ಪಾದಯಾತ್ರೆ ಮೂಲಕ ಶಾಸಕ ರಾಮದಾಸ್‍ರಿಂದ ನಾಗರಿಕರ ಸಮಸ್ಯೆಗಳ ಪರಿಹಾರ ಸೂತ್ರ
ಮೈಸೂರು

ಪಾದಯಾತ್ರೆ ಮೂಲಕ ಶಾಸಕ ರಾಮದಾಸ್‍ರಿಂದ ನಾಗರಿಕರ ಸಮಸ್ಯೆಗಳ ಪರಿಹಾರ ಸೂತ್ರ

June 27, 2018

ಮೈಸೂರು:  ಮೈಸೂರಿನ ಕೆಆರ್ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 2ರಲ್ಲಿ ಮಂಗಳವಾರ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಎಸ್.ಎ.ರಾಮದಾಸ್ ಜನಸ್ಪಂದನಾ ಯಾತ್ರೆ ನಡೆಸಿ, ನಾಗರಿಕ ಸಮಸ್ಯೆಗಳನ್ನು ಆಲಿಸಿ ನಿಗದಿತ ಸಮಯದೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಾರ್ಡ್ ಸಂಖ್ಯೆ 2ರ (ಪುನರ್ ವಿಂಗಡಣೆ ಬಳಿಕ ವಾರ್ಡ್ ಸಂಖ್ಯೆ-50) ವ್ಯಾಪ್ತಿಯಲ್ಲಿ ಪಾಲಿಕೆ, ಸ್ಲಂ ಬೋರ್ಡ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳೊಂದಿಗೆ ಪಾದಯಾತ್ರೆ ಮೂಲಕ ನಾಗರಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಒಳಚರಂಡಿ ವ್ಯವಸ್ಥೆ, ರಸ್ತೆ ದುರಸ್ತಿ ಸೇರಿದಂತೆ ನಾನಾ ಮೂಲಭೂತ ಸೌಲಭ್ಯಗಳ ಬಗ್ಗೆ ಕೇಳಿ ಬಂದ ದೂರುಗಳಿಗೆ ಸ್ಪಂದಿಸಿ, ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ನಿರ್ದೇಶನ ನೀಡಿದರು.

ಬಳಿಕ ಕೆಆರ್ ಮೊಹಲ್ಲಾದ ರೇಣುಕಾಚಾರ್ಯ ದೇವಸ್ಥಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಎ.ರಾಮದಾಸ್, ವಾರ್ಡ್‍ನ ಪಾಲಿಕೆ ಸದಸ್ಯ ಶಿವಕುಮಾರ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಭಾಗದಲ್ಲಿ ಕಂಡುಬಂದ ಸಣ್ಣಪುಟ್ಟ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಕಳಪೆ ಕಾಮಗಾರಿ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ಕೇಂದ್ರ ಸರ್ಕಾರದ `ಹೌಸಿಂಗ್ ಫಾರ್ ಆಲ್’ ಯೋಜನೆಯಡಿ ಕೈಗೆತ್ತಿಕೊಂಡಿರುವ ಮನೆಗಳ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿರುವುದು ಕಂಡು ಬಂದಿದೆ. ಈ ಸಂಬಂಧ ಪರಿಶೀಲಿಸಿ ಕಠಿಣ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವಸತಿ ರಹಿತರಿಗೆ ಸೂರು ಕಲ್ಪಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷೆಯ ಯೋಜನೆ `ಹೌಸಿಂಗ್ ಫಾರ್ ಆಲ್’ನಡಿ ಕಳೆದ ನವೆಂಬರ್‍ನಲ್ಲಿ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ ಕಾಮಗಾರಿ ಆರಂಭಿಸಲಾಗಿದೆ. ಆದರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಹಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

`ಹೌಸಿಂಗ್ ಫಾರ್ ಆಲ್’ ಯೋಜನೆಗೆ ನೋಂದಾಯಿಸಲು ಈ ತಿಂಗಳ 15ರವರೆಗೆ ಅವಕಾಶವಿತ್ತು. ಯೋಜನೆಯಡಿ ಅರ್ಹರನ್ನು ಆಯ್ಕೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಈ ಭಾಗದಲ್ಲಿ ಯುಜಿಡಿ ಅಲ್ಲಲ್ಲಿ ಸ್ಥಗಿತವಾಗುತ್ತಿರುವ ದೂರು ಕೇಳಿ ಬಂದಿದೆ. ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗ, `ರೀ-ಮಾಡ್ಲಿಂಗ್’ ಯೋಜನೆಯಡಿ ಮೈಸೂರಿಗೆ 450 ಕೋಟಿ ರೂ. ಅನುದಾನ ಮಂಜೂರು ಮಾಡಿ, 250 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆಗ ಯುಜಿಡಿ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಉಳಿದ 250 ಕೋಟಿ ರೂ. ಮಂಜೂರಾಗಿಲ್ಲ ಎಂಬ ಕಾರಣಕ್ಕೆ ಈ ಭಾಗದ ಯುಜಿಡಿ ಕಾಮಗಾರಿ ಸ್ಥಗಿತಗೊಳಿಸಿದ್ದರು. ಅಲ್ಲದೆ, ಚಾಮರಾಜ ಜೋಡಿ ರಸ್ತೆಯ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ನೀಡಲಾಗಿತ್ತು.

ಆದರೆ ಕಾಮಗಾರಿ ಮಾತ್ರ ಗುಣಮಟ್ಟದಿಂದ ಕೂಡಿಲ್ಲ. ಚರಂಡಿ ಕಾಮಗಾರಿ ಅರೆಬರೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂದು ವಿವರಿಸಿದರು.ಪಾಲಿಕೆ ಸದಸ್ಯ ಶಿವಕುಮಾರ್, ಬಿಜೆಪಿ ಮುಖಂಡ ಜೋಗಿ ಮಂಜು, ಪಾಲಿಕೆ ವಲಯ-1ರ ಸಹಾಯಕ ಆಯುಕ್ತ ಸುನೀಲ್‍ಬಾಬು, ಪಾಲಿಕೆ ಇಇ (ಯುಜಿಡಿ) ಜಾವಿದ್, ಪಾಲಿಕೆ ಇಇ (ಸಿವಿಲ್) ನಾಗರಾಜಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಸಾಲಿನಲ್ಲಿ ಮೈಸೂರು ದೇಶದ ಸ್ವಚ್ಛ ನಗರಗಳ ಪೈಕಿ ಪ್ರಥಮ ಸ್ಥಾನ ಅಲಂಕರಿಸಬೇಕು. ಇದಕ್ಕಾಗಿ ಪಕ್ಷಾತೀತವಾಗಿ ತೋಡಗಿಸಿಕೊಳ್ಳಲಿದ್ದೇನೆ. ಈ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆಯಲ್ಲಿ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ, ಶೂನ್ಯ ತ್ಯಾಜ್ಯ ನಿರ್ವಹಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿತ್ತು. ಇದರ ಪರಿಣಾಮವಾಗಿ ಮೈಸೂರು ಸ್ವಚ್ಛ ನಗರಗಳ ಪೈಕಿ ಮೊದಲ ಸ್ಥಾನಕ್ಕೆ ಭಾಜನವಾಗಿತ್ತು. ಆದರೆ ಇದೀಗ 5ರಿಂದ 8ನೇ ಸ್ಥಾನಕ್ಕೆ ಕುಸಿದಿದೆ. – ಎಸ್.ಎ.ರಾಮದಾಸ್, ಶಾಸಕರು.

Translate »