಭಿಮಾನಿಗಳಿಗೆ ನೋವಾಗಿದೆ: ಜಿಟಿಡಿ
ಮೈಸೂರು

`ಮಾತು ಆಡಿದರೆ ಕೆಡ್ತು- ಮುತ್ತು ಒಡೆದರೆ ಹೋಯ್ತು’ ಇತ್ತೀಚೆಗೆ ಕುಮಾರಣ್ಣನ ಮಾತಿನಿಂದ ಅವರ ಅಭಿಮಾನಿಗಳಿಗೆ ನೋವಾಗಿದೆ: ಜಿಟಿಡಿ

December 12, 2019

ಮೈಸೂರು, ಡಿ.11(ಆರ್‍ಕೆಬಿ)- ಎರಡು ಬಾರಿ ಮುಖ್ಯಮಂತ್ರಿ ಮತ್ತು ಒಮ್ಮೆ ಸಂಸದರಾಗಿದ್ದ ಹೆಚ್.ಡಿ.ಕುಮಾರಸ್ವಾಮಿ, ಮಾತನಾಡುವಾಗ ಹಾಗೂ ಟ್ವೀಟ್ ಮಾಡುವಾಗ ಗಮನ ಇಡಬೇಕು. `ಮಾತು ಆಡಿದರೆ ಕೆಡ್ತು- ಮುತ್ತು ಒಡೆದರೆ ಹೋಯ್ತು’ ಎಂಬಂತೆ, ಮಾತನಾಡುವಾಗ ಹೆಚ್ಚು ನಿಗಾ ಇಡಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ.ಟಿ. ದೇವೇಗೌಡ ಸಲಹೆ ನೀಡಿದ್ದಾರೆ.

ಮೈಸೂರು ತಾಲೂಕಿನ ಜಯಪುರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ತಮ್ಮ ಬಗ್ಗೆ ಟೀಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದರು.

ಎಸ್.ಎಂ.ಕೃಷ್ಣ ಅವರು ಮಾತನ್ನೇ ಆಡುತ್ತಿರಲಿಲ್ಲ. ನೀವು ಮಾತನಾಡುವಾಗ ಹಿಂದೆ ಏನು ಮಾತನಾಡಿದ್ದಿರಿ, ಈಗ ಏನು ಮಾತನಾಡುತ್ತಿದ್ದೀರಿ ಎಂಬ ಬಗ್ಗೆ ಅರಿತು ಕೊಳ್ಳಬೇಕು. `ಕುಮಾರಣ್ಣ ಮುತ್ತಿನಂಥ ಮಾತಾಡುತ್ತಾರೆ’ ಎಂದೇ ಜನ ಭಾವಿಸಿ ದ್ದಾರೆ. ನಿಮಗಿರುವಷ್ಟು ಅಭಿಮಾನಿಗಳು ಯಾರಿಗೂ ಇಲ್ಲ. ಹೆಚ್ಚಿನ ಮಾತು ಒಳ್ಳೆಯ ದಲ್ಲ. ನಿಮ್ಮ ಇತ್ತೀಚಿನ ಮಾತುಗಳಿಂದ ನಿಮ್ಮ ಅಭಿಮಾನಿಗಳಿಗೇ ನೋವಾಗಿದೆ. ಈಗಲಾದರೂ ಯೋಚನೆ ಮಾಡಿ, ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹೆಚ್‍ಡಿಕೆಗೆ ಕಿವಿಮಾತು ಹೇಳಿದರು.

`ನಾನೇನೂ ಅವರಿಗೆ ನಮ್ಮ ಪಕ್ಷಕ್ಕೆ ಪ್ರಚಾರ ಮಾಡಿ ಎಂದು ಕೇಳಲಿಲ್ಲ. ಆದರೆ ಜೆಡಿಎಸ್‍ಗೆ ಮೋಸ ಮಾಡಿದ್ದಾರೆ. ಅನ್ಯಾಯ ಮಾಡಿ ದ್ದಾರೆ’ ಎಂದು ನನ್ನ ವಿರುದ್ಧ ಹೆಚ್‍ಡಿಕೆ ದೂರುತ್ತಿದ್ದಾರೆ. ನಾನು ಹೇಳುವುದಿಷ್ಟೆ, `ಜು.23 ರಂದೇ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು, ಸಿಎಂ ಹಾಗೂ ರಾಜ್ಯಾಧ್ಯಕ್ಷರ ಮುಂದೆಯೇ ನಾನು ಹೇಳಿ ಬಂದಿದ್ದೇನೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಪಪಡಿಸ ಬಯಸುತ್ತೇನೆ’ ಎಂದರು.

