ಸುಂಟಿಕೊಪ್ಪದಲ್ಲಿ ಬೆಳಗಿನ ವೇಳೆ ಬಸ್ ಸೌಲಭ್ಯಕ್ಕೆ ಮನವಿ
ಕೊಡಗು

ಸುಂಟಿಕೊಪ್ಪದಲ್ಲಿ ಬೆಳಗಿನ ವೇಳೆ ಬಸ್ ಸೌಲಭ್ಯಕ್ಕೆ ಮನವಿ

November 21, 2018

ಸುಂಟಿಕೊಪ್ಪ: ಶಾಲಾ ಕಾಲೇಜು ಮಕ್ಕಳಿಗೆ, ಸಾರ್ವಜನಿಕರಿಗೆ ಬೆಳಗಿನ ವೇಳೆ ಸಕಾಲದಲ್ಲಿ ಸರಕಾರಿ ಬಸ್ ಸಿಗದೆ ತೊಂದರೆಯಾಗುತ್ತಿದೆ ಎಂದು ನೊಂದ ಸಾರ್ವಜನಿಕರು, ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಸುಂಟಿಕೊಪ್ಪದಿಂದ ಬೆಳಿಗ್ಗೆ 8 ರಿಂದ 9.30 ಗಂಟೆಯವರೆಗೆ ಕೆಎಸ್‍ಆರ್‍ಟಿಸಿ ಸೆಟಲ್ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದೆ ಶಾಲಾ ಕಾಲೇಜು ಮಕ್ಕಳು, ಸರಕಾರಿ ಕಛೇರಿಗೆ ತೆರಳುವ ನಿತ್ಯ ಪ್ರಯಾಣಿಸುವ ಮಂದಿಗೆ ತೊಂದರೆಯಾಗುತ್ತಿದೆ. ಬಂದ ಬಸ್ಸಿನಲ್ಲಿ ನೂಕುನುಗ್ಗಲಿನಿಂದ ಪ್ರಯಾಣಿಸಬೇಕಾದ ಸಂಕಷ್ಟ ಎದುರಾಗಿದೆ.

ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿಗೆ ಸುಂಟಿಕೊಪ್ಪ ಸುತ್ತ ಮುತ್ತಲ್ಲ ಗ್ರಾಮಗಳಾದ ಭೂತನಕಾಡು, ಮತ್ತಿಕಾಡು, ನಾರ್ಗಾಣೆ, ಕೆದಕಲ್ ಹೊರೂರು, ಗರಗಂದೂರು, ಹರದೂರು, ಪನ್ಯ, ಬೆಟ್ಟಗೇರಿ, ನಾಕೂರು ಶಿರಂಗಾಲ, ಕೊಡಗರಹಳ್ಳಿ, ಹೊಸಕೋಟೆ ಶಾಲಾ ಕಾಲೇಜಿಗೆ ಹಾಗೂ ಸರಕಾರಿ ಕೆಲಸದ ನಿಮಿತ್ತ ಶಿಕ್ಷಕರು, ಅಧಿಕಾರಿಗಳು ಕುಶಾಲನಗರ ಸುಂಟಿಕೊಪ್ಪದಿಂದ ತೆರಳುತ್ತಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ 9.30 ರವರೆಗೆ ಸರಕಾರಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಶಾಲಾ ಕಾಲೇಜಿಗೆ, ಕಛೇರಿ ಕೆಲಸಕ್ಕೆ ನಿಗದಿತ ಸಮಯಕ್ಕೆ ತಲುಪಲು ಇದರಿಂದ ಸಾಧ್ಯವಾಗುತ್ತಿಲ್ಲ ಎಂದು ನೊಂದ ವಿದ್ಯಾರ್ಥಿಗಳು, ಸರಕಾರಿ ನೌಕರರು, ಸಾರ್ವಜನಿಕರು ದೂರಿದ್ದಾರೆ. ಆದುದರಿಂದ ಮಡಿಕೇರಿಯಿಂದ ಸುಂಟಿಕೊಪ್ಪಕ್ಕೆ ಹಾಗೂ ಸುಂಟಿಕೊಪ್ಪದಿಂದ ಮಡಿಕೇರಿಗೆ ಬೆಳಿಗ್ಗೆ ಸಂಜೆ ಸೆಟಲ್ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Translate »