ಉತ್ತರ ಕರ್ನಾಟಕದಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು
ಮೈಸೂರು

ಉತ್ತರ ಕರ್ನಾಟಕದಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು

August 10, 2019

ಬೆಳಗಾವಿ,ಆ.9- ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಲೇ ಇದ್ದು, ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಜಲಾವೃತವಾಗಿರುವ ಗ್ರಾಮಗಳಲ್ಲಿ ಸಂಕಷ್ಟದಲ್ಲಿ ಸಿಲುಕಿರುವವ ರನ್ನು ರಕ್ಷಿಸುವ ಕಾರ್ಯವನ್ನು ಎನ್‍ಡಿ ಆರ್‍ಎಫ್ ಮತ್ತು ಸ್ಥಳೀಯ ಆಡಳಿತದ ಸಿಬ್ಬಂದಿ ಅವಿಶ್ರಾಂತವಾಗಿ ನಡೆಸುತ್ತಲೇ ಇದ್ದಾರೆ.

ಇದೆಲ್ಲದರ ನಡುವೆ ಸಾವಿರಾರು ಮಂದಿ ನಿರಾಶ್ರಿತರ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯ ಗಳಲ್ಲಿ ದಿನದೂಡುತ್ತಾ ಪರಿತಪಿಸುತ್ತಿದ್ದಾರೆ. ಯಾವಾಗ ಮಳೆ ನಿಲ್ಲುವುದೋ, ಯಾವಾಗ ತಮ್ಮ ಮನೆ ಸೇರಿಕೊಳ್ಳುತ್ತೇವೋ ಎಂದು ಹಪಾಹಪಿಸುತ್ತಿದ್ದಾರೆ. ಈ ಮಧ್ಯೆ, ಎನ್‍ಡಿ ಆರ್‍ಎಫ್ ರಕ್ಷಣಾ ತಂಡದವರು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಹ ದಲ್ಲಿ ಸಿಲುಕಿದ್ದ 44 ಮಂದಿಯನ್ನು ಶುಕ್ರ ವಾರ ಬೆಳಿಗ್ಗೆ ವೇಳೆಗೆ ರಕ್ಷಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಹಾಲೊಳ್ಳಿ ಮತ್ತು ರೂಗಿ ಗ್ರಾಮಗಳಲ್ಲಿ 13 ಮಂದಿ, ಗೋಕಾಕ ತಾಲೂಕಿನ ಉದಿಗಟ್ಟಿ ಗ್ರಾಮದ 7 ಮಂದಿ, ರೋನಿಯಲ್ಲಿನ 6 ಹಾಗೂ ಬೆಳಗಾವಿ ಜಿಲ್ಲೆ ಮುಧೋಳ ತಾಲೂಕಿನ ಗಿರ್ದಲದಿಮ್ ಗ್ರಾಮದಲ್ಲಿ ಒಬ್ಬನನ್ನು ಎನ್‍ಡಿಆರ್‍ಎಫ್ ನವರು ಹೆಲಿಕಾಪ್ಟರ್ ಮೂಲಕ ರಕ್ಷಿಸಿದ್ದಾರೆ. ಈ ಜನರು ಕಳೆದ 3 ದಿನಗಳಿಂದ ಪ್ರವಾ ಹಕ್ಕೆ ಸಿಲುಕಿದ್ದರು. ಮುಖ್ಯಮಂತ್ರಿ ಯಡಿ ಯೂರಪ್ಪ ಶುಕ್ರವಾರವೂ ಬೆಳಗಾವಿಯ ಮುಧೋಳ, ಗೋಕಾಕ ತಾಲೂಕುಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಕೆಲವು ಪರಿಹಾರ ಶಿಬಿರಗಳಿಗೆ ಖುದ್ದು ಭೇಟಿ ನೀಡಿ ಸಂತ್ರಸ್ತರ ಅಹವಾಲು, ಕುಂದು ಕೊರತೆ ಆಲಿಸಿ ಸಮಾಧಾನ ಹೇಳಿದರು. ಯಾರೂ ಭಯಗೊಳ್ಳಬೇಕಾದ ಅಗತ್ಯವಿಲ್ಲ. ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಧೈರ್ಯ ತುಂಬಿದರು.