ಯಾರೇ ಬಂದರೂ ನಾನು ಹೇಳುತ್ತಿ ದ್ದುದು ಇಷ್ಟೆ. ಬಿಜೆಪಿ ಸರ್ಕಾರಕ್ಕೆ ಆಡಳಿತ ನಡೆಸುವಷ್ಟು ಬಹುಮತ ಈ ಉಪ ಚುನಾ ವಣೆಯಲ್ಲಿ ಬರುತ್ತದೆ. ಜನರು ಆಯ್ಕೆ ಮಾಡುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ರಾಜ್ಯದ ಜನರಿಗೆ ಸುಭದ್ರ ಸರ್ಕಾರ ಬೇಕಿತ್ತು. ಮತ್ತೊಂದು ಚುನಾವಣೆ ಎದುರಿಸಲು ಜನರು ತಯಾರಿರಲಿಲ್ಲ. ಇನ್ನೂ ಮೂರೂವರೆ ವರ್ಷ ಸ್ಥಿರ ಸರ್ಕಾರ ಇರಲಿ ಎಂಬ ಭಾವನೆಯಿಂದ ಜನರು ಆಶೀರ್ವದಿಸಿದ್ದಾರೆ ಎಂದರು.

ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರೂ ಹೇಳಿದ್ದಾರೆ. ಬಿಎಸ್‍ವೈ ನಾಯಕತ್ವದಲ್ಲಿ ಗೆದ್ದಿರುವ ಈಗಿನ ಶಾಸಕರು, ಮಂತ್ರಿಗಳು ಎಲ್ಲರೂ ಒಗ್ಗಟ್ಟಾಗಿ ರಾಜ್ಯದ ಅಭಿವೃದ್ಧಿ ಮಾಡಲಿ ಎಂಬುದೇ ನನ್ನ ಆಶಯ ಎಂದು ಜಿಟಿಡಿ ಹೇಳಿದರು.

ಜುಲೈ 23ರಂದು ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿದ ದಿನ ನಾನೂ ರಾಜ ಭವನಕ್ಕೆ ಹೋಗಿದ್ದೆ. ನಂತರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ಮನೆಯಲ್ಲಿ, `ಹುಣಸೂರಿನಲ್ಲಿ ನಾವೇ ಗೆಲ್ಲಬೇಕು’ ಎಂದು ಹೆಚ್.ಡಿ.ರೇವಣ್ಣ ಹೇಳಿ ದರು. ಆಗ ನಾನು, `ಯಾವುದೇ ಕಾರಣಕ್ಕೂ ನೀವು ಗೆಲ್ಲುವುದಿಲ್ಲ. ಅಲ್ಲಿ ಈಗಾಗಲೇ ಶೆಟ್ರು (ಹೆಚ್.ಪಿ.ಮಂಜುನಾಥ್) ಗೆದ್ದಾಗಿದೆ’ ಎಂದು ಹೇಳಿದ್ದೆ. ಆಗ ಸಿಎಂ ಕುಮಾರಸ್ವಾಮಿ, `ಇಲ್ಲ ಹರೀಶ್‍ಗೌಡ್ರನ್ನು ಹಾಕಿ ಗೆಲ್ಲಿಸುತ್ತೇವೆ’ ಎಂದರು. `ನಾನು ನನ್ನ ಮಗನನ್ನು ನಿಲ್ಲಿಸು ವುದಿಲ್ಲ. ನೀವು ಸಿಎಂ ಆಗಬೇಕು ಎಂಬ ಕನಸಿತ್ತು. ಚಾಮುಂಡೇಶ್ವರಿಗೂ ಪ್ರಾರ್ಥನೆ ಮಾಡಿದ್ದೆವು. ನೀವು ಸಿಎಂ ಆಗಿದ್ದೀರಿ. ನಮ ಸ್ಕಾರ, ಒಳ್ಳೆಯದಾಗಲಿ. ನಾನು ಯಾವುದ ರಲ್ಲೂ ಭಾಗಿಯಾಗುವುದಿಲ್ಲ’ ಎಂದು ಸ್ಪಷ್ಟ ವಾಗಿ ಹೇಳಿ ಬಂದಿದ್ದೆ ಎಂದು ನೆನಪಿಸಿದರು.

