ರಸ್ತೆ ಸಂಚಾರ ಸಮೀಕ್ಷೆ ಆರಂಭ
ಮೈಸೂರು

ರಸ್ತೆ ಸಂಚಾರ ಸಮೀಕ್ಷೆ ಆರಂಭ

February 21, 2019

ಮೈಸೂರು: ಲೋಕೋಪಯೋಗಿ ಇಲಾಖೆಯಿಂದ 2019-20ನೇ ಸಾಲಿನ 2 ದಿನಗಳ ರಸ್ತೆ ಸಂಚಾರ ಸಮೀಕ್ಷಾ ಕಾರ್ಯ ಇಂದಿನಿಂದ ಆರಂಭವಾಗಿದೆ.

ಇಲಾಖೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಮೈಸೂರು, ನಂಜನ ಗೂಡು ಹಾಗೂ ತಿ.ನರಸೀಪುರ ತಾಲೂಕುಗಳ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 137 ಕಡೆ ಟೆಂಟ್ ಹಾಕಿಕೊಂಡು ಪ್ರತೀ ಕೇಂದ್ರ ಗಳಲ್ಲಿ ಇಬ್ಬರು ಗಣತಿಕಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆ ರಸ್ತೆಗಳಲ್ಲಿ ಸಂಚರಿ ಸುವ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಕಾರು, ವ್ಯಾನು, ಟ್ರಕ್, ಲಾರಿ, ಬಸ್ಸು ಹಾಗೂ ಇನ್ನಿತರ ವಾಹನಗಳನ್ನು ಗಣತಿದಾರರು ಲೆಕ್ಕ ಹಾಕಿಕೊಂಡು ದಾಖಲಿಸಿಕೊಳ್ಳುವರು 115 ಸಂಪರ್ಕ ರಸ್ತೆಗಳು, 22 ರಾಜ್ಯ ಹೆದ್ದಾರಿಗಳು ಮೈಸೂರು ವಿಭಾಗದಲ್ಲಿದ್ದು, ಎಲ್ಲೆಡೆ ಬೆಳಿಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ ಸಮೀಕ್ಷೆ ಮಾಡಲಾಗುತ್ತಿದೆ.

2 ದಿನ ನಡೆಯುವ ಸಮೀಕ್ಷೆ ಪೈಕಿ ಕ್ರೋಢಿಕರಿಸಿ 1 ದಿನಕ್ಕೆ ಆ ರಸ್ತೆಯಲ್ಲಿ ಸರಾಸರಿ ಎಷ್ಟು ವಾಹನಗಳು ಸಂಚರಿಸುತ್ತವೆ ಎಂಬ ವರದಿ ತಯಾರಿಸುವ ಲೋಕೋಪಯೋಗಿ ಇಲಾಖೆಯು, ಸರ್ಕಾರಕ್ಕೂ ಮಾಹಿತಿ ನೀಡಲಿದೆ. ಪ್ರತೀ ವರ್ಷ ಕೈಗೊಳ್ಳುವ ರಸ್ತೆ ಕಾಮಗಾರಿ ವೇಳೆ ಈ ಸಮೀಕ್ಷಾ ವರದಿಯನ್ನು ಆಧಾರವಾಗಿರಿಸಿಕೊಂಡು ರಸ್ತೆ ಹೇಗಿರಬೇಕೆಂಬ ವಿನ್ಯಾಸ ತಯಾರಿಸಲಾಗುತ್ತದೆ. ಯಾವ ಬಗೆಯ ಎಷ್ಟೆಷ್ಟು ವಾಹನಗಳು ಆ ರಸ್ತೆಯಲ್ಲಿ ಓಡಾಡುತ್ತವೆ ಎಂಬುದರ ಮೇಲೆ ಆ ರಸ್ತೆ ಯನ್ನು ಹೇಗೆ ಅಭಿವೃದ್ಧಿಪಡಿಸಬೇಕೆಂಬುದನ್ನು ಲೋಕೋಪಯೋಗಿ ಇಲಾಖೆ ಯೋಜನೆ ರೂಪಿಸಲು ಈ ಸಮೀಕ್ಷೆ ಸಹಕಾರಿಯಾಗಲಿದೆ.

ರಸ್ತೆ ಸಂಚಾರ ಸಮೀಕ್ಷೆ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಇಂದಿನಿಂದ ಆರಂಭವಾಗಿದ್ದು, ನಾಳೆ (ಫೆ.21) ರಾತ್ರಿ ಅಂತ್ಯಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »