ಮೈತ್ರಿ ಅಭ್ಯರ್ಥಿಗಳ ಬೆಂಬಲಿಸಲು ನಾಯಕ ಸಮುದಾಯಕ್ಕೆ ಮನವಿ
ಮೈಸೂರು

ಮೈತ್ರಿ ಅಭ್ಯರ್ಥಿಗಳ ಬೆಂಬಲಿಸಲು ನಾಯಕ ಸಮುದಾಯಕ್ಕೆ ಮನವಿ

April 16, 2019

ಮೈಸೂರು: ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ನಾಯಕ ಸಮುದಾಯ ಬೆಂಬಲ ನೀಡಬೇಕೆಂದು ಶಾಸಕ ಅನಿಲ್ ಚಿಕ್ಕಮಾದು ಮನವಿ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್ ವಿಜಯಶಂಕರ್ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ್ ಅವರಿಗೆ ನಾಯಕ ಸಮುದಾಯ ಬೆಂಬಲ ನೀಡಬೇಕೆಂದು ಕೋರಿದರು.

ನಾಯಕ ಜನಾಂಗದ ಪರ್ಯಾಯ ಪದಗಳಾದ ಪರಿವಾರ ಮತ್ತು ತಳವಾರವನ್ನು ಪರಿಶಿಷ್ಟ ಪಂಗಡಕ್ಕೆ ಈಗಾಗಲೇ ಸೇರಿಸಿದ್ದೇವೆ ಎಂದು ಸುಳ್ಳು ಮಾಹಿತಿ ನೀಡುವ ಮೂಲಕ ಬಿಜೆಪಿ ಸಮುದಾಯ ಮತ ಸೆಳೆಯಲು ಮುಂದಾಗಿದೆ. ಸಂಸದರಾಗಿ 4 ವರ್ಷ ಸುಮ್ಮನಿದ್ದ ಪ್ರತಾಪ್ ಸಿಂಹ ವಿಧಾನಸಭಾ ಚುನಾವಣೆ ಸಮೀಪಿಸಿದಾಗ ಪರಿವಾರ ಮತ್ತು ತಳವಾರ ವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶ್ರಮಿಸುತ್ತಿರುವಂತೆ ಕೇವಲ ಪ್ರದರ್ಶನ ನೀಡಿದರು. ಅದು ಬಿಟ್ಟರೆ ಈ ವಿಚಾರದಲ್ಲಿ ಇವರ ಕೊಡುಗೆ ಶೂನ್ಯ ಎಂದು ಆರೋಪಿಸಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಮಾತನಾಡಿ, ಪರಿವಾರ ಮತ್ತು ತಳವಾರವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಸಂಬಂಧ ಅನೇಕರು ಶ್ರಮಿಸಿದ್ದಾರೆ. ಆದರೆ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಕೊಡುಗೆ ಇದರಲ್ಲೇನೂ ಇಲ್ಲ. ಸೇರ್ಪಡೆ ಸಂಬಂಧ 2004ರಲ್ಲಿ ಅಂದಿನ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾ ರಕ್ಕೆ ಕುಲಶಾಸ್ತ್ರೀಯ ಅಧ್ಯಯನ ಮಾಡಿ ವರದಿ ಸಲ್ಲಿಸಲು ಪತ್ರ ರವಾನಿಸಲಾಗಿರುತ್ತದೆ. ಆದರೆ ಅಂದಿನ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದರ ವಿರುದ್ಧ ಅಂದು ವಿಧಾನ ಪರಿಷತ್ ಸದಸ್ಯರಾಗಿದ್ದ ಎಸ್.ಚಿಕ್ಕಮಾದು, ವಿ.ಎಸ್.ಉಗ್ರಪ್ಪ ಪರಿ ಷತ್ತಿನಲ್ಲಿ ದನಿ ಎತ್ತಿದ್ದರು ಎಂದರು. ಕೇಂದ್ರದ ಬಿಜೆಪಿ ತನ್ನ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ 3 ಬಾರಿ ಲೋಕಸಭಾ ಅಧಿವೇಶನ ನಡೆದಿದ್ದರೂ ಈ ಬಗ್ಗೆ ಗಮನ ಹರಿಸಲಿಲ್ಲ. ಕೊನೆಯ ಅಧಿವೇಶನದ ಕೊನೆ ದಿನ ರಾಜ್ಯ ಸಭೆಗೆ ಮಾತ್ರ ಮಂಡಿಸಿದ್ದು, ಈ ವಿಷಯ ಕೇವಲ ಸ್ವೀಕೃತವಾಗಿದೆಯೇ ಹೊರತು ಅನುಮೋದನೆ ಆಗಿಲ್ಲ. ಇನ್ನು ಲೋಕಸಭೆಯಲ್ಲಿ ಈ ವಿಷಯ ಮಂಡಿಸಿಯೇ ಇಲ್ಲ ಎಂದು ಕಿಡಿಕಾರಿದರು. ಶ್ರೀರಾಂ ಪುರ ಗ್ರಾಪಂ ಅಧ್ಯಕ್ಷೆ ಚೂಡಾಮಣಿ, ಸಮುದಾಯದ ಮುಖಂಡ ದ್ಯಾವಪ್ಪನಾಯಕ, ಕಾಂಗ್ರೆಸ್ ಮುಖಂಡ ಕೃಷ್ಣ ನಾಯಕ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »