ರಿಯೋ ಡಿ ಜನೈರೋ, ಸೆ.1- ಬ್ರೆಜಿಲ್‍ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‍ನಲ್ಲಿ ಭಾರತದ ಶೂಟರ್ ಯಶಸ್ವಿನಿ ಸಿಂಗ್ ದೇಸ್ವಾಲ್ ರಾಷ್ಟ್ರ ಕ್ಕಾಗಿ 9ನೇ ಒಲಿಂಪಿಕ್ ಕೋಟಾವನ್ನು ಪಡೆದರು ಮತ್ತು ಭಾನುವಾರ ಮುಂಜಾನೆ ನಡೆದ ಐಎಸ್‍ಎಸ್‍ಎಫ್ ವಿಶ್ವಕಪ್ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ವಿಶ್ವ ಚಾಂಪಿಯನ್ ಆದರು. 22 ವರ್ಷದ ಯಶಸ್ವಿನಿ ಫೈನಲ್ ಹಂತದಲ್ಲಿ ವಿಶ್ವ ನಂ.1 ಶೂಟರ್ ಉಕ್ರೇನ್‍ನ ಒಲಿನಾ ಕೋಸ್ಟೆವಿಚ್ ಅವರನ್ನು ಹಿಂದಿಕ್ಕಿ ಒಟ್ಟಾರೆ 236.7 ಪಾಯಿಂಟ್‍ಗಳೊಂದಿಗೆ ಚಿನ್ನದ ಪದಕ ಗೆದ್ದರು. ಕೋಸ್ಟೆವಿಚ್ 234.8 ಪಾಯಿಂಟ್ ಗಳಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಸರ್ಬಿಯಾದ ಜಾಸ್ಮಿನಾ 215.7 ಅಂಕಗಳೊಡನೆ ಕಂಚಿನ ಪದಕ ಗಳಿಸಿ ಕೊಂಡರು. ಯಶಸ್ವಿನಿ ತಂದೆ ಐಪಿಎಸ್ ಅಧಿಕಾರಿ ಎಸ್.ಎಸ್.ದೇಸ್ವಾಲ್ ಮತ್ತು ತಾಯಿ ಸರೋಜ್ ದೇಸ್ವಾಲ್ ಪಂಚಕುಲ ಮುಖ್ಯ ಆದಾಯ ತೆರಿಗೆ ಆಯುಕ್ತರಾಗಿದ್ದಾರೆ. ಚಂಡೀಘರ್ ಡಿಎವಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಯಶಸ್ವಿನಿ ಅರ್ಹತಾ ಸುತ್ತಿನಲ್ಲಿ 582 ಅಂಕಗಳನ್ನು ಗಳಿಸಿ ಫೈನಲ್ ತಲುಪಿದ್ದರು. ರಿಯೋ ವಿಶ್ವಕಪ್‍ನಲ್ಲಿ ಇದು ಭಾರತದ ಪಾಲಿನ 3ನೇ ಸ್ವರ್ಣ ಪದಕವಾಗಿದೆ. ಇದಕ್ಕೆ ಮುನ್ನ ಅಭಿಷೇಕ್ ವರ್ಮಾ ಹಾಗೂ ಎಲ ವನಿಲ್ ವಲಾರಿಮನ್ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ 10 ಮೀ. ರೈಫಲ್ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಟೂರ್ನಿಯಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಸೇರಿ 5 ಪದಕಗಳನ್ನು ಜಯಿಸಿದ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