ಸ್ಪೀಕರ್‍ಗೆ 50 ಕೋಟಿ ಲಂಚ ಆರೋಪ ಎಸ್‍ಐಟಿ ತನಿಖೆ
ಮೈಸೂರು

ಸ್ಪೀಕರ್‍ಗೆ 50 ಕೋಟಿ ಲಂಚ ಆರೋಪ ಎಸ್‍ಐಟಿ ತನಿಖೆ

February 12, 2019
  • ಸದನದಲ್ಲಿ ಆಪರೇಷನ್ ಕಮಲ ಆಡಿಯೋ ಸದ್ದು-ಗದ್ದಲ
  • ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕಟ
  • 15 ದಿನದಲ್ಲಿ ತನಿಖಾ ವರದಿ ಮಂಡಿಸುವ ಭರವಸೆ
  • ಲಂಚ ಆರೋಪದ ಬಗ್ಗೆ ಭಾವನಾತ್ಮಕವಾಗಿ ಅಭಿಪ್ರಾಯ ಮಂಡಿಸಿದ ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು: ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಸಲಹೆ ಮೇರೆಗೆ ವಿವಾದಿತ ಆಪರೇಷನ್ ಕಮಲ ಧ್ವನಿಸುರುಳಿ ಮುದ್ರಿಕೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಕಟಿಸಿದರು.

ಸದನ ಬೆಳಿಗ್ಗೆ ಸಮಾವೇಶಗೊಳ್ಳುತ್ತಿ ದ್ದಂತೆ ಸಭಾಧ್ಯಕ್ಷರು ವಿಷಯ ಪ್ರಸ್ತಾಪಿಸಿ, ತಮ್ಮ ವಿರುದ್ಧ 50 ಕೋಟಿ ರೂ. ಲಂಚ ಆರೋಪ ಕೇಳಿ ಬಂದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೆ ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣದ ಎಲ್ಲಾ ಘಟನಾವಳಿಗಳÀ ಕುರಿತು ಸಭಾಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸುವ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪಂಚಾ ಯತ್ ರಾಜ್ ಸಚಿವ ಕೃಷ್ಣಭೈರೇಗೌಡÀ ನೀವು ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂಬ ನಿಲುವಿಗೆ ಸದನದ ಬಹುತೇಕ ಸದಸ್ಯರು ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅನಿಸಿಕೆ ವ್ಯಕ್ತಪಡಿಸಿದ ನಂತರ ರಮೇಶ್‍ಕುಮಾರ್, ನನ್ನ ಮೇಲೆ ಬಂದಿ ರುವ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಿ, ತನಿಖೆ ನಡೆಸಿ. ಸಭಾಧ್ಯಕ್ಷ ಪೀಠದಲ್ಲಿ ಕುಳಿತು ತನಿಖೆಗೆ ಆದೇಶ ಮಾಡುತ್ತಿಲ್ಲ. ಸರ್ಕಾರಕ್ಕೆ ಸಲಹೆ ನೀಡುತ್ತಿದ್ದೇನೆ. ಇದನ್ನು ನನ್ನ ಆದೇಶ ಎಂದು ಕೊಳ್ಳಿ ಎಂದರು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತನಿಖಾ ನಿರ್ಧಾರ ಪ್ರಕಟಿ ಸಿದ್ದಲ್ಲದೆ, ಸರ್ಕಾರ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು, ಜನಪ್ರತಿನಿಧಿಗಳ ಬಗ್ಗೆ ಜನ ಅನುಮಾನಪಡುವಂತೆ ಮಾಡಿದೆ. ಇದಕ್ಕೆ ಇತಿಶ್ರೀ ಹಾಡಲೇಬೇಕಾದ ಅಗತ್ಯ ವಿದೆ. ಸರ್ಕಾರ ರಚನೆಯಾದಂದಿನಿಂದ ಇಲ್ಲಿಯವರೆಗೆ ಈ ಸರ್ಕಾರ ಅಭದ್ರವಾ ಗಿದೆ ಎಂಬ ಭಾವನೆಯನ್ನು ಮೂಡಿಸುವ ಪ್ರಯತ್ನಗಳಾಗುತ್ತಿವೆ. ಇದು ಸರಿಯಲ್ಲ. ನಾಡಿನ ಜನರ ಹಿತ ಕಾಪಾಡುವ ಕೆಲಸ ಕ್ಕಿಂತ ಸರ್ಕಾರ ಅಭದ್ರವಾಗಿದೆ ಎಂಬ ಭಾವನೆ ಬೆಳೆಯುವಂತೆ ಮಾಡಿದರೆ ಪರಿ ಸ್ಥಿತಿ ಏನಾಗುತ್ತದೆ ಎಂದು ಅವರು ವಿಷಾದಿ ಸಿದರು. ಇಂತಹ ಬೆಳವಣಿಗೆಗಳನ್ನು ಈಗ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಪರಿ ಸ್ಥಿತಿ ಕಷ್ಟಕರವಾಗಲಿದೆ. ಹೀಗಾಗಿ ಎಸ್‍ಐಟಿ ರಚಿಸಿ ಸಮಗ್ರ ತನಿಖೆ ನಡೆಸುತ್ತೇವೆ. ಹದಿನೈದು ದಿನಗಳಲ್ಲಿ ವರದಿ ತರಿಸುತ್ತೇವೆ ಎಂದರು. ಈ ಹಂತದಲ್ಲಿ ಬಿಜೆಪಿ ಸದಸ್ಯರು ಇಡೀ ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವು ದಕ್ಕೂ ಮತ್ತು ಮುಖ್ಯಮಂತ್ರಿಯವರು ಏಕಪಕ್ಷೀಯ ತನಿಖೆ ನಡೆಸಬಹುದೆಂಬ ಸಂಶಯ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಯವರು ತನಿಖೆ ಯಾವ ಸ್ವರೂಪದಲ್ಲಿರಬೇಕು ಎಂಬುದರ ಬಗ್ಗೆ ಸಭಾಧ್ಯಕ್ಷರೇ ನಿರ್ಧರಿಸಲಿ, ಅವರ ಮಾರ್ಗದರ್ಶನದಂತೆ ತನಿಖೆ ನಡೆಯಲಿ ಎಂದು ತಿಳಿಸಿದರು.

