ಆಂಧ್ರ ಮಾದರಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ ಜಾರಿಗೆ ರಾಜ್ಯ ಸರ್ಕಾರದ ಗಂಭೀರ ಚಿಂತನೆ
ಮೈಸೂರು

ಆಂಧ್ರ ಮಾದರಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ ಜಾರಿಗೆ ರಾಜ್ಯ ಸರ್ಕಾರದ ಗಂಭೀರ ಚಿಂತನೆ

June 27, 2018

ರೈತ ಮುಖಂಡ ಬಡಗಲಪುರ ನಾಗೇಂದ್ರ ವಿಶ್ವಾಸ

ಮೈಸೂರು: ಆಂಧ್ರಪ್ರದೇಶ ಅಳವಡಿಸಿಕೊಂಡಿರುವ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕೆಂಬ ರಾಜ್ಯ ರೈತ ಸಂಘದ ಮನವಿಗೆ ಪೂರಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರ ಈ ಸಂಬಂಧ ಗಂಭೀರ ಚಿಂತನೆ ನಡೆಸಿದೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಸ್ರೇಲ್ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಉತ್ಸುಕರಾಗಿದ್ದರು. ಈ ಸಂಬಂಧ ರೈತ ಸಂಘ ಅವಲೋಕಿಸಿದಾಗ, ಇಸ್ರೇಲ್ ಕೃಷಿ ಪದ್ಧತಿ ದೇಶದ ಯಾವ ಭಾಗಕ್ಕೂ ಅನ್ವಯಿಸಲು ಸಾಧ್ಯವಿಲ್ಲ ಎಂಬ ಅಂಶ ಕಂಡುಕೊಳ್ಳಲಾಯಿತು. ಭಾರತ ಮೂಲಭೂತವಾಗಿ ವ್ಯವಸಾಯ ಪ್ರಧಾನ ದೇಶವಾದ ಹಿನ್ನೆಲೆಯಲ್ಲಿ ನಾವು ಇತರ ದೇಶಗಳಲ್ಲಿ ಕೃಷಿ ಪದ್ಧತಿ ಕಲಿಯುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.

ಹಸಿರು ಕ್ರಾಂತಿಯ ಬಳಿಕ ನಮ್ಮ ನೈಸರ್ಗಿಕ ಕೃಷಿ ಪದ್ಧತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಯಿತು. ಇದೀಗ ಆಂಧ್ರಪ್ರದೇಶದಲ್ಲಿ ಕಡಿಮೆ ನೀರು ಬಳಕೆಯೊಂದಿಗೆ ಉತ್ತಮ ಫಸಲು ತೆಗೆಯುವ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಯಶಸ್ಸು ಕಾಣಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ ಪದ್ಧತಿ ರಾಜ್ಯದಲ್ಲಿ ಜಾರಿಗೊಳಿಸಲು ರಾಜ್ಯ ರೈತ ಸಂಘ ಮಾಡಿದ ಮನವಿಗೆ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸಿದೆ ಎಂದರು.

