ಮೈಸೂರು,ಮಾ.8(ವೈಡಿಎಸ್)-ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಪ್ರದರ್ಶನಗೊಂಡ `ನಿಲುಕದ ನಕ್ಷತ್ರ’ ವಿಜ್ಞಾನ ನಾಟಕವನ್ನು ಜನರು ಮುಗಿಬಿದ್ದು ವೀಕ್ಷಿಸಿದರು.
ಮೈಸೂರು ವಿಜ್ಞಾನ ನಾಟಕೋತ್ಸವ ಸಮಿತಿ ಭಾನುವಾರ ಪ್ರಸ್ತುತಪಡಿಸಿದ ಭದ್ರಪ್ಪ ಶಿ.ಹೆನ್ಲಿ ರಚನೆಯ ಪ್ರಶಾಂತ್ ಮೈಸೂರ್ ನಿರ್ದೇಶನದ `ನಿಲುಕದ ನಕ್ಷತ್ರ’ ವಿಜ್ಞಾನ ನಾಟಕದಲ್ಲಿ ಮೊದಲಿಗೆ ವಿದ್ಯಾರ್ಥಿಗಳು ಶಾಲೆಯಲ್ಲಿ ಜಗಳವಾಡುತ್ತಿರುತ್ತಾರೆ. ಅಷ್ಟರಲ್ಲಿ ಶಾಲೆಗೆ ಬಂದ ಶಿಕ್ಷಕರು, ಗದರಿಸಿದಾಗ ಎಲ್ಲರೂ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಶಿಕ್ಷಕರು, ಶ್ರೀನಿವಾಸ ರಾಮಾನುಜನ್ ಎಂಬ ವಿದ್ಯಾರ್ಥಿ ಯನ್ನು ಎಲ್ಲೋ ಟೋಪಿ? ಎಂದು ಪ್ರಶ್ನಿಸಿ ದಾಗ, ಗಾಳಿಗೆ ಹಾರಿಹೋಯಿತೆಂದು ಉತ್ತರಿ ಸುತ್ತಾನೆ. ಸರಿ, ನಾನು ಕೆಲ ಪ್ರಶ್ನೆಗಳನ್ನು ಕೇಳುತ್ತೇನೆ ಉತ್ತರಿಸಬೇಕೆಂದು ಗುರುಗಳು, ನನ್ನ ಬಳಿ 10 ಮಾವಿನ ಹಣ್ಣುಗಳಿದ್ದು, ಅವುಗಳನ್ನು 10 ಜನರಿಗೆ ಹಂಚಿದರೆ ಎಷ್ಟು ಹಣ್ಣುಗಳು ಬರುತ್ತವೆ? ಎಂದು ಪ್ರಶ್ನಿಸುತ್ತಾರೆ. ಆಗ ಶ್ರೀನಿವಾಸ, ತಲಾ ಒಂದೊಂದು ಎಂದು ಉತ್ತರಿಸುತ್ತಾನೆ.
ನಂತರದಲ್ಲಿ ಗುರುಗಳು, ನನ್ನ ಬಳಿ 25 ನಾಣ್ಯಗಳಿದ್ದು, 25 ಜನರಿಗೆ ಹಂಚಿದರೆ ಒಬ್ಬೊಬ್ಬರಿಗೆ ಎಷ್ಟು ನಾಣ್ಯಗಳು ಬರುತ್ತವೆ ಎಂದಾಗ, ಶ್ರೀನಿವಾಸ ಎದ್ದುನಿಂತು ತಲಾ 1 ಎಂದು ಉತ್ತರಿಸುತ್ತಾನೆ. ಬಳಿಕ ಶ್ರೀನಿವಾಸ್ ಎದ್ದು ನಿಂತು ಗುರುಗಳೇ ನನ್ನದೊಂದು ಪ್ರಶ್ನೆಯಿದೆ. ಆಗ ಗುರುಗಳು ಇನ್ನೂ ಪಾಠ ವನ್ನೇ ಆರಂಭಿಸಿಲ್ಲ ಆಗಲೇ ಪ್ರಶ್ನೆಯೇ? ಅದೇನು ಹೇಳಪ್ಪ ಎನ್ನುತ್ತಾರೆ. ಆಗ ಶ್ರೀನಿವಾಸ್, ಸೊನ್ನೆಯಿಂದ ಸೊನ್ನೆ ಭಾಗಿಸಿದರೆ ಏನು ಉತ್ತರ ಬರುತ್ತದೆ. ಆಗ ಗುರುಗಳು, ಏಯ್ ರಾಮಾನುಜ ಯಾರೋ ಹೇಳಿಕೊಟ್ಟಿದ್ದು ಇಂಥ ಪ್ರಶ್ನೇನಾ? ಇವತ್ತಿನ ಪಾಠಕ್ಕೂ ಈ ಪ್ರಶ್ನೆಗೂ ಸಂಬಂಧವಿಲ್ಲ ಕುಳಿತುಕೋ, ಎನ್ನುವ ಮೂಲಕ ಶಿಕ್ಷಕರು ಪೇಚಿಗೆ ಸಿಲುಕಿದ ಪ್ರಸಂಗ ಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದವು.