ವಿಶ್ವನಾಥ್ ಹಿರಿಯರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ, ನಾನು ಎಲ್ಲರೂ ಒಗ್ಗ ಟ್ಟಾಗಿ ಶ್ರಮಿಸಿ ವಿಶ್ವನಾಥ್‍ರನ್ನು ಹುಣ ಸೂರಲ್ಲಿ ಗೆಲ್ಲಿಸಿದ್ದೆವು. ನಂತರ ನಾನು ಯಾವತ್ತೂ ಹುಣಸೂರಲ್ಲಿ ಹೀಗೆ ಮಾಡ ಬೇಕು ಎಂದು ಹಸ್ತಕ್ಷೇಪ ಮಾಡಿಲ್ಲ. ಈಗ ಉಪ ಚುನಾವಣೆಯಲ್ಲೂ ವಿಶ್ವನಾಥ್ ಬಿಜೆಪಿಗೆ ಹೋಗುವ ಸಂದರ್ಭದಲ್ಲಿ ಜಿ.ಟಿ.ದೇವೇ ಗೌಡರ ಜೊತೆಗೆ ಮಾತಾಡಿಕೊಂಡೇ ಹೋಗಿ ದ್ದಾರೆ ಎಂದು ಹೆಚ್.ಡಿ.ದೇವೇಗೌಡರು ತಪ್ಪು ತಿಳಿದಿದ್ದಾರೆ. ಬಿಜೆಪಿಗೆ ಹೊಗುವ ಬಗ್ಗೆಯಾಗಲಿ, ಚುನಾವಣೆಗೆ ನಿಲ್ಲುವ ಬಗ್ಗೆಯಾಗಲಿ ವಿಶ್ವನಾಥ್ ಒಮ್ಮೆಯೂ ನನಗೆ ಹೇಳಿಕೊಂಡಿಲ್ಲ. ಅವರು ಎಂಎಲ್‍ಸಿ ಯಾಗಿ ಮಂತ್ರಿಯಾಗುತ್ತಾರೆಂದೇ ಎಲ್ಲರೂ ಹೇಳುತ್ತಿದ್ದರು. ಕೊನೆ ಕ್ಷಣದಲ್ಲಿ ಬೆಂಗ ಳೂರಿನ ನಮ್ಮ ಮನೆಗೆ ಬಂದು, `ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನ ತೆಗೆದುಕೊಂಡಿದ್ದೇನೆ’ ಎಂದರು. `ಈ ತೀರ್ಮಾನ ಏಕೆ ತೆಗೆದುಕೊಂಡಿರಿ? ಎಂಎಲ್‍ಸಿಯಾಗಿ ಮಂತ್ರಿ ಆಗಬಹುದಿ ತ್ತಲ್ಲ?’ ಎಂದು ಪ್ರಶ್ನಿಸಿದೆ. `ಇಲ್ಲ ನಾನು ನನ್ನ ಕ್ಷೇತ್ರ ಬಿಟ್ಟುಕೊಡೋಕ್ಕಾಗಲ್ಲ. ನಾನು ನಿಲ್ಲಲೇಬೇಕು ಎಂದು ಯಡಿಯೂರಪ್ಪ ಅವರಿಗೆ ಹೇಳಿ ಬಂದಿದ್ದೇನೆ. ನಾನು ನಿಲ್ಲುತ್ತಿ ದ್ದೇನೆ. ಸಹಾಯ ಮಾಡಿ’ ಎಂದು ಕೇಳಿದರು. `ನಾನು ತಟಸ್ತವಾಗಿದ್ದೇನಲ್ಲ’ ಎಂದೆ. `ಆಯಿತು’ ಎಂದು ಹೊರಟು ಹೋದರು. ಮೈಸೂರು ಮನೆಗೂ ಬಂದು ಕಾಫಿ ಕುಡಿದು ಹೋಗಿದ್ದರು ಅಷ್ಟೆ ಎಂದು ಜಿಟಿಡಿ ಹಳೆಯ ಘಟನೆಯನ್ನು ಮೆಲುಕು ಹಾಕಿದರು.

