ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಅನಿವಾರ್ಯ  ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದನೆ
ಮೈಸೂರು

ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಅನಿವಾರ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದನೆ

March 7, 2020

ಬೆಂಗಳೂರು, ಮಾ.6(ಕೆಎಂಶಿ)-ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಇರಲೇ ಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಶುಕ್ರವಾರ ಪ್ರತಿಪಾದಿಸಿದರು. ಸಂವಿಧಾನದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಅವರು, ಸಂವಿಧಾನ ರಚನೆಯಾದ 10 ವರ್ಷಗಳಲ್ಲಿ ತಳಸಮುದಾಯಗಳಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ ನ್ಯಾಯ ದೊರೆಯುತ್ತದೆ ಎಂದು ಡಾ. ಅಂಬೇಡ್ಕರ್ ಅವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹತ್ತು ವರ್ಷ ಗಳಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ನ್ಯಾಯ ದಲಿತ ಸಮುದಾಯಕ್ಕೆ ದೊರೆಯಲಿಲ್ಲ. ಹೀಗಾಗಿ ಅಂಬೇಡ್ಕರ್ ಅವರ ನಿರೀಕ್ಷೆ ಈಡೇರಲಿಲ್ಲ ಎಂದರು.

ಆದರೆ ಅಂಬೇಡ್ಕರ್ ಅವರೇ ಒಂದು ಕಡೆ, ಎಲ್ಲಿಯವರೆಗೆ ಈ ದೇಶದಲ್ಲಿ ಜಾತಿಯ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೆ ಮೀಸಲಾತಿಯ ಅಗತ್ಯವೂ ಇದೆ ಎಂದು ಹೇಳಿದ್ದಾರೆ. ರಾಜಕೀಯ, ಸಾಮಾಜಿಕ, ಆರ್ಥಿಕ ನ್ಯಾಯ ದೊರೆಯುತ್ತದೆ ಎಂದು ಡಾ. ಅಂಬೇಡ್ಕರ್ ಅವರು ಭಾವಿಸಿದ್ದೇನೋ ಸರಿ. ಆದರೆ ಅದು ಈಡೇರಲಿಲ್ಲ. ಜಾತಿ ವ್ಯವಸ್ಥೆ ಮಾತ್ರ ಉಳಿಯಿತು. ಹೀಗಾಗಿ ಮೀಸಲಾತಿ ಸೌಲಭ್ಯವನ್ನು ಒದಗಿಸಲೇಬೇಕಾದ ಸ್ಥಿತಿ ಇದೆ ಎಂದರು. ಸಂವಿಧಾನದ ಆಶಯದಂತೆ ಈ ದೇಶದಲ್ಲಿ ರಾಜಕೀಯ ನ್ಯಾಯ ಒಂದು ಮಟ್ಟದಲ್ಲಾದರೂ ಸಿಕ್ಕಿದೆ. ಇದರ ಫಲವಾಗಿ ಎಲ್ಲ ಸಾಂವಿಧಾನಿಕ ಸಂಸ್ಥೆಗಳಲ್ಲಿ ಪರಿಶಿಷ್ಟರು ಆಯ್ಕೆಯಾಗಿ ಬರುತ್ತಿದ್ದಾರೆ ಎಂದರು. ಶೋಷಿತರಿಗೆ ರಾಜಕೀಯ ನ್ಯಾಯ ಸಿಕ್ಕಿದರೂ ಸಾಮಾಜಿಕ, ಆರ್ಥಿಕ ನ್ಯಾಯ ಸಿಕ್ಕಿಲ್ಲ.ಎಲ್ಲಿಯವರೆಗೆ ಇದು ಸಿಗುವುದಿಲ್ಲವೋ ಅಲ್ಲಿಯವರೆಗೆ ಸಂವಿಧಾನದ ಆಶಯಗಳು ಪೂರ್ಣವಾಗಿ ಈಡೇರಿದಂತಲ್ಲ ಎಂದರು. ಇಂದಿಗೂ ಶೇಕಡಾ ಎಪ್ಪತ್ತರಷ್ಟು ಹಳ್ಳಿಗಳಲ್ಲಿ ಜಾತಿ ವ್ಯವಸ್ಥೆ ಉಳಿದಿದೆ. ಇದು ನಿವಾರಣೆಯಾಗಬೇಕು. ಹಾಗೆಯೇ ಮೀಸಲಾತಿಯ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಇದು ಬೇಕಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸೋಮವಾರವೂ ಸಂವಿಧಾನ ಸಂಬಂಧ ಚರ್ಚೆ ನಿರ್ಧಾರ

