ಎರಡನೇ ಆಷಾಢ ಶುಕ್ರವಾರ: ಸಹಸ್ರಾರು ಭಕ್ತರಿಂದ ತಾಯಿ ಚಾಮುಂಡೇಶ್ವರಿ ದರ್ಶನ
ಮೈಸೂರು

ಎರಡನೇ ಆಷಾಢ ಶುಕ್ರವಾರ: ಸಹಸ್ರಾರು ಭಕ್ತರಿಂದ ತಾಯಿ ಚಾಮುಂಡೇಶ್ವರಿ ದರ್ಶನ

July 13, 2019

ಮೈಸೂರು,ಜು.12(ಎಂಟಿವೈ)- ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಡ ಮಾಸದ ಎರಡನೇ ಶುಕ್ರವಾರವಾದ ಇಂದು ಮುಂಜಾನೆಯಿಂದಲೇ ನಡೆದ ವಿಶೇಷ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ನಾಡದೇವಿಯ ದರ್ಶನ ಪಡೆದರು.

ಚಾಮುಂಡೇಶ್ವರಿ ದೇವಾಲಯದಲ್ಲಿ ಮುಂಜಾನೆ 3 ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್ ಹಾಗೂ ದೇವಿ ಪ್ರಸಾದ್ ನೇತೃತ್ವದಲ್ಲಿ ನಾಡದೇವಿ ಚಾಮುಂಡೇಶ್ವರಿ ತಾಯಿಗೆ ಮಹನ್ಯಾಸಪೂರ್ವ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ತ್ರಿಪದಿ, ಸಹಸ್ರ ನಾಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಜರುಗಿದವು. ಮಹಾಮಂಗಳಾರತಿ ಬೆಳಗಿದ ನಂತರ ಮುಂಜಾನೆ 5.30ಕ್ಕೆ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಬೆಳಿಗ್ಗೆ 9.30ಕ್ಕೆ ಪ್ರಾಕಾರೋತ್ಸವ ನಡೆಸಿ, ಗರ್ಭಗುಡಿ ಹಾಗೂ ಗರುಡಗಂಭದ ಸುತ್ತಲೂ ನಾಡದೇವಿಯ ಮೂರ್ತಿಯನ್ನು ಉತ್ಸವದಲ್ಲಿ ಕೊಂಡೊಯ್ಯ ಲಾಯಿತು. ಬಳಿಕ ಮಹಾಮಂಗಳಾರತಿ ಮಾಡಲಾಯಿತು. ಈ ವೇಳೆ ಪೊಲೀಸ್ ಪೇದೆ ಯೊಬ್ಬರು ಗೌರವ ಸೆಲ್ಯೂಟ್ ನೀಡಿದರು. ಸಂಜೆ 6ರಿಂದ 7.30ರವರೆಗೆ ಅಭಿಷೇಕ ನೆರವೇರಿಸಲಾಯಿತು. ರಾತ್ರಿ 10ಗಂಟೆಯವರೆಗೂ ಭಕ್ತರು ದೇವಾಲ ಯಕ್ಕೆ ತೆರಳಿ ವಿವಿಧ ಆಭರಣಗಳಿಂದ ಕಂಗೊಳಿಸುತ್ತಿದ್ದ ಆಧಿಶಕ್ತಿ ಯನ್ನು ಕಣ್ತುಂಬಿಕೊಂಡು ಪುಳಕಗೊಂಡರು.

ಮುಂಜಾನೆಯಿಂದಲೇ ಆಗಮನ: ತುಂತುರು ಹನಿ, ಕೊರೆವ ಚಳಿ, ಬಿರುಸಾಗಿ ಬೀಸುತ್ತಿದ್ದ ತಂಗಾಳಿಯ ನಡುವೆಯೂ ಮುಂಜಾನೆ 2 ಗಂಟೆಯಿಂದಲೇ ಮೆಟ್ಟಿಲು ಗಳ ಮೂಲಕ ಕಾಲ್ನಡಿಗೆಯಲ್ಲಿ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದರು. ಖಾಸಗಿ ವಾಹನಗಳಲ್ಲಿ ಬಂದಿದ್ದ ಭಕ್ತರು ಹೆಲಿಪ್ಯಾಡ್ ಆವರಣದಲ್ಲಿ ತಮ್ಮ ತಮ್ಮ ವಾಹನಗಳನ್ನು ನಿಲ್ಲಿಸಿ ಜಿಲ್ಲಾಡಳಿತದ ವತಿಯಿಂದ ವ್ಯವಸ್ಥೆ ಮಾಡಿದ್ದ ಉಚಿತ ಬಸ್ ಮೂಲಕ ಬೆಟ್ಟಕ್ಕೆ ತೆರಳಲು ಕಾದು ಕುಳಿತಿದ್ದರು. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದಿಂದಲೂ ಖಾಸಗಿ ವಾಹನಗಳಲ್ಲಿ ಮದ್ಯ ರಾತ್ರಿಯೇ ಆಗಮಿಸಿದ ನೂರಾರು ಭಕ್ತರು ಹೆಲಿಪ್ಯಾಡ್‍ನಲ್ಲಿ ಬಸ್ಸಿಗಾಗಿ ಕಾಯ್ದರು. ಉಚಿತ ಬಸ್ ಸೇವೆ ಮುಂಜಾನೆ 4 ಗಂಟೆ ಯಿಂದ ಆರಂಭ ವಾಯಿತು. ರಾತ್ರಿ 8 ಗಂಟೆವರೆಗೂ ಉಚಿತ ಬಸ್ ಸೇವೆ ಒದಗಿಸಲಾಗಿತ್ತು.

ಮೆಟ್ಟಿಲಿಗೆ ಪೂಜೆ: ಅವಿವಾಹಿತ ಯುವತಿಯರು, ಮಕ್ಕಳಾಗದೆ ಇರುವ ಮಹಿಳೆಯರು ಹಾಗೂ ಅನಾರೋಗ್ಯ ಸೇರಿದಂತೆ ವಿವಿಧ ಸಂಕಷ್ಟದಲ್ಲಿ ಸಿಲುಕಿರುವ ಮಹಿಳೆಯರು ಇಂದು ಮೆಟ್ಟಿಲು ಹತ್ತುವ ಮೂಲಕ ಹರಕೆ ತೀರಿಸಿದರು. ಬೆಟ್ಟದ ಪಾದದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೊದಲ ಮೆಟ್ಟಿಲಿನಿಂದ ಕೊನೆಯ ಮೆಟ್ಟಿಲು ಗಳವರೆಗೆ ಪ್ರತಿಯೊಂದು ಮೆಟ್ಟಿಲುಗಳಿಗೂ ಅರಿಶಿನ-ಕುಂಕುಮ ಹಚ್ಚಿ, ದೀಪ ಮತ್ತು ಗಂಧದ ಕಡ್ಡಿಯಲ್ಲಿ ಬೆಳಗುವ ಮೂಲಕ ಇಷ್ಟಾರ್ಥಸಿದ್ಧಿಗೆ ಪ್ರಾರ್ಥಿಸಿದರು. ಮುಂಜಾನೆ ಯಿಂದ ಸಂಜೆಯವರೆಗೂ ಹರಕೆ ಹೊತ್ತ ಮಹಿಳೆಯರು, ಯುವತಿಯರು ಮೆಟ್ಟಿಲು ಪೂಜೆ ಮಾಡಿದರು. ಇದಲ್ಲದೆ ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿ ಯರು ತಂಡೋಪ ತಂಡವಾಗಿ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಿ ಸಂಭ್ರಮಿಸಿದರು.

ಹೆಚ್ಚುವರಿ ಬಸ್ ವ್ಯವಸ್ಥೆ: ಹೆಲಿ ಪ್ಯಾಡ್‍ನಿಂದ ಚಾಮುಂಡಿಬೆಟ್ಟಕ್ಕೆ ಭಕ್ತರನ್ನು ಕರೆದೊಯ್ಯಲು ಜಿಲ್ಲಾಡಳಿತ 22ಕ್ಕೂ ಹೆಚ್ಚು ಉಚಿತ ಬಸ್ ವ್ಯವಸ್ಥೆಯನ್ನು ಮಾಡಿತ್ತು. ಇದರೊಂದಿಗೆ ನಗರ ಬಸ್ ನಿಲ್ದಾಣದಿಂದ 10 ವೋಲ್ವೋ ಬಸ್, 35 ಸಾಮಾನ್ಯ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಪ್ರತಿ ಐದು ನಿಮಿಷಕ್ಕೊಂದು ಬಸ್ ಚಾಮುಂಡಿ ಬೆಟ್ಟಕ್ಕೆ ಹೊರಡುವ ವ್ಯವಸ್ಥೆ ಮಾಡಿತ್ತು.

ಬಿಗಿ ಪೊಲೀಸ್ ಬಂದೋಬಸ್ತ್: ಅಧಿಕ ಸಂಖ್ಯೆಯಲ್ಲಿ ಭಕ್ತರು ಏಕಕಾಲಕ್ಕೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸರ ಗಳ್ಳರು, ಜೇಬುಗಳ್ಳರ ಕೃತ್ಯಕ್ಕೆ ಬ್ರೇಕ್ ಹಾಕಲು ಮಫ್ತಿಯಲ್ಲಿ ಪೊಲೀಸರ ಗಸ್ತು ಆಯೋಜಿ ಸಲಾಗಿತ್ತು. ಮಹಿಷಾಸುರ ಪ್ರತಿಮೆಯಿಂದ ದೇವಾಲಯದ ಸುತ್ತಲೂ ಆಯ್ದ ಸ್ಥಳಗಳಲ್ಲಿ 7 ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಉಪ ಠಾಣೆಯಲ್ಲಿ ದೊಡ್ಡ ಪರದೆ ಮೇಲೆ ಸಿಸಿ ಕ್ಯಾಮರಾದ ದೃಶ್ಯವನ್ನು ಸೂಕ್ಷ್ಮವಾಗಿ ಪರಿಶೀಲಿ ಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ದಾಸೋಹ ಭವನದಲ್ಲಿ ಪ್ರಸಾದ: ದಾಸೋಹ ಭವನದಲ್ಲಿ ತಮಿಳುನಾಡಿನ ಕೊಯಮತ್ತೂರಿನ ದುರ್ಗಾ ಏಜೆನ್ಸಿ ವತಿಯಿಂದ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಇಂದು ಬೆಳಿಗ್ಗೆ 5.30ಕ್ಕೆ ಪ್ರಾರಂಭವಾದ ಅನ್ನಸಂತರ್ಪಣೆ ರಾತ್ರಿ 7.30 ರವರೆಗೂ ನಡೆಯಿತು. ಇದಕ್ಕಾಗಿ ದಾಸೋಹ ಭವನದ ನೆಲ ಮಹಡಿಯಲ್ಲಿ 10 ಹಾಗೂ ಮೊದಲ ಮಹಡಿಯಲ್ಲಿ 10 ಕೌಂಟರ್ ತೆರೆಯಲಾಗಿತ್ತು.

ಭಕ್ತರಿಂದಲೂ ವಿತರಣೆ: ಹರಕೆ ಹೊತ್ತಿದ್ದ ಭಕ್ತರು ಆಟೋ ಮತ್ತು ಟೆಂಪೋ ಗಳ ಮೂಲಕ ಭಕ್ತರಿಗೆ ಮಹಿಷಾಸುರ ಪ್ರತಿಮೆ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ಬಿಸಿಬೇಳೆ ಬಾತ್, ಸಿಹಿ, ಖಾರಾ ಪೆÇಂಗಲ್, ಕೇಸರಿಬಾತ್ ಹಂಚಿದರು. ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುವ ಭಕ್ತರಿಗೂ ಕೆಲವೆಡೆ ಪ್ರಸಾದ ವಿನಿಯೋಗಿ ಸಲಾಯಿತು. ದಾಸೋಹ ಭವನದಲ್ಲಿ ಪ್ರಸಾದ ವಿತರಿಸಲು ತಯಾರಿಸಿದ್ದ ಪ್ರಸಾದ ಹಾಗೂ ಹರಕೆ ಹೊತ್ತ ಭಕ್ತರು ತಂದಿದ್ದ ಪ್ರಸಾದದ ಸ್ಯಾಂಪಲ್ ಅನ್ನು ಜಿಲ್ಲಾ ಆರೋಗ್ಯಾಧಿಕಾರಿ ಗಳು ಪರೀಕ್ಷೆ ಮಾಡಿದ ಬಳಿಕವಷ್ಟೇ ಪ್ರಸಾದ ವಿನಿಯೋಗಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಇನ್ನಿತರರು ದೇವಾಲಯಕ್ಕೆ ಬೇಟಿ ನೀಡಿ, ದೇವಿಯ ದರ್ಶನ ಪಡೆದರು.

 

Translate »