ಮೈಸೂರು, ಮಾ.1(ಪಿಎಂ)- ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಚಿತ್ರ ಕಲಾವಿದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ಅವರು ರಚಿಸಿದ ವಿಶ್ವ ವಿಖ್ಯಾತ ವಿಜ್ಞಾನಿಗಳ ರೇಖಾಚಿತ್ರಗಳ ಪ್ರದರ್ಶನ ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಭಾನುವಾರ ನಡೆಯಿತು. ಸರ್ ಸಿ.ವಿ.ರಾಮನ್, ಅಬ್ದುಲ್ ಕಲಾಂ, ಜಿ.ಮಾಧವನ್ ನಾಯರ್ ಸೇರಿದಂತೆ ದೇಶ-ವಿದೇಶದ ಒಟ್ಟು 65 ವಿಜ್ಞಾನಿಗಳ ರೇಖಾಚಿತ್ರಗಳು ಪ್ರದರ್ಶನದಲ್ಲಿದ್ದವು. ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನ ವೀಕ್ಷಿಸಲು ಉಚಿತ ಪ್ರವೇಶವಿತ್ತು. ಮಹಾರಾಣಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಲಿಂಗಯ್ಯ ಪ್ರದರ್ಶನ ಉದ್ಘಾಟಿಸಿದರು. ಮಹಾರಾಣಿ ಪಿಯು ಕಾಲೇಜು ಉಪನ್ಯಾಸಕ ಎನ್.ಮಹೇಶ್‍ಕುಮಾರ್, ಇನ್ಫೊಸಿಸ್ ಇಂಜಿನಿಯರ್ ಕೆ.ಎಸ್.ಮೋಹನ್‍ಬಾಬು, ಚಿತ್ರ ಕಲಾವಿದ ಯು.ಜಿ.ಮೋಹನ್ ಕುಮಾರ್ ಆರಾಧ್ಯ, ಉಪನ್ಯಾಸಕರಾದ ವಾಸುಕಿ, ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.