ಹುಲಿ ಪತ್ತೆಗಾಗಿ ಶೋಧ ಕಾರ್ಯಾಚರಣೆ
ಕೊಡಗು

ಹುಲಿ ಪತ್ತೆಗಾಗಿ ಶೋಧ ಕಾರ್ಯಾಚರಣೆ

July 5, 2018

ಮಡಿಕೇರಿ: ಮೀನುಕೊಲ್ಲಿ ಮೀಸಲು ಅರಣ್ಯದಂಚಿನ ಗ್ರಾಮಸ್ಥರು ಸಾಕಿದ್ದ ಹಸುಗಳನ್ನು ಭೇಟೆಯಾಡಿ ಆತಂಕ ಸೃಷ್ಟಿಸಿರುವ ಹುಲಿಯ ಚಲನವಲನ ಕುರಿತು ಮಾಹಿತಿ ಸಂಗ್ರಹಿಸಲು ಅರಣ್ಯಾಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಕಳೆದ ಹತ್ತು ದಿನಗಳ ಹಿಂದೆ ಮೀನುಕೊಲ್ಲಿ ರಕ್ಷಿತ ಅರಣ್ಯದಂಚಿನಲ್ಲಿರುವ ಪೊನ್ನತ್ ಮೊಟ್ಟೆ ನಿವಾಸಿ ರಾಬರ್ಟ್ ಎಂಬವರ ಹಸುವನ್ನು ಬಲಿ ಪಡೆದಿದ್ದ ಹುಲಿ, ಚಿಕ್ಲಿ ಹೊಳೆಯ ಸಂಪರ್ಕ ರಸ್ತೆಯಲ್ಲಿ ನಾಗರಾಜ್ ಎಂಬುವರಿಗೆ ಸೇರಿದ ಹಸುವನ್ನು ಕೊಂದು ಹಾಕಿ ಕಳೆಬರವನ್ನು ಇನ್ನೂರು ಮೀಟರ್ ದೂರಕ್ಕೆ ಎಳೆದೊಯ್ದು ಕಂಬಿಬಾಣೆ ಮತ್ತು ರಂಗಸಮುದ್ರ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಹಾಕಿತ್ತು.

ಹಸುವಿನ ಕಳೆಬರ ಹಾಕಿರುವ ರಸ್ತೆ ಬದಿಯಲ್ಲೇ ಹುಲಿಯು ಸಂಚರಿಸುತ್ತಿರುವುದನ್ನು ಜನರು ಗಮನಿಸಿದ್ದಾರೆ. ಈ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚರಿಸುವುದರೊಂದಿಗೆ ಪ್ರವಾಸಿತಾಣ ಚಿಕ್ಲಿಹೊಳೆಗೆ ಆಗಮಿಸುವ ಪ್ರವಾಸಿಗರು ಇದೇ ರಸ್ತೆಯ ಮೂಲಕ ತೆರಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಡಿಎಫ್‍ಓ ಹಾಗೂ ಆರ್​ಎಫ್​ಓ ಮಾರ್ಗದರ್ಶನದಲ್ಲಿ, ಮೀನು ಕೊಲ್ಲಿ ವಿಭಾಗದ ಡಿಆರ್​ಎಫ್​ಓ ಬಾನಂಡ ದೇವಿಪ್ರಸಾದ್ ನೇತೃತ್ವದಲ್ಲಿ ಮಾಲ್ದಾರೆಯ ಆರ್.ಆರ್.ಟಿ ತಂಡದೊಂದಿಗೆ ರಸ್ತೆಯಲ್ಲಿ ಗಸ್ತು ನಡೆಸಿದ್ದಾರೆ.

Translate »