3.30 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳ್ಳುತ್ತಿದೆ ತಿ.ನ.ಪುರದ ಪುರಾತನ ಶ್ರೀ ಅಗಸ್ತ್ಯೇಶ್ವರ ದೇವಾಲಯ
ಮೈಸೂರು

3.30 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳ್ಳುತ್ತಿದೆ ತಿ.ನ.ಪುರದ ಪುರಾತನ ಶ್ರೀ ಅಗಸ್ತ್ಯೇಶ್ವರ ದೇವಾಲಯ

October 29, 2019

ಮೈಸೂರು, ಅ.28-ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ಪುರಾತನ ದೇವಾಲಯ, ಪ್ರವಾಸಿ ತಾಣ ಹಾಗೂ ಪಾರಂಪರಿಕ ಕಟ್ಟಡ ಮತ್ತು ಸ್ಮಾರಕಗಳು ದೇಶ-ವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಅವುಗಳನ್ನು ಸಂರಕ್ಷಿಸಿ ನಿರ್ವಹಣೆ ಮಾಡುವ ಜತೆಗೆ ಅಭಿವೃದ್ಧಿಗೊಳಿಸುವುದು ಜಿಲ್ಲಾಡಳಿ ತಕ್ಕೆ ಸವಾಲಾಗಿದೆ. ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ಮೂಲ ಸ್ವರೂಪಕ್ಕೆ ಧಕ್ಕೆ ಯಾಗದಂತೆ ಈ ಪುರಾತನ ಸ್ಮಾರಕಗಳನ್ನು ಪುನರು ಜ್ಜೀವನಗೊಳಿಸಿ ಸಂರಕ್ಷಿಸಲು ಮುಂದಾಗಿವೆ.

ಮೈಸೂರು ಜಿಲ್ಲೆಯ ತಿ.ನರಸೀಪುರವೆಂದು ಕರೆ ಯುವ ತಿರಮಕೂಡಲು ನರಸೀಪುರವು ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರ (ಹೊರಗಡೆ ಕಾಣ ದಿರುವ)ಗಳ ಪವಿತ್ರ ಸಂಗಮ. ಈ ಧಾರ್ಮಿಕ ಸ್ಥಳದಲ್ಲಿ ರುವ ಶ್ರೀ ಅಗಸ್ತ್ಯೇಶ್ವರ ದೇವಾಲಯದ ಸಂರಕ್ಷಣಾ ಕಾರ್ಯವನ್ನು ಪ್ರವಾಸೋದ್ಯಮ ಇಲಾಖೆ ಅನುದಾನ ದಡಿ ಕೈಗೆತ್ತಿಕೊಳ್ಳಲಾಗಿದೆ. 330 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಆರಂಭವಾಗಿರುವ ಕಾಮಗಾರಿಯನ್ನು ಅನಂತ ರಾಜು ಎಂಬ ಗುತ್ತಿಗೆದಾರರು ನಡೆಸುತ್ತಿದ್ದು, ಈಗಾಗಲೇ ಶೇ.50ರಷ್ಟು ಕೆಲಸ ಪೂರ್ಣಗೊಂಡಿದೆ. ದೇವಾಲಯದ ಸುತ್ತಲಿನ ಸಾಲು ಗುಡಿಗಳ ತಳಪಾಯ ಭದ್ರಗೊಳಿ ಸಲು ಮೈಸೂರಿನ ಎನ್‍ಐಇ ಸಂಸ್ಥೆಯು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿನ್ಯಾಸ ಒದಗಿಸಿದೆ.

ಸುತ್ತಲಿನ ಗೋಡೆಗಳನ್ನು ಆದಿಸ್ಥಾನದ ಮೇಲೆ ಪುನರ್ ನಿರ್ಮಿಸಿ ಮೇಲ್ಛಾವಣಿ ಹಾಕಲಾಗುತ್ತಿದೆ. ಅದಕ್ಕೆ ಹವಾ ನಿಯಂತ್ರಿತ ಪದರ ಅಳವಡಿಸಿ ಉಳಿದಂತೆ ಮೂಲ ದೇವಾಲಯದ ಹೊರಭಾಗದ ವೀನರ್ ಗೋಡೆಯಲ್ಲಿ ಕುಸಿತ ಉಂಟಾಗಿದ್ದ ಕಾರಣ ಅದನ್ನು ತೆಗೆದು ತಳಪಾಯವನ್ನು ಭದ್ರಪಡಿಸಿ ಸಂರಕ್ಷಿಸಲಾಗಿದೆ.

