ಸಿದ್ಧಗಂಗಾ ಶ್ರೀಗಳು ಸಾಮಾಜಿಕ ಕಳಕಳಿಯಿಂದ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ
ಮೈಸೂರು

ಸಿದ್ಧಗಂಗಾ ಶ್ರೀಗಳು ಸಾಮಾಜಿಕ ಕಳಕಳಿಯಿಂದ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ

April 22, 2019

ಮೈಸೂರು: ಡಾ.ಶ್ರೀ ಶಿವ ಕುಮಾರ ಸ್ವಾಮೀಜಿ ಜಂಗಮ ಸಾರಸ್ವತ ಲೋಕದ ಧ್ರುವತಾರೆಯಾಗಿದ್ದು, ಅವರ ಜಾತ್ಯಾತೀತ ಸಾಮಾಜಿಕ ಕಳಕಳಿಯಿಂದ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ ಎಂದು ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ಹೇಳಿದರು.

ಶ್ರೀ ಶಿವರಾತ್ರೀಶ್ವರ ಅಕ್ಕನ ಬಳಗ, ಶಿವಶ್ರೀ ವಿದ್ಯಾರ್ಥಿನಿ ನಿಲಯ, ಅಕ್ಕನ ಬಳಗದ ವತಿಯಿಂದ ಭಾನುವಾರ ಅಕ್ಕನ ಬಳಗದಲ್ಲಿ ಆಯೋಜಿಸಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ಧಗಂಗಾ ಶ್ರೀಗಳು ಸ್ವಾಮೀಜಿಯಾದ ಜಂಗಮ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಂತಹ ಮಹಾನ್ ಚೇತನ. ಅವರ ಸಾಧನೆಯ ಸರಿಗಟ್ಟಲು ಯಾರಿಂ ದಲೂ ಸಾಧ್ಯವಿಲ್ಲ. ಆಧ್ಯಾತ್ಮಿಕ, ಅನ್ನದಾ ಸೋಹ ಕ್ರಾಂತಿ ಮಾಡಿದ ಅವರ ನಡೆ-ನುಡಿ ಆಚಾರ-ವಿಚಾರ ಬಹಳ ವಿಶೇಷ ವಾಗಿದ್ದವು ಎಂದರು.

ಈ ಕಲಿಯುಗದ ಸ್ವಾರ್ಥ ಸಮಾಜ ದಲ್ಲಿ ಎಲ್ಲವನ್ನು ಮೀರಿ 111 ವರ್ಷ ಇದ್ದದ್ದೇ ದೊಡ್ಡ ಪವಾಡ. ಶಿವಕುಮಾರ ಸ್ವಾಮೀಜಿ ಜನ್ಮವಿತ್ತ ಕ್ಷಣವೇ ಕ್ರಾಂತಿ ಯಾಯಿತು. ಸಾಮಾಜಿಕ ನೆಲೆಯ ಸ್ಫೂರ್ತಿಯಾಯಿತು. ಅವರ ಬದುಕಿನಲ್ಲಿ ಏನನ್ನು ಮಾಡಿದ್ದಾರೆ ಎಂಬುದನ್ನು ಮಾತಿನ ಮೂಲಕ ವರ್ಣಿಸಲು ಸಾಧ್ಯವಿಲ್ಲ. ವರ್ಣಾ ತೀತ, ಸೀಮಾತೀತ, ಕೊನೆಯಿಲ್ಲದ ಸಾಧನೆ ಮಾಡಿದ್ದಾರೆ ಎಂದು ಬಣ್ಣಿಸಿದರು.

ದಾಸೋಹ ಪರಿಕಲ್ಪನೆ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಈ ಭೂಮಿ ಯಲ್ಲಿ ಬೆಟ್ಟ-ಗುಡ್ಡಗಳು ಶಾಶ್ವತವಾಗಿ ರುವಂತೆ ಸಿದ್ಧಗಂಗೆಯ ಶ್ರೀಗಳು ನಮ್ಮ ನಡುವೆ ಇರುತ್ತಾರೆ. ಅಕ್ಷರ ಕ್ರಾಂತಿಯ ಮೂಲಕ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಸಿದ್ದಗಂಗೆ ಯಲ್ಲಿ ಕಲಿತವರು ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ತಿಳಿಸಿದರು.
ಸಿದ್ಧಗಂಗಾ ಮಠದ ಶಾಲಾ-ಕಾಲೇಜುಗಳಲ್ಲಿ ಶೇ.85 ರಷ್ಟು ಅನ್ಯ ಜಾತಿ ಹಾಗೂ ಧರ್ಮದ ಮಕ್ಕಳಿದ್ದಾರೆ. ಶಿವಕುಮಾರ ಸ್ವಾಮೀಜಿಗಳ ದೃಷ್ಟಿಯಲ್ಲಿ ಎಲ್ಲರೂ ಒಂದೇ ಆಗಿದ್ದರು. ಅವರು ಲಿಂಗೈಕ್ಯರಾದಾಗ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿತ್ತು. ಅಂದು ಸಿದ್ಧಗಂಗ ಶ್ರೀಗಳನ್ನು ನೋಡಲು ಹೊರಟ ಪ್ರತಿಯೊಬ್ಬರಿಗೂ ಮಾರ್ಗದುದ್ದಕ್ಕೂ ಅನ್ನ ದಾಸೋಹವೇ ಎದುರಾಯಿತು. ಕಲಿಯುಗದ ಪವಾಡ ಎಂದರೆ ಇದೇ. ಅವರ ಸಾಧನೆ ಅಗಣಿತ, ಅಸಮಾನ್ಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ನೀಲಕಂಠಸ್ವಾಮಿ ಮಠದ ಶ್ರೀ ಸಿದ್ದಮಲ್ಲಸ್ವಾಮಿ, ಕವಯತ್ರಿ ಎಂ.ಎ.ನೀಲಾಂಬಿಕ, ನಾಗಮ್ಮ ಕೆ.ಬಿ. ಷಡಕ್ಷರಿ, ನಗರ್ಲೆ ಶಿವಕುಮಾರ್, ಚೂಡಾ ಮಣಿ ಮತ್ತಿತರರು ಉಪಸ್ಥಿತರಿದ್ದರು.

Translate »