ಸದನಕ್ಕೆ ಮಾಡಿದ ಅವಮಾನ: ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ, ಆಡಿಯೋ ಕ್ಯಾಸೆಟ್‍ನಲ್ಲಿ ನಿಮಗೆ ಐವತ್ತು ಕೋಟಿ ರೂ ನೀಡಿ, ಬುಕ್ ಮಾಡಲಾಗಿದೆ ಎಂಬ ಮಾತನ್ನು ಬಳಸಿರುವುದು ದುರದೃಷ್ಟಕರ. ಇದು ನಿಮಗೆ ಮಾಡಿರುವ ಅಪಮಾನವಲ್ಲ. ಇಡೀ ಸದನಕ್ಕೆ ಮಾಡಿದ ಅಪಮಾನ.

ತಮ್ಮ ಮಾತಿಗೆ ಪೂರಕವಾಗಿ ‘ಕೌಲ್ ಅಂಡ್ ಶಕ್ದರ್’ ಅವರ ಪುಸ್ತಕದಲ್ಲಿ ಪ್ರಸ್ತಾಪ ವಾಗಿರುವ ಸಭಾಧ್ಯಕ್ಷರ ವಿವೇಚನೆ ಎಂಬ ಅಧ್ಯಾಯದ ಬಗ್ಗೆ ವಿವರಿಸಿ, ಇಂತಹ ಸನ್ನಿವೇಶಗಳು ಬಂದಾಗ ಸಮಗ್ರ ತನಿಖೆ ನಡೆಸಬೇಕಾಗುತ್ತದೆ ಎಂದರು. ಸಭಾಧ್ಯಕ್ಷರು ಮುಂದುವರೆದು, ಧ್ವನಿ ಸುರಳಿ ಆಲಿಸಿದ ನಂತರ ನಾನು ಅಲ್ಲಿದ್ದ ಎಲ್ಲ ವಿಷಯಗಳ ಬಗ್ಗೆ ಒಂದು ನಿರ್ಧಾರಕ್ಕೆ ಬರದಿದ್ದರೂ ನಿರ್ದಿಷ್ಟ ವ್ಯಕ್ತಿಯೊಬ್ಬರ ಮಾತಿನ ಬಗ್ಗೆ ಒಂದು ತೀರ್ಮಾನಕ್ಕೆ ಬಂದಿದ್ದೇನೆ. ಅವರು ಮಾತಿನ ನಡುವೆ ಈ ಹಿಂದೆಯೂ ನಾವು ಹನ್ನೆರಡು ಜನ ಸದಸ್ಯರ ಬಗ್ಗೆ ಅಂದಿನ ಸಭಾಧ್ಯಕ್ಷರು ಒಂದು ತೀರ್ಮಾನ ತೆಗೆದುಕೊಂಡಿದ್ದರು. ಆದರೂ ನಾವು ಬಚಾವಾಗಲಿಲ್ಲವೇ ಎಂದು ಹೇಳುತ್ತಾರೆ.