ಈಗ ಹವಾನಿಯಂತ್ರಣ ಪದರ ಅಳವಡಿಸಿರುವ ಕಾಮ ಗಾರಿ ಪ್ರಗತಿಯಲ್ಲಿದೆ. ದೇವಾಲಯಕ್ಕೆ ಅಗತ್ಯವಿರುವ ಗ್ರಾನೈಟ್ ಕಲ್ಲುಗಳನ್ನು ಚಿಕ್ಕಬಳ್ಳಾಪುರದಿಂದ ತರಿಸಿ ನಯಗೊಳಿಸಲಾಗುತ್ತಿದೆ. ಪಾರಂಪರಿಕತೆ ಬಗ್ಗೆ ನೈಪುಣ್ಯ ಹೊಂದಿರುವ ಇಂಜಿನಿಯರ್‍ಗಳು ಹಾಗೂ ಕೆಲಸಗಾರರು ಶ್ರೀ ಅಗಸ್ತ್ಯೇಶ್ವರ ದೇವಾಲಯದ ಪುನರುಜ್ಜೀವನ ಕಾಮಗಾರಿಯಲ್ಲಿ ನಿರತರಾಗಿದ್ದು, 2020ರ ಮಾರ್ಚ್ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಉದ್ದೇ ಶಿಸಲಾಗಿದೆ. ಯಂತ್ರಗಳನ್ನು ಬಳಸದೇ ಮಾನವ ಸಂಪ ನ್ಮೂಲಗಳಿಂದ ಕೆಲಸ ಭರದಿಂದ ನಡೆಯುತ್ತಿರುವುದ ರಿಂದ ಈ ಸೂಕ್ಷ್ಮ ಕೆಲಸವು ನಿಧಾನಗತಿಯಲ್ಲಿ ಸಾಗು ತ್ತಿದೆ. ಮೂಲ ಪಾರಂಪರಿಕ ವಿನ್ಯಾಸವನ್ನು ಉಳಿಸಿ ಕೊಂಡು ಈ ಪ್ರಾಚೀನ ದೇವಸ್ಥಾನದ ಪುನರುಜ್ಜೀವನ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಪಾರಂ ಪರಿಕ ಆಯುಕ್ತ ಟಿ. ವೆಂಕಟೇಶ್ ತಿಳಿಸಿದ್ದಾರೆ.

ಇತಿಹಾಸ: ದಕ್ಷಿಣ ಭಾರತದ ಪ್ರಯಾಗ ಎಂದೂ ಕರೆಯಲ್ಪಡುವ ಶ್ರೀ ಅಗಸ್ತ್ಯೇಶ್ವರ ದೇವಾಲಯದ ಐತಿಹ್ಯಗಳ ಪ್ರಕಾರ, ಅಗಸ್ತ್ಯ ಮಹರ್ಷಿಯು ಹನು ಮಂತನಿಗೆ ನರ್ಮದಾ ನದಿಯಿಂದ ಒಂದು ಶಿವ ಲಿಂಗವನ್ನು ತರುವಂತೆ ಅಜ್ಞಾಪಿಸಿದ್ದರು ಎಂದು ಹೇಳಲಾಗಿದೆ. ಆದರೆ ಹನುಮಂತ ಹಿಂತಿರುಗಿ ಬರು ವುದು ತಡವಾದುದರಿಂದ ಕೋಪಗೊಂಡ ಅಗಸ್ತ್ಯ ಮುನಿಯು ಮರಳಿನಿಂದಲೇ ಒಂದು ಲಿಂಗವನ್ನು ಮಾಡಿ ಅದನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿದರು. ಆದ್ದರಿಂದಲೇ ಈ ಶಿವಲಿಂಗ ಅಗಸ್ತ್ಯೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧಿಯಾಯಿತು.

ದ್ರಾವಿಡ ಮಾದರಿಯ ದೇವಾಲಯದ ಗರ್ಭ ಗುಡಿಯು ಗಂಗರ ಅಥವಾ ಚೋಳರÀ ಕಾಲದ್ದಾಗಿದ್ದು, ನಂತರದಲ್ಲಿ ಹೋಯ್ಸಳ, ವಿಜಯನಗರ ಮತ್ತು ಪಾಳೆಯ ಗಾರರ ಆಳ್ವಿಕೆಯಲ್ಲಿ ದೇವಸ್ಥಾನದ ಇತರ ಭಾಗಗಳು ಸೇರಿಸಲ್ಪಟ್ಟವು ಗರ್ಭಗುಡಿ, ಅಂತರಾಳ, ನವರಂಗ ಮತ್ತು ಮುಖಮಂಟಪಗಳಿರುವ ಈ ದೇವಾಯಲವು ಎದುರಿನಲ್ಲಿ ದೀಪಸ್ತಂಬವನ್ನು ಹೊಂದಿದೆ.

ಮುಮ್ಮಡಿ ಕೃಷ್ಣರಾಜ ಒಡೆಯರ್ ಮತ್ತು ಬ್ರಿಟೀಷ್ ಅಧಿಕಾರಿಗಳನ್ನೊಳಗೊಂಡ ವರ್ಣಚಿತ್ರಗಳು, ಸುಂದರ ಶಿಲ್ಪಗಳು, ಸುಬ್ರಹ್ಮಣ್ಯ, ಗಣಪತಿ, ಮಹಿಷಮರ್ಧಿನಿ, ದುರ್ಗಿ, ವಿಷ್ಣು, ದಕ್ಷಿಣಾಮೂರ್ತಿ ಹಾಗೂ ದ್ವಾರಪಾಲ ಕರ ಶಿಲ್ಪಗಳು ನೋಡುಗರ ಮನ ಸೆಳೆಯುತ್ತಿವೆ.

ಎಸ್.ಟಿ.ರವಿಕುಮಾರ್

Translate »