ಒಂಟಿ ಮಹಿಳೆ ಹತ್ಯೆ ಪ್ರಕರಣ: ಮೂವರು ಹಂತಕರ ಬಂಧನ: ಹಣ, ಆಭರಣಕ್ಕೆ ನಡೆದ ಕೊಲೆ
ಕೊಡಗು

ಒಂಟಿ ಮಹಿಳೆ ಹತ್ಯೆ ಪ್ರಕರಣ: ಮೂವರು ಹಂತಕರ ಬಂಧನ: ಹಣ, ಆಭರಣಕ್ಕೆ ನಡೆದ ಕೊಲೆ

March 2, 2019

ಮಡಿಕೇರಿ: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಳದಾಳು ಗ್ರಾಮದಲ್ಲಿ ಫೆ.21ರಂದು ನಡೆದಿದ್ದ ಕರ್ಣಯನ ರಾಧ(72) ಎಂಬ ಒಂಟಿ ಮಹಿಳೆ ಕೊಲೆ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಶಾಲನಗರ ಗೋಂದಿ ಬಸವನಹಳ್ಳಿ ನಿವಾಸಿ ಸುಬ್ರಮಣಿ (24), ಮುಳ್ಳುಸೋಗೆಯ ಪಾಕಮುಕ್ಕಾಟಿ ಮದನ್(20) ಮತ್ತು ಗೋಂದಿ ಬಸವನಹಳ್ಳಿಯ ಕಾವ್ಯ ಅಲಿಯಾಸ್ ಶ್ವೇತ ಬಂಧಿತ ಆರೋಪಿಗಳಾಗಿದ್ದು, ಚಿನ್ನಾಭರಣ ಮತ್ತು ಹಣ ದೋಚುವ ಉದ್ದೇಶದಿಂದಲೇ ಕೊಲೆ ಮಾಡಿರುವುದಾಗಿ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಘಟನೆ ಹಿನ್ನಲೆ: ಫೆ.21ರಂದು ಕುಂಬಳದಾಳು ಗ್ರಾಮದ ನಿವಾಸಿ ರಾಧ ಅವರನ್ನು ದುಷ್ಕರ್ಮಿಗಳು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ ಲ್ಲದೇ, ಮನೆಯಲ್ಲಿದ್ದಚಿನ್ನಾಭರಣ ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದರು. ರಾಧ ಕೊಲೆಯಾಗಿರುವ ವಿಚಾರ ಫೆ.23ರಂದು ಬಯಲಾಗಿತ್ತಲ್ಲದೇ, ನಾಪೋಕ್ಲು ಪೊಲೀಸರು ಮೊಕದ್ದಮೆ (ಸಂಖ್ಯೆ 20/2019 ಕಲಂ 449, 302, 394ರೆ.ವಿ.34 ಐಪಿಸಿ ಸೆಕ್ಷನ್ ಅಡಿಯಲ್ಲಿ) ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಯನ್ನು ಅರಿತ ಜಿಲ್ಲಾ ಪೊಲೀಸ್ ಎಸ್‍ಪಿ ಸುಮನ್ ಪಣ್ಣೇಕರ್, ಮಡಿಕೇರಿ ಡಿವೈಎಸ್ಪಿ ಸುಂದರ್ ರಾಜ್ ನೇತೃತ್ವದಲ್ಲಿ 2 ತಂಡ ಗಳನ್ನು ರಚನೆ ಮಾಡಿದ್ದರು. ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಸಿದ್ದಯ್ಯ ಮತ್ತು ಜಿಲ್ಲಾ ಅಪರಾಧ ಪತ್ತೆ ದಳದ ವೃತ್ತ ನಿರೀಕ್ಷಕ ಮಹೇಶ್ ಮುಂದಾಳತ್ವದಲ್ಲಿ ತನಿಖೆ ನಡೆಸಿದ ಪೊಲೀಸರು, ಕುಂಬಳದಾಳು ಗ್ರಾಮದ ಸುತ್ತಮುತ್ತ ಲಿನ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದವರ ಮಾಹಿತಿ ಕಲೆ ಹಾಕಿದ್ದರು. ಈ ಪೈಕಿ ಕೆಲ ದಿನಗಳ ಹಿಂದೆಯಷ್ಟೆ ರಾಧ ಅವರ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದ್ದ ಸುಬ್ರಮಣಿ, ಮಧು ಮತ್ತು ಕಾವ್ಯರನ್ನು ವಿಚಾರಣೆ ನಡೆಸಿದ ಸಂದರ್ಭ ಆರೋಪಿಗಳು ಹಣ ಮತ್ತು ಚಿನ್ನಾಭರಣ ದೋಚುವ ಉದ್ದೇಶ ದಿಂದ ಈ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಒಂಟಿ ಮಹಿಳೆ ಕಾಫಿಯನ್ನು ಮಾರಿದ್ದ ವಿಚಾರ ತಿಳಿದಿದ್ದ ಆರೋಪಿಗಳ ಪೈಕಿ ಸುಬ್ರಮಣಿ ಎಂಬಾತನಿಗಿದ್ದ ಹಣದ ಮುಗ್ಗಟ್ಟನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ಅಡುಗೆ ಮನೆಯಲ್ಲಿದ್ದ ರಾಧ ಅವರನ್ನು ಹಿಂಬದಿಯಿಂದ ತೆರಳಿ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದಾಗಿಯೂ ಬಳಿಕ ಯಾರಿಗೂ ಅನುಮಾನ ಬರದಿರಲೆಂದು ರಾಧ ಅವರನ್ನು ಹಾಸಿಗೆಯ ಮೇಲೆ ಎತ್ತಿ ಹಾಕಿ ಮನೆಯಿಂದ ಕಾಲ್ಕಿತ್ತಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳು ಮೈಸೂರಿನಲ್ಲಿ ಚಿನ್ನಾಭರಣ ಮಾರಾಟ ಮಾಡಿದ್ದನ್ನು ವಶಕ್ಕೆ ಪಡೆದಿರುವ ಪೊಲೀಸರು, 7 ಸಾವಿರ ನಗದು, ಒಂದು ರೆಡ್‍ಮೀ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Translate »