- ಹಳದಿ ಬಣ್ಣಕ್ಕೆ ತಿರುಗಿದ ಸಂಪ್ ನೀರು; ಮನೆ ಬಾಡಿಗೆದಾರರ ದೂರು
- ಸಮೀಪದ ಪೆಟ್ರೋಲ್ ಬಂಕ್‍ನಿಂದ ಸೋರಿಕೆಯಾಗುತ್ತಿರುವ ಶಂಕೆ?
ಮೈಸೂರು,ಫೆ.23(ಎಂಟಿವೈ)- ಮೈಸೂರು ತಾಲೂಕಿನ ಸಿದ್ಧಲಿಂಗಪುರದ ಮನೆ ಯೊಂದರ ಬೋರ್‍ವೆಲ್‍ನಲ್ಲಿ ಪೆಟ್ರೋಲ್ ಮಿಶ್ರಿತ ನೀರು ಸರಬರಾಜಾಗುತ್ತಿದ್ದು, ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ.
ಮೈಸೂರು-ಬೆಂಗಳೂರು ಮುಖ್ಯರಸ್ತೆ ಯಲ್ಲಿನ ಪೆಟ್ರೋಲ್ ಬಂಕ್ ಈ ಮನೆಗೆ ಸಮೀಪದಲ್ಲೇ ಇದ್ದು, ಬೋರ್‍ವೆಲ್ ನೀರಿಗೆ ಬಂಕ್‍ನಿಂದ ಸೋರಿಕೆಯಾದ ಪೆಟ್ರೋಲ್, ಡೀಸೆಲ್ ಅಂತರ್ಜಲ ಸೇರಿರ ಬಹುದು ಎಂದು ಶಂಕಿಸಲಾಗಿದೆ.
ಬೆಂಗಳೂರು ಮೂಲದ ಪ್ರಕಾಶ್ ಎಂಬು ವರು ಸಿದ್ದಲಿಂಗಪುರದಲ್ಲಿ ನಿವೇಶನ ಖರೀ ದಿಸಿ, 2 ಅಂತಸ್ತಿನಲ್ಲಿ ನಾಲ್ಕು ಮನೆ ನಿರ್ಮಿಸಿ ಬಾಡಿಗೆಗೆ ನೀಡಿದ್ದಾರೆ. 5 ವರ್ಷಗಳ ಹಿಂದೆ ಕೊರೆಸಿದ್ದ ಬೋರ್‍ವೆಲ್‍ನಲ್ಲಿ ಕಳೆದೊಂದು ತಿಂಗಳಿಂದ ಸೀಮೆಎಣ್ಣೆ ವಾಸನೆಯ ನೀರು ಪೂರೈಕೆಯಾಗುತ್ತಿದೆ. ಸಂಪ್‍ನಲ್ಲಿನ ನೀರು ಹಳದಿ ಬಣ್ಣಕ್ಕೆ ತಿರುಗಿದ್ದು, 3 ದಿನದಿಂದ ಪೆಟ್ರೋಲ್ ವಾಸನೆ ಹೆಚ್ಚಾಗಿದೆ ಎಂದು ಬಾಡಿಗೆದಾರರು ಮಾಲೀಕರ ಬಳಿ ದೂರಿದ್ದಾರೆ.
ಭಾನುವಾರ ಬೆಳಿಗ್ಗೆ ಪ್ಲಂಬರ್ ಜತೆ ಬಂದ ಪ್ರಕಾಶ್ ಪರಿಶೀಲಿಸಿದಾಗ ಬೋರ್‍ವೆಲ್ ನಿಂದ ಮೇಲೆತ್ತಲಾದ ನೀರಿನಲ್ಲೇ ಪೆಟ್ರೋಲ್ ಮಿಶ್ರಣವಾಗಿರುವುದು ದೃಢಪಟ್ಟಿದೆ. ವಿಷಯ ತಿಳಿದ ಗ್ರಾಮಸ್ಥರು ಮನೆ ಬಳಿ ಬಂದು ಪರಿಶೀಲಿಸಿದ್ದಾರೆ. ಸಮೀಪದ ಪೆಟ್ರೋಲ್ ಬಂಕ್ ಮಾಲೀಕರಿಗೂ ವಿಷಯ ತಿಳಿಸಿದ್ದಾರೆ.
ಸಂಪ್‍ನಲ್ಲಿದ್ದ ನೀರನ್ನೂ ಮೇಲೆತ್ತಿ ಸಂಪ್ ಸ್ವಚ್ಛಗೊಳಿಸಲಾಗಿದೆ. ಬೋರ್ ವೆಲ್‍ನಿಂದ ಬಂದ ನೀರನ್ನು ಬಾಟಲ್‍ಗೆ ಹಾಕಿದಾಗ ಪೆಟ್ರೋಲ್ ಅಂಶ ಬಾಟಲಿಯ ಮೇಲ್ಭಾಗದಲ್ಲಿದ್ದರೆ, ಕೆಳಭಾಗದಲ್ಲಿ ನೀರು ಇರುವುದು ಕಂಡಿದೆ.
ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಪ್ರಕಾಶ್, ಬೋರ್‍ವೆಲ್ ನಿಂದ ಈ ಹಿಂದೆ ಶುದ್ಧ ನೀರೇ ಬರುತ್ತಿತ್ತು. ಒಂದು ತಿಂಗಳಿಂದ ಸೀಮೆಎಣ್ಣೆ ವಾಸನೆ ಇದ್ದುದನ್ನು ಬಾಡಿಗೆದಾರರು ಗಮನಿಸಿ ದ್ದರು. ಆದರೆ ಅದನ್ನೇನೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ವಾಸನೆ ಹೆಚ್ಚಾದ ಕಾರಣ ಶುಕ್ರವಾರ ನನ್ನ ಗಮನಕ್ಕೆ ತಂದಿದ್ದಾರೆ. ಬಂದು ನೋಡಿದಾಗ ನೀರಿನೊಂದಿಗೆ ಪೆಟ್ರೋಲ್ ಮಿಶ್ರಣವಾಗಿರುವುದು ಕಂಡು ಬಂದಿದೆ. ಸಮೀಪದ ಪೆಟ್ರೋಲ್ ಬಂಕ್ ಮಾಲೀಕರೂ ಬಂದು ಪರಿಶೀಲಿಸಿದ್ದಾರೆ. ನಮ್ಮಲ್ಲಿನ ಸ್ಟಾಕ್ ಸರಿಯಾಗಿದೆ. ಬಂಕ್‍ನಲ್ಲಿ ಸೋರಿಕೆ ಕಂಡುಬಂದಿಲ್ಲ ಎಂದಿದ್ದಾರೆ. ಸೋಮವಾರ ಗ್ರಾಮ ಪಂಚಾಯಿತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.