ಬೆಂಗಳೂರು, ಮಾ.6(ಕೆಎಂಶಿ)- ವ್ಯಾಪಕ ಭ್ರಷ್ಟಾಚಾರ ತಡೆಗೆ ಚುನಾವಣಾ ಆಯೋಗದಿಂದ ಮದ್ದು ಎಂದು ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ವಿಧಾನಸಭೆಯಲ್ಲಿ ಶುಕ್ರವಾರ ಅಭಿಪ್ರಾಯಿಸಿದ್ದಾರೆ. ಸಂವಿಧಾನ ವಿಷಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾರ್ವತ್ರಿಕ ಚುನಾವಣೆಯಾಗಲೀ, ವಿಧಾನಸಭಾ ಉಪ ಚುನಾವಣೆ ಯಲ್ಲಾಗಲೀ, 30ರಿಂದ 40 ಕೋಟಿ ರೂ. ವೆಚ್ಚವಾಗುತ್ತಿದೆ.
ಅಮೆರಿಕದ ಮಾದರಿ ಚುನಾವಣೆ ನಡೆಸಿದರೆ ಯಾವುದೇ ಅಭ್ಯರ್ಥಿ ಹೊರೆಯಿಲ್ಲದೆ, ಜನಮನ್ನಣೆ ಇರುವವರು ವಿಧಾನಸಭೆ ಇಲ್ಲವೆ ಲೋಕಸಭೆ ಪ್ರವೇಶಿಸಬಹುದು. ನಾವು ಕೆಲಸ ಮಾಡದಿದ್ದರೆ, ಜನರೇ ಬಂದು ಕಿವಿ ಹಿಂಡುತ್ತಾರೆ. ಈಗ ಅವರು, ಕೇಳುವ ಹಕ್ಕನ್ನೇ ಕಳೆದುಕೊಂಡು ಬಿಟ್ಟಿದ್ದಾರೆ. ಶೇ.76ರಷ್ಟು ಮಂದಿ ಲಂಚ ನೀಡಿ, ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದರೆ ಭ್ರಷ್ಟಾಚಾರ ಎಲ್ಲಿಗೆ ಮುಟ್ಟಿದೆ ಎಂಬುದು ತಿಳಿಯಬೇಕಾಗಿದೆ. ಶೇಷನ್ ಮಾದರಿಯಲ್ಲಿ ಆಯೋಗ ಕೆಲವು ಕಠಿಣ ತೀರ್ಮಾನಗಳನ್ನು ತೆಗೆದುಕೊಂಡು, ಚುನಾವಣಾ ಪದ್ಧತಿ ಬದಲಾವಣೆ ಮಾಡಿದರೆ, ಭ್ರಷ್ಟಾಚಾರವನ್ನು ಶೇ.80ರಷ್ಟಾದರೂ ಕಡಿಮೆ ಮಾಡಬಹುದು. ಚುನಾವಣಾ ಆಯೋಗದ ನೀತಿ ಬಿಗಿಯಿಲ್ಲದಿರುವುದೇ ಈ ಭ್ರಷ್ಟಾಚಾರಕ್ಕೆ ಎಡೆಮಾಡಿದೆ, ನಾವು ಚುನಾವಣಾ ಸಂದರ್ಭದಲ್ಲಿ ಮಾಡುವ ವೆಚ್ಚವನ್ನು ಎಲ್ಲಿಂದ ಭರಿಸಬೇಕು. ಮತ್ತೆ ಚುನಾವಣೆ ಎದುರಿಸಲು ಹಣ ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.
ಸಂವಿಧಾನದಲ್ಲಿ ಈ ಎಲ್ಲಾ ಅಂಶಗಳಿವೆ. ಆದರೆ ಅವುಗಳನ್ನು ಒಳಗೊಂಡು ಕಾನೂನು ತರಬೇಕಿರುವುದು ಸಂಬಂಧಪಟ್ಟ ಸಂಸ್ಥೆಗಳ ಹೊಣೆಗಾರಿಕೆ. ಇತ್ತೀಚೆಗೆ ನಡೆದ ರಾಜ್ಯದ ಉಪಚುನಾವಣೆಗಳಲ್ಲಿ ಕೆಲ ಅಭ್ಯರ್ಥಿಗಳು 40ರಿಂದ 60 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಈ ಹಣ ಎಲ್ಲಿಂದ ಬಂತು. ಪ್ರಧಾನಿ ಮೋದಿ ಅವರಿಗೆ ಸಂಸತ್‍ನಲ್ಲಿ ಸಂಪೂರ್ಣ ಬಲವಿದೆ. ಅವರು ಮನಸ್ಸು ಮಾಡಿದರೆ, ಚುನಾವಣಾ ನೀತಿ ಬದಲಿಸಿ, ಭ್ರಷ್ಟಾಚಾರ ತೊಡೆದು ಹಾಕಲು ಗಟ್ಟಿ ನಿಲುವು ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.