ಬೆಂಗಳೂರು, ಮಾ.6(ಕೆಎಂಶಿ)- ಸಂವಿಧಾನದ ಮೇಲಿನ ಚರ್ಚೆಯನ್ನು ಸೋಮವಾರವೂ ಮುಂದುವರೆಸಲು ವಿಧಾನಸಭೆಯಲ್ಲಿ ನಿರ್ಧರಿಸಲಾಗಿದೆ.

ವಿಧಾನಮಂಡಲದಲ್ಲಿ ಮಾ.2ರಿಂದ ಆರಂಭದ ಮೊದಲ ಎರಡು ದಿನ ಸಂವಿ ಧಾನದ ಮೇಲಿನ ಚರ್ಚೆಯಾಗಬೇಕು, ಮಾ.5ರಂದು ಬಜೆಟ್ ಮಂಡನೆಯಾಗ ಬೇಕು ಎಂಬ ವೇಳಾಪಟ್ಟಿ ನಿಗದಿಯಾಗಿತ್ತು. ಆದರೆ ಆರಂಭದ ಎರಡು ದಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕುರಿತಂತೆ ಯತ್ನಾಳ್ ನೀಡಿದ್ದ ಅವಹೇಳನ ಕಾರಿ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಧರಣಿ ನಡೆಸಿತ್ತು. ಆನಂತರ ಮಾ.4ರಂದು ಇದ್ದಕ್ಕಿದ್ದಂತೆ ಧರಣಿ ಕೈಬಿಟ್ಟು ಚರ್ಚೆಯಲ್ಲಿ ಭಾಗವಹಿಸಿತ್ತು.

ಒಂದು ದಿನ ಮಾತ್ರ ಸಂವಿಧಾನದ ಮೇಲಿನ ಚರ್ಚೆಯಾಗಿತ್ತು. ನಿನ್ನೆ ಬಜೆಟ್ ಮಂಡನೆ ಬಳಿಕ ಇಂದು ಮತ್ತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸಂವಿಧಾನದ  ಮೇಲಿನ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಬಹಳಷ್ಟು ಮಂದಿ  ಚರ್ಚೆಯಲ್ಲಿ ಭಾಗವಹಿಸಲು ಆಸಕ್ತಿ ವಹಿಸಿರುವುದರಿಂದ ಸಮಯ ಅವಕಾಶ ಸಾಲುವುದಿಲ್ಲ ಎಂಬ ಒತ್ತಾಯ ಕೇಳಿಬಂದಿತು. ಹಾಗಾಗಿ ಚರ್ಚೆಗೆ ಮತ್ತೆ ಒಂದು ದಿನ ಸಮಯ ವಿಸ್ತರಣೆ ಮಾಡುವಂತೆ  ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್ ಶಿವಲಿಂಗೇಗೌಡ ಸೇರಿದಂತೆ ಹಲವಾರು ಮಂದಿ ಶಾಸಕರು ಆಗ್ರಹಿಸಿದರು.

ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಇದಕ್ಕೆ ಬೆಂಬಲ ನೀಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಸಹಮತ ವ್ಯಕ್ತಪಡಿಸಿದ್ದರಿಂದ ಚರ್ಚೆಯನ್ನು ಸೋಮವಾರವೂ ಮುಂದುವರೆಸುವುದಾಗಿ ಸಭಾಧ್ಯಕ್ಷರೂ ಹೇಳಿದರು. ಹೊಸ ಪ್ರಯೋಗಗಳನ್ನು ಜನ ಸ್ವಾಗತಿಸುತ್ತಾರೆ, ಬೆಂಬಲ ನೀಡುತ್ತಾರೆ ಎಂಬುದಕ್ಕೆ ಎಲ್ಲ ಶಾಸಕರು ಚರ್ಚೆಯಲ್ಲಿ ಭಾಗವಹಿಸಲು ತೋರಿಸುತ್ತಿರುವ ಆಸಕ್ತಿಯೇ ಉದಾಹರಣೆ ಎಂದು ಕಾಗೇರಿ ಹೇಳಿದರು.

 

 

Translate »