ಇದನ್ನು ಕೇಳಿದರೆ ಅವರು ಈಗಲೂ ಈ ಸದನದಲ್ಲಿದ್ದಾರೆ. ಮತ್ತು ಇಂತಹ ವಿಷಯ ದಲ್ಲಿ ಭರವಸೆ ತುಂಬುವ ಮಾತನಾಡಿದ್ದಾರೆ ಎಂದಾಗ ಮರಳಿ ಕೃಷ್ಣಭೈರೇಗೌಡ, ವಿಷಯ ಸ್ಪಷ್ಟವಾಗಿರುವುದರಿಂದ ಒಂದು ವಿಷಯ ಸ್ಪಷ್ಟವಾಗಿದೆ. ಈಗ ಆಗಿರುವುದು ಕೇವಲ ಸಭಾಧ್ಯಕ್ಷರ ಹಕ್ಕುಚ್ಯುತಿಯಲ್ಲ. ಈ ಸದನದ ಹಕ್ಕುಚ್ಯುತಿ. ಹೀಗಾಗಿ ನೀವು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲೇಬೇಕು ಎಂದರು. ಆದರೆ ಮಧ್ಯೆ ಪ್ರವೇಶಿಸಿದ ಬಿಜೆಪಿಯ ಮಾಧುಸ್ವಾಮಿ,ಇದು ಸದನದಲ್ಲಿ ನಡೆದ ಘಟನೆಯಲ್ಲ. ಎಲ್ಲೋ, ಯಾರೋ ಮಾತನಾಡಿದ ವಿಚಾರ. ಈ ಸದನದಲ್ಲಿ ಇಂತಹ ಘಟನೆ ನಡೆದಿದ್ದರೆ ಯಾವುದೇ ಹಿಂಜರಿಕೆಯಿಲ್ಲದೆ ಕ್ರಮ ಕೈಗೊಳ್ಳಲು ನಾವು ಬೆಂಬಲ ನೀಡುತ್ತಿದ್ದೆವು ಎಂದರು.
ನೀವು ಮಾತನಾಡಿದರೆ ನಮಗೆ ಹೆದರಿಕೆಯಾಗುತ್ತೆ!

ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಸಭಾ ಧ್ಯಕ್ಷರು ಈ ವಿಷಯದಲ್ಲಿ ಅವಸರದ ತೀರ್ಮಾನ ತೆಗೆದು ಕೊಳ್ಳುವುದು ಬೇಡ. ಮೊದಲು ಒಂದು ತನಿಖೆ ನಡೆಯಲಿ. ಇದನ್ನು ಯಾರು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂಬರ್ಥದಲ್ಲಿ ನೀವು ಮಾತನಾಡಿದರೆ ನಮಗೆ ಹೆದರಿಕೆ ಯಾಗುತ್ತದೆ. ಹಾಗಾಗದಿರಲಿ. ಕ್ರಮದ ಬದಲು ಮೊದಲು ತನಿಖೆ ನಡೆಯಲಿ ಎಂದರು. ಈ ಹಂತದಲ್ಲಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರ ಕಡೆ ತಿರುಗಿ, ನಾನು ಈ ಜಾಗದಲ್ಲಿ ಕೂರುವಂತೆ ನೀವು ಸೂಚಿಸಿದವರು. ಇವತ್ತು ಈ ಜಾಗಕ್ಕೂ, ನನಗೂ ಯಾವ ಸಂಬಂಧವೂ ಇಲ್ಲದಂತೆ ಕೂತಿದ್ದೀರಿ. ಆ ಮೂಲಕ ನಡು ನೀರಿನಲ್ಲಿ ನನ್ನ ಕೈ ಬಿಟ್ಟಿದ್ದೀರಿ.ಒಂದು ಚಕಾರ ಎತ್ತುತ್ತಿಲ್ಲ ಎಂದು ವಿಷಾದ ಭರಿತವಾಗಿ ಹಾಸ್ಯ ಮಾಡಿದರು. ತಕ್ಷಣ ಮಾತನಾಡಿದ ಸಿದ್ದರಾಮಯ್ಯ, ನಿಮ್ಮ ಮೇಲೆ ಬಂದಿರುವ ಆರೋಪವನ್ನು ಈ ಸದನವೇ ನಂಬುವುದಿಲ್ಲ. ಗುರುತರವಾದ ವಿಷಯವನ್ನು ಇಷ್ಟಕ್ಕೇ ಬಿಡಲಾಗುವುದಿಲ್ಲ. ವಿಷಯದ ಬಗ್ಗೆ ಈಗಾಗಲೇ ನಾಡಿನ ಜನ ಮಾತನಾಡುತ್ತಿದ್ದಾರೆ.

ಅವರಿಗೆ ಸತ್ಯ ತಿಳಿಯಬೇಕಲ್ಲ. ಹಾಗಾಗದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಜನ ಏನು ಮಾತನಾಡುತ್ತಿದ್ದಾರೆ? ಅನ್ನುವುದು ಎಲ್ಲರಿಗೂ ಗೊತ್ತಿದೆ.ಹೀಗಿರುವಾಗ ನಾವು ಸುಮ್ಮನಿದ್ದರೆ ಮತ್ತೆ ತಪ್ಪು ಸಂದೇಶ ರವಾನಿಸಿದಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಕೃಷ್ಣ ಭೈರೇಗೌಡ ಪುನಃ ಮಾತನಾಡಿ, ಸೀಸರನ ