ಸಿಐಡಿ ತನಿಖೆಗೆ ಕಂದಾಯ ಇಲಾಖೆ ನೌಕರರ ಆಗ್ರಹ
ಮೈಸೂರು

ಸಿಐಡಿ ತನಿಖೆಗೆ ಕಂದಾಯ ಇಲಾಖೆ ನೌಕರರ ಆಗ್ರಹ

December 25, 2018

ಮೈಸೂರು: ರಾಯಚೂರಲ್ಲಿ ಮರಳು ಮಾಫಿಯಾಕ್ಕೆ ಬಲಿಯಾದ ಗ್ರಾಮ ಲೆಕ್ಕಿಗ ಸಾಹೇಬ್ ಪಟೇಲ್ ಅವರ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮೈಸೂರು ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘದ ವತಿಯಿಂದ ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಗ್ರಾಮಲೆಕ್ಕಿಗ ಸಾಹೇಬ್ ಪಟೇಲ್, ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಅಕ್ರಮ ಮರಳು ಸಾಗಾಣಿಕೆದಾರರು ಲಾರಿ ಹರಿಸಿ ಹತ್ಯೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಂಶಯಗಳಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಮಾಡಿದರು. ಇದೊಂದು ಹೇಯಕೃತ್ಯ. ಕರ್ತವ್ಯದ ವೇಳೆ ಸಾವನ್ನಪ್ಪುವ ಪೊಲೀಸ್ ಸಿಬ್ಬಂದಿಗೆ ವಿಶೇಷ ಪರಿಹಾರ ನೀಡುವ ಮಾದರಿಯಲ್ಲಿ ಸಾಹೇಬ್ ಪಟೇಲ್ ಕುಟುಂಬಕ್ಕೆ ಹೆಚ್ಚಿನ ಪರಿಹಾರವನ್ನು ಸರ್ಕಾರ ನೀಡಲು ಶಿಫಾರಸ್ಸು ಮಾಡುವಂತೆ ಕೋರಿದರು. ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟುವ ವೇಳೆ ಕಂದಾಯ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಹಲ್ಲೆ ಹಾಗೂ ದೌರ್ಜನ್ಯ ನಡೆಯುತ್ತಿವೆ. ಹೀಗಾಗಿ ನಿರ್ಭಿತಿಯಿಂದ ಕರ್ತವ್ಯ ನಿರ್ವಹಿಸಲು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ ತಡೆಗಟ್ಟುವ ಸಂಬಂಧ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ರೂಪಿಸಲು ಶಿಫಾರಸ್ಸು ಮಾಡುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಚೇರಿ ಸಹಾಯಕ ಜಾನ್ಸನ್ ಜಿಲ್ಲಾಧಿಕಾರಿಗಳ ಪರವಾಗಿ ಮನವಿ ಪತ್ರ ಸ್ವೀಕರಿಸಿದರು. ಸಂಘದ ಅಧ್ಯಕ್ಷ ಬಿ.ಕೆ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ರವಿಚಂದ್ರ, ಜಂಟಿ ಕಾರ್ಯದರ್ಶಿ ಕುಮಾರಸ್ವಾಮಿ, ಮೈಸೂರು ಜಿಲ್ಲಾ ಗ್ರಾಮಲೆಕ್ಕಿಗರ ಸಂಘದ ಭಾಸ್ಕರ್ ಮತ್ತಿತರರು ಹಾಜರಿದ್ದರು.

Translate »