ಕೊಡಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ನೀರವ ಮೌನ
ಮೈಸೂರು

ಕೊಡಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ನೀರವ ಮೌನ

August 28, 2018

ಮಡಿಕೇರಿ: ಧಾರಾಕಾರ ಮಳೆ, ಭೂಕುಸಿತದಂತಹ ಭಾರೀ ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯ ವಿವಿಧೆಡೆ ಶಾಲಾ-ಕಾಲೇಜುಗಳು ಆರಂಭವಾದರೂ ಒಂದು ರೀತಿಯ ನೀರವ ಮೌನ. ಜೊತೆಗೆ ಆತಂಕ. ಲವ ಲವಿಕೆಯಿಂದ ಇರಬೇಕಾದ ವಿದ್ಯಾರ್ಥಿಗಳಲ್ಲಿ ಭಯ ಹಾಗೂ ದುಃಖ ಮನೆ ಮಾಡಿದೆ.

ಜಿಲ್ಲೆಯಾದ್ಯಂತ ಈಗಾಗಲೇ ಶಾಲೆಗಳು ಆರಂಭವಾಗಿ ಮೂರ್ನಾಲ್ಕು ದಿನ ಕಳೆದಿದೆ. ಕೆಲವು ಪದವಿ ಪೂರ್ವ ಕಾಲೇಜುಗಳಲ್ಲಿ ಇಂದಿನಿಂದ ತರಗತಿಗಳು ಆರಂಭವಾಗಿವೆ. ಸುಮಾರು 21 ದಿನಗಳ ಬಳಿಕ ಆರಂಭ ವಾದ ತರಗತಿಗೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಮನೆ ಕಳೆದುಕೊಂಡ ಕುಟುಂಬದ ವಿದ್ಯಾರ್ಥಿಗಳು ಬರಿಗೈಯ್ಯಲ್ಲಿ ತರಗತಿಗೆ ಬಂದರೆ, ಮತ್ತೆ ಕೆಲ ವಿದ್ಯಾರ್ಥಿಗಳು ನಿರಾಶ್ರಿತರ ಶಿಬಿರಗಳಲ್ಲಿ ನೀಡಿರುವ ಒಂದೆರಡು ಹೊಸ ಪುಸ್ತಕಗಳನ್ನು ಹಿಡಿದು ಹಾಜರಾಗಿದ್ದರು.

ಸಂತ್ರಸ್ತ ಕುಟುಂಬದ ಬಹುತೇಕ ವಿದ್ಯಾರ್ಥಿ ಗಳು ಸಮವಸ್ತ್ರವಿಲ್ಲದೆ ತರಗತಿಗಳಿಗೆ ಹಾಜರಾಗಿದ್ದು ಕಂಡು ಬಂದಿತು. ಇಂದು ಬೆಳಿಗ್ಗೆ 9.30ಕ್ಕೆ ಕಾಲೇಜಿಗೆ ಬಂದ ವಿದ್ಯಾರ್ಥಿ ಗಳು ಎಂದಿನಂತೆ ಪ್ರಾರ್ಥನೆ ಮಾಡಿದ ನಂತರ ನೆರೆ ಹಾವಳಿಯಿಂದ ಮೃತಪಟ್ಟ ವರ ಆತ್ಮಕ್ಕೆ ಶಾಂತಿ ಕೋರಿದರಲ್ಲದೆ, ನಾಪತ್ತೆ ಯಾಗಿರುವವರು ಸುರಕ್ಷಿತವಾಗಿ ಮನೆ ಸೇರ ಲೆಂದು ಪ್ರಾರ್ಥಿಸಿದರು. ಇದರೊಂದಿಗೆ ಮುನಿಸಿಕೊಂಡಿರುವಪ್ರಕೃತಿ ಮಾತೆ ಶಾಂತಗೊಳ್ಳುವಂತೆ ಬೇಡಿದರು. ಮಡಿಕೇರಿಯ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನೋವಂತು ಹೇಳ ತೀರದಾಗಿತ್ತು.

ಪ್ರವಾಹ ಹಾಗೂ ಭೂ ಕುಸಿತದಿಂದ ಕೊಚ್ಚಿ ಹೋಗಿರುವ ಕಾಲೂರು, ಕಾಟಗೇರಿ, ಜೋಡುಪಾಲ, ಮಾದಾಪುರ ಸೇರಿದಂತೆ ವಿವಿಧ ಗ್ರಾಮಗಳ ವಿದ್ಯಾರ್ಥಿಗಳೇ ಈ ಕಾಲೇಜಿನಲ್ಲಿ ಹೆಚ್ಚಾಗಿರುವುದರಿಂದ, ಸಂತ್ರಸ್ತ ಕುಟುಂಬದ ವಿದ್ಯಾರ್ಥಿಗಳ ನೋವು ಉಪನ್ಯಾಸಕರಿಗೆ ಮನದಟ್ಟಾಗಿದೆ. ಪ್ರತಿ ತರಗತಿಯಲ್ಲಿ 50 ರಿಂದ 60 ವಿದ್ಯಾರ್ಥಿಗಳಿದ್ದ ಕಾಲೇಜಿನಲ್ಲಿ ಇಂದು 15 ರಿಂದ 20 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು. ಹಾಜರಿದ್ದ ಪ್ರತಿ ವಿದ್ಯಾರ್ಥಿ ಒಂದೊಂದು ರೀತಿಯ ಸಂಕಷ್ಟಕ್ಕೆ ತುತ್ತಾಗಿರುವುದನ್ನು ಕೇಳಿ ಉಪನ್ಯಾಸಕರು ಮರುಗಿ, ಅವರ ಸಮಾಧಾನಪಡಿಸಿದರು. ಕಾಲೇಜಿಗೆ ಬಂದಿದ್ದ ಬಹುಪಾಲು ವಿದ್ಯಾರ್ಥಿಗಳು ಮನೆಗಳನ್ನು ಕಳೆದುಕೊಂಡವ ರಾಗಿದ್ದಾರೆ.

ನಿರಾಶ್ರಿತರ ಶಿಬಿರದಿಂದ ನೇರವಾಗಿ ಕಾಲೇಜಿಗೆ ಬಂದಿದ್ದು, ಇಂದು ದಿನವಿಡೀ ಮೌನಕ್ಕೆ ಶರಣಾಗಿದ್ದರು. ಕೆಲ ವಿದ್ಯಾರ್ಥಿಗಳ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡರೆ, ಮತ್ತೆ ಕೆಲವರ ಮುಖದಲ್ಲಿ ದುಃಖದ ಛಾಯೆ ಇತ್ತು. ಅಜ್ಜ, ತಂದೆ ಹಾಗೂ ಸಾಕು ಪ್ರಾಣಿಗಳನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳು ಅಂದು ನಡೆದ ದುರಂತವನ್ನು ನೆನೆದು ದುಃಖಿಸುತ್ತಿದ್ದರು.

ಸಹಜತೆಗೆ ಬಾರದ ಮಕ್ಕಳು: `ಮೈಸೂರು ಮಿತ್ರ’ನೊಂದಿಗೆ ಉಪನ್ಯಾಸಕಿ ಕೆ.ಜಯಲಕ್ಷ್ಮಿ ಮಾತನಾಡಿ, ಪ್ರಕೃತಿ ವಿಕೋಪದ ನಂತರ ಮತ್ತೆ ತರಗತಿಗಳು ಆರಂಭವಾಗಿವೆ. ಆದರೆ ವಿದ್ಯಾರ್ಥಿಗಳಲ್ಲಿ ದುಃಖ, ಭಯ ಮಿಶ್ರಿತ ನೋಟಗಳು ಎದ್ದು ಕಾಣುತ್ತಿದ್ದವು. ಮಕ್ಕಳು ಪಾಠ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ತಂದೆಯನ್ನು ಕಳೆದುಕೊಂಡು ಕಣ್ಣಲ್ಲಿ ನೀರು ತುಂಬಿಕೊಂಡ ವಿದ್ಯಾರ್ಥಿನಿ, ಅಜ್ಜನ ಶವ ನೋಡಿ ಮರೆಯಲಾಗದ ಮೊಮ್ಮಗಳು, ತಮ್ಮನನ್ನು ಕಳೆದುಕೊಂಡ ಅಕ್ಕ, ಹೀಗೆ ಒಬ್ಬೊಬ್ಬ ವಿದ್ಯಾರ್ಥಿಯದ್ದು ಒಂದೊಂದು ಸಂಕಟ. ಕೆಲವರಂತೂ ಅತ್ತಿದ್ದಾರೆ. ಶಿಬಿರದಲ್ಲಿ ಆಶ್ರಯ ಪಡೆದಿರುವ ಬಹುತೇಕ ವಿದ್ಯಾರ್ಥಿಗಳಿಗೆ ಸಮವಸ್ತ್ರವಿಲ್ಲ. ಈ ಹಿಂದೆ ತಮ್ಮ ಬಳಿಯಿದ್ದ ಪಠ್ಯಪುಸ್ತಕಗಳು, ನೋಟ್ಸ್ ನೀರು ಪಾಲಾಗಿವೆ. ವಿದ್ಯಾರ್ಥಿಗಳನ್ನು ಸಹಜ ಸ್ಥಿತಿಗೆ ತರುವುದಕ್ಕಾಗಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ.

Translate »