ಇಂದು ಕರಾವಳಿಗೆ ಸಿಎಂ: ಬಳಿಕ ಸುದ್ದಿ ಗಾರರ ಜತೆ ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ 6381 ಕುಟುಂಬಗಳನ್ನು ಸುರ ಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸರ್ಕಾರ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಸಾಕಷ್ಟು ಮೂಲಸೌಕರ್ಯಗಳನ್ನು ಒದಗಿ ಸಿದೆ. ಜಾನುವಾರುಗಳಿಗೂ ಮೇವು, ನೀರು ಒದಗಿಸಲಾಗಿದೆ. ಉತ್ತರ ಕರ್ನಾಟಕ ಜಿಲ್ಲೆ ಗಳಲ್ಲಿನ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ರಾಜ್ಯದ ದಕ್ಷಿಣ ಭಾಗದಲ್ಲಿ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿಯೂ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಶನಿವಾರ ಅಲ್ಲಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಲಿದ್ದೇನೆ ಎಂದರು.

ರಾತ್ರಿಯಿಡೀ ಜೀವ ಕೈಲಿ ಹಿಡಿದು ಕುಳಿತಿ ದ್ದರು: ಗದಗದ ಬೆಣ್ಣೆಹಳ್ಳ ಅಚ್ಚುಕಟ್ಟು ಪ್ರದೇಶ ದಲ್ಲಿ ಪ್ರವಾಹ ಎದುರಾಗಿದ್ದು, ನರಗುಂದ ತಾಲೂಕಿನ ಸುರಕೊಡ ಗ್ರಾಮ ಜಲ ದಿಗ್ಭಂಧನದಲ್ಲಿದೆ. ಪ್ರವಾಹದಲ್ಲಿ ಸಿಲುಕಿದ ಗ್ರಾಮಸ್ಥರನ್ನು ರಕ್ಷಿಸಲು ಕ್ವಿಕ್ ರೆಸ್ಪಾಂಡಿಂಗ್ ಟೀಂ ಆಗಮಿಸಿದ್ದು, 2 ಬೋಟ್‍ಗಳ ಮೂಲಕ ರಕ್ಷಣಾ ಕಾರ್ಯ ನಡೆಸಿದ್ದಾರೆ. ನರಗುಂದ ತಾಲೂಕಿನ ಕೊಣ್ಣೂರು ಗ್ರಾಮ ನಡುಗಡ್ಡೆ ಯಂತಾಗಿದ್ದು, 20ಕ್ಕೂ ಹೆಚ್ಚು ಯುವಕರು ಪ್ರವಾಹದಲ್ಲಿ ಸಿಲುಕಿದ್ದಾರೆ. ಯುವಕರನ್ನು ರಕ್ಷಿಸುವಂತೆ ಮನವಿ ಮಾಡುತ್ತಿದ್ದರೂ ಜಿಲ್ಲಾಡಳಿತ ಓಆಖಈ ತಂಡ ಇನ್ನೇನು ಬರುತ್ತದೆ ಎಂದೇ ಕಾಲ ದೂಡುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕ, ಕರಾವಳಿ ಜಿಲ್ಲೆಗಳಲ್ಲಿ ರೆಡ್ ಆಲರ್ಟ್
ಬೆಂಗಳೂರು, ಆ.9- ರಾಜ್ಯದಲ್ಲಿನ 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಗಂಭೀರ ವಾಗಿದ್ದು, ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ರೆಡ್ ಆಲರ್ಟ್ ಘೋಷಿಸಿದೆ.

Translate »