ಕೃಷಿ ವಿವಿ ದೂರವಿಡಿ: ಆಂಧ್ರ ಪ್ರದೇಶ ಕೃಷಿ ಪದ್ಧತಿಗೆ ರಾಜ್ಯ ಸರ್ಕಾರ ಒಲವು ತೋರಿದ್ದರೆ, ಅತ್ತ ರಾಜ್ಯದ ಕೃಷಿ ವಿಶ್ವವಿದ್ಯಾನಿಲಯ ಮಾತ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಹುರಾಷ್ಟ್ರೀಯ ಕಂಪನಿಗಳ ಬೀಜ, ತಳಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಕೃಷಿ ವಿವಿ ಹೊಂದಿರುವುದು ಸ್ಪಷ್ಟವಾಗಿದ್ದು, ಇದೇ ಕಾರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಆಂಧ್ರ ಪ್ರದೇಶದಲ್ಲೂ `ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ’ ಅನುಷ್ಠಾನಗೊಳಿಸಲು ಮುಂದಾದಾಗ ಇದೇ ರೀತಿ ಅಲ್ಲಿನ ಕೃಷಿ ವಿವಿಗಳು ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಅಲ್ಲಿನ ಸರ್ಕಾರ ವಿವಿಗಳನ್ನು ಹೊರಗಿಟ್ಟು ನೈಸರ್ಗಿಕ ಕೃಷಿ ಪದ್ಧತಿ ಅನುಷ್ಠಾನಗೊಳಿಸಿದೆ. ಅದೇ ರೀತಿ ನಮ್ಮ ರಾಜ್ಯ ಸರ್ಕಾರವೂ ಕೃಷಿ ವಿವಿಯನ್ನು ದೂರವಿಟ್ಟು ಈ ಕೃಷಿ ಪದ್ಧತಿ ಜಾರಿಗೊಳಿಸಬೇಕು ಎಂದು ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಆಂಧ್ರಕ್ಕೆ ರೈತ ಮುಖಂಡರು: ನೈಸರ್ಗಿಕ ಕೃಷಿ ಪದ್ಧತಿ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಲು ಆಂಧ್ರಪ್ರದೇಶಕ್ಕೆ ರಾಜ್ಯ ರೈತ ಸಂಘ ಪ್ರವಾಸ ಕಾರ್ಯಕ್ರಮ ರೂಪಿಸುತ್ತಿದೆ. ಈ ಸಂಬಂಧ ಅಲ್ಲಿ ಸಮಯಾವಕಾಶ ಕೇಳಿದ್ದು, ಶೀಘ್ರದಲ್ಲಿ 15ರಿಂದ 20 ಮಂದಿ ರೈತ ಸಂಘ ಮತ್ತು ಜನಶಕ್ತಿ ಸಂಘಟನೆಯ ಮುಖಂಡರು ಈ ಅಧ್ಯಯನ ಪ್ರವಾಸಕ್ಕೆ ತೆರಳಿದ್ದೇವೆ ಎಂದು ತಿಳಿಸಿದರು.

ಪ್ರತಿಭಟನೆ, ಸರ್ಕಾರಕ್ಕೆ ವಿವೇಕವಿಲ್ಲ: ಸರ್ಕಾರಕ್ಕೆ ವಿವೇಕವಿಲ್ಲ, ಪ್ರತಿ ವರ್ಷ ಭತ್ತದ ಬೆಲೆಯಲ್ಲಿ ಇಳಿಕೆಯಾದಾಗ ಭತ್ತದ ಖರೀದಿ ಕೇಂದ್ರ ತೆರೆಯಲು ಮನವಿ ಮಾಡಿದರೆ, ಕಾಲ ಮೀರಿದ ಖರೀದಿ ಕೇಂದ್ರ ತೆರೆಯಲಾಗುತ್ತದೆ ಎಂದು ಬಡಗಲಪುರ ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ವಾರದೊಳಗೆ ಖರೀದಿ ಕೇಂದ್ರ ತೆರೆಯದಿದ್ದರೆ, ಮುಖ್ಯಮಂತ್ರಿಗಳ ನಿವಾಸದ ಎದುರು ಇಲ್ಲವೇ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ನಿವಾಸಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೇಂದ್ರದ ಸರ್ವಾಧಿಕಾರಿ ಧೋರಣೆ…

ಕೇಂದ್ರ ಸರ್ಕಾರ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಸಂಬಂಧಿಸಿದ ರಾಜ್ಯಗಳ ಅಭಿಪ್ರಾಯ ಕೇಳಲು ಅವಕಾಶವಿತ್ತು. ಹೀಗಿದ್ದರೂ ಏಕಾಏಕಿ ಈ ರೀತಿ ಮಾಡಿರುವುದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಾಗಿದೆ. -ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ.

Translate »