ನಾಟಕದ ಸಾರಾಂಶ, 19ನೇ ಶತಮಾನದ ಕೊನೆಯಲ್ಲಿ ತಮಿಳುನಾಡಿನ ಕುಂಬ ಕೋಣಂನಲ್ಲಿ ಅಯ್ಯಂಗಾರಿ ಕುಟುಂಬದಲ್ಲಿ ಜನಿಸಿದ ರಾಮಾನುಜನ್, ಹುಟ್ಟಿನಿಂದಲೇ ಗಣಿತದ ಬಗ್ಗೆ ಅಪಾರ ಜ್ಞಾನ ಪಡೆದಿರುತ್ತಾನೆ. ಚಿಕ್ಕಂದಿನಲ್ಲಿಯೇ ಕುಂಬಕೋಣಂ ದೇವಳದ ಅಂಗಳದಲ್ಲಿರುವ ಕಲ್ಲುಗಳ ಮೇಲೆ ಬಳಪ ದಿಂದ ಗೀಚುತ್ತಿರುತ್ತಾನೆ. ಈತನ ಪ್ರತಿಭೆಯನ್ನು ಕಂಡ ಇಂಗ್ಲೆಂಡ್ನ ಕೇಂಬ್ರಿಜ್ ಯೂನಿವ ರ್ಸಿಟಿಯ ಪ್ರೊ.ಹಾರ್ಡಿ ಅವರು, ತನ್ನ ಗೆಳೆಯ ಲಿಟಲ್ವುಡ್ನ ಜೊತೆಗೂಡಿ ರಾಮಾನುಜನ್ಗೆ ಗಣಿತದಲ್ಲಿ ಉತ್ತಮ ತರಬೇತಿ ನೀಡುತ್ತಾರೆ. ನಂತರದಲ್ಲಿ ಆತ ಗಣಿತ ತಜ್ಞರೇ ಆಶ್ಚರ್ಯ ಪಡುವಂತೆ ಬೆಳೆಯುತ್ತಾರೆ. ಆದರೆ, ರಾಮಾ ನುಜನ್ 32ನೇ ವಯಸ್ಸಿನಲ್ಲೇ ಕ್ಷಯ ರೋಗದಿಂದ ಸಾವನ್ನಪ್ಪುವ ಸನ್ನಿವೇಶಗಳು ಪ್ರೇಕ್ಷಕರ ಕಣ್ಣುಗಳನ್ನು ಒದ್ದೆಯಾಗಿಸಿದವು.
ಮೆಟ್ಟಿಲಲ್ಲಿ ಕುಳಿತರು: ಭಾನುವಾರ ರಜಾ ದಿನವಾದ್ದರಿಂದ ನಾಟಕವನ್ನು ವೀಕ್ಷಿ ಸಲು ಕುಟುಂಬದೊಂದಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಜನರು ಆಗಮಿಸಿದ್ದರಿಂದ ಕುಳಿತು ಕೊಳ್ಳಲು ಆಸನಗಳಿಲ್ಲದೆ ಮೆಟ್ಟಿಲುಗಳ ಮೇಲೆ ಕುಳಿತು ವೀಕ್ಷಿಸಿದರು.