ಪಾಪ, ಹೆಚ್.ವಿಶ್ವನಾಥ್ ಅವರಿಗೆ ಹುಣಸೂರು ಕ್ಷೇತ್ರ ಹೊಸದು, ಗೆದ್ದು 14 ತಿಂಗಳಾಗಿತ್ತಷ್ಟೆ. ಆ ಕ್ಷೇತ್ರದಲ್ಲಿ ಇನ್ನೂ 4-5 ವರ್ಷ ಇದ್ದಿದ್ದರೆ ಕ್ಷೇತ್ರದ ಪೂರ್ಣ ಪರಿಚಯವಾಗುತ್ತಿತ್ತು, ಗೆಲುವು ಸುಲಭ ವಾಗುತ್ತಿತ್ತು. ಈಗ ಚುನಾವಣೆಯಲ್ಲಿ ಅವರು ಸೋತಿರಬಹುದು. ಸೋಲಿನ ಬಗ್ಗೆ ಅವರೇ ಭಿನ್ನವಾಗಿ ಮಾತನಾಡಿದ್ದಾರೆ. `ಸರ್ಕಾರ ತಂದಿದ್ದೇನೆ. ಆ ಕ್ಷೇತ್ರವೇನು, ಜಿಲ್ಲೆಯನ್ನೇ ಅಭಿವೃದ್ಧಿಪಡಿಸುವ ಶಕ್ತಿ ನನಗಿದೆ’ ಎಂದಿದ್ದಾರೆ. ಅವರು ಸೋಲಿಗೆ ಎಂದೂ ಎದೆ ಗುಂದಿಲ್ಲ. ಅಭಿವೃದ್ದಿ ಕೆಲಸ ಮಾಡಲಿ ಎಂದು ವಿಶ್ವನಾಥ್ ಅವರಿಗೆ ಜಿ.ಟಿ. ದೇವೇಗೌಡ ಶುಭ ಹಾರೈಸಿದರು.

ಹೆಚ್.ಡಿ.ರೇವಣ್ಣ, ಅವರ ಪುತ್ರ ಪ್ರಜ್ವಲ್ ಇಬ್ಬರೂ ಹುಣಸೂರಿನಲ್ಲೇ ಕ್ಯಾಂಪ್ ಮಾಡಿ ದ್ದರು. ಹೆಚ್.ಡಿ.ಕುಮಾರಸ್ವಾಮಿ 3-4 ಬಾರಿ ಬಂದು ಪ್ರಚಾರ ಮಾಡಿ ಹೋಗಿದ್ದರು. ಸಭೆ ಮಾಡಿದ್ದರು. ಹಳ್ಳಿ ಹಳ್ಳಿ ಸುತ್ತಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಆದರೆ ಜನರು ಅವರ ಪರ ತೀರ್ಮಾನ ತೆಗೆದುಕೊಳ್ಳಲಿಲ್ಲ ಎಂದು ನುಡಿದರು.

ಹರೀಶ್‍ಗೌಡನಿಗೆ ಸ್ವಾತಂತ್ರ್ಯವಿದೆ: ನನ್ನ ಮಗ ಹರೀಶ್‍ಗೌಡ ಯಾವ ಪಕ್ಷಕ್ಕೂ ಸದಸ್ಯ ನಾಗಿಲ್ಲ. ಆತನಿಗೆ ಸ್ವಾತಂತ್ರ್ಯವಿದೆ. ಎಲ್ಲಿ ಬೇಕಾದರೂ ನಿಲ್ಲಬಹುದು, ಹೇಗೆ ಬೇಕಾದರೂ ಬೆಳೆಯಬಹುದು, ನನ್ನ ಅಭ್ಯಂತರವಿಲ್ಲ ಎಂದು ಅಂದೇ ಹೇಳಿದ್ದೇನೆ. ಅವನು ಹುಣಸೂರಿನಲ್ಲಿ ಸ್ಪರ್ಧೆ ಮಾಡಿದರೆ ನಾನು ಹೊಣೆಯಲ್ಲ. ಅವನಿಗೆ ಸ್ವಾತಂತ್ರ್ಯವಿದೆ ಎಂದು ಅಂದೇ ಸ್ಪಷ್ಟ ಪಡಿಸಿದ್ದೇನೆ ಎಂದು ಹೇಳಿದರು.

