ಕೆ.ಆರ್.ಆಸ್ಪತ್ರೆಯಲ್ಲಿ ಮರೆಗುಳಿ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್: ಎಸ್.ಎ.ರಾಮದಾಸ್
ಮೈಸೂರು

ಕೆ.ಆರ್.ಆಸ್ಪತ್ರೆಯಲ್ಲಿ ಮರೆಗುಳಿ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್: ಎಸ್.ಎ.ರಾಮದಾಸ್

September 22, 2019

ಮೈಸೂರು,ಸೆ.21(ಎಂಟಿವೈ)- ಮರೆಗುಳಿ ಸಮಸ್ಯೆಗೆ ತುತ್ತಾದವ ರಿಗೆ ಸೂಕ್ತ ಚಿಕಿತ್ಸೆ ನೀಡಲು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ಮೈಸೂರು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಆಲ್ಜಿಮಿರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಘಟಕ ವಿಶ್ವ ಮರೆಗುಳಿ ದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ `ಮೆಮೋರಿ ವಾಕ್’ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾ ಡಿದ ಅವರು, 1908ರಲ್ಲಿ ಮೊದಲ ಬಾರಿಗೆ ಮರೆಗುಳಿ ಸಮಸ್ಯೆ ಓರ್ವ ಮಹಿಳೆಯಲ್ಲಿ ಕಾಣಿಸಿಕೊಂಡಿತು. ಅದನ್ನು ಗಂಭೀರವಾಗಿ ಪರಿಗಣಿಸಿದ ಡಾ.ಅಲ್ಜಿಮಿರ್ ಸಂಶೋಧನೆ ಕೈಗೊಂಡು ಚಿಕಿತ್ಸೆ ಕಂಡು ಹಿಡಿಯಲು ಪ್ರಯತ್ನಿಸಿದರು. ಇದುವರೆಗೂ ಶಾಶ್ವತ ಚಿಕಿತ್ಸೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‍ಓ) ಭಾರತೀಯ ಚಿಕಿತ್ಸಾ ಪದ್ಧತಿಯಾದ ಆಯು ರ್ವೇದ ಹಾಗೂ ಯೋಗದ ಮೂಲಕ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದೆಂದು ಉಲ್ಲೇಖಿಸಿದೆ. ಪ್ರತಿ ವರ್ಷ 10 ಲಕ್ಷ ಜನರು ಮರೆಗುಳಿ ಸಮಸ್ಯೆಗೆ ಸಿಲುಕುತ್ತಿದ್ದಾರೆ ಎಂದು ವಿಷಾದಿಸಿದರು.

ಆಲ್ಜಿಮಿರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಘಟಕ ಮರೆಗುಳಿ ಸಮಸ್ಯೆಗೆ ತುತ್ತಾದವರಿ ಗಾಗಿ ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸುವಂತೆ ಮನವಿ ಮಾಡಿದೆ. ಆದರೆ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆಗೆ ಹೆಚ್ಚು ಸಮಯ ಬೇಕಾಗುವುದನ್ನು ಮನಗಂಡು ಶೀಘ್ರದಲ್ಲಿಯೇ ಕೆ.ಆರ್.ಆಸ್ಪತ್ರೆಯಲ್ಲಿ ಮರೆಗುಳಿ ಸಮಸ್ಯೆ ಹೊಂದಿದವರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಜನೌಷಧಿ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಔಷಧಿ ನೀಡಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಜಾಥಾ: ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ದಿಂದ ಹೊರಟ ಮೆಮೋರಿ ವಾಕ್ ದೊಡ್ಡ ಗಡಿಯಾರ ವೃತ್ತ, ಚಿಕ್ಕ ಗಡಿಯಾರವೃತ್ತ, ದೇವರಾಜ ಅರಸ್ ರಸ್ತೆ , ಜೆಎಲ್‍ಬಿ ರಸ್ತೆ, ವಿನೋಬ ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಬಳಿಕ ಡಿಸಿ ಕಚೇರಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು. ಮೇಯರ್ ಪುಷ್ಪಲತಾ ಜಗನ್ನಾಥ್, ಆಲ್ಜಿಮಿರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಘಟಕ ಅಧ್ಯಕ್ಷ ಡಾ.ಹನು ಮಂತಚಾರ್ ಜೋಶಿ, ಡಾ.ಮುರುಳಿ, ಜಿಎಸ್‍ಎಸ್ ಫೌಂಡೇಷನ್ ಸಂಸ್ಥೆ ಮುಖ್ಯಸ್ಥ ಶ್ರೀಹರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

.

Translate »