ವಿಶ್ವನಾಥ್ ಸೋಲಿಗೆ ಯೋಗೇಶ್ವರ್ ಕಾರಣ
ಹೆಚ್.ವಿಶ್ವನಾಥ್ ಸೋಲಿಗೆ ಕಾರಣವೇನು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡರು, ಸಂಬಂಧವೇ ಇಲ್ಲದ ಕ್ಷೇತ್ರಕ್ಕೆ `ಇದು ನನ್ನ ಕ್ಷೇತ್ರ’ ಎಂದು ಯೋಗೇಶ್ವರ್ ಹಳ್ಳಿಗಳಿಗೆ ಹೋದಾಗ ಜನ ಓಡಿಸಿದ್ದಾರೆ. ಯೋಗೇಶ್ವರ್ ಬಂದು, ಕುಕ್ಕರ್, 30 ಸಾವಿರ ಸೀರೆ ಹಂಚಿ ಗೆಲ್ಲಬಹುದು ಎಂದು ಯಾವಾಗ ಹೊರಟರೋ ಅದುವೇ ಬಿಜೆಪಿಗೆ ಮುಳುವಾಯಿತು ಎಂದು ಫಲಿತಾಂಶವನ್ನು ವಿಶ್ಲೇಷಿಸಿದರು.

ಹರೀಶ್‍ಗೌಡ ಪ್ರಚಾರಕ್ಕೆ ಹೋಗಿರಲಿಲ್ಲ. ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್ ಬಂದು ಹೆಚ್.ಡಿ.ದೇವೇಗೌಡರು, ಜಿ.ಟಿ.ದೇವೇಗೌಡರು, ಕುಮಾರಸ್ವಾಮಿ ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಾರೆ. `ಇನ್ನು ಮುಂದೆ ನಿಮಗೆಲ್ಲಾ ನಾನೇ’ ಎಂದು ಮಾತನಾಡಲು ಯಾವಾಗ ಶುರು ಮಾಡಿದರೋ, ಆಗಲೇ ಜನ ರೊಚ್ಚಿಗೆದ್ದು, ಬಿಜೆಪಿಗೆ ವಿರುದ್ಧವಾಗಿ ಮತ ಹಾಕಿದರು. ಯೋಗೇಶ್ವರ ಬಳಸಿದ ಶಬ್ದಗಳೇ ವಿಶ್ವನಾಥ್ ಸೋಲಿಗೆ ಪ್ರಮುಖ ಕಾರಣವಾದವು ಎಂದು ಪ್ರತಿಪಾದಿಸಿದರು.

ಜಿ.ಟಿ.ದೇವೇಗೌಡರ ಅಕ್ಷೋಹಿಣಿ ಸೈನ್ಯ ನನ್ನ ಹಿಂದೆ ಇದ್ದಿದ್ದರಿಂದ ನಾನು ಗೆದ್ದೆ ಎಂದು ಹೆಚ್.ಪಿ.ಮಂಜುನಾಥ್ ಹೇಳಿದ್ದಾರಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಟಿಡಿ, ಹರೀಶ್‍ಗೌಡನನ್ನು ಚುನಾವಣೆಗೆ ನಿಲ್ಲಿಸುವಂತೆ ಹುಣಸೂರಲ್ಲಿ ಪ್ರತಿಭಟನೆ ಮಾಡಿದ್ದರು. ಹರೀಶ್‍ಗೌಡನನ್ನು ಪಕ್ಷಾತೀತ, ಜಾತ್ಯತೀತವಾಗಿ ಎಂಎಲ್‍ಎ ಮಾಡಬೇಕೆಂದು ಗುರಿ ಇಟ್ಟುಕೊಂಡಿದ್ದರು. ಇತ್ತೀಚೆಗೆ ಹರೀಶ್‍ಗೌಡ ಕ್ಷೇತ್ರಕ್ಕೆ ಹೋಗಿದ್ದ. ಅವನಿಂದ ಕಾಂಗ್ರೆಸ್‍ಗೆ ಸಹಾಯ ಆಗಿರಬಹುದು ಎಂದು ಮಾರ್ಮಿಕವಾಗಿ ಉತ್ತರಿಸಿದರು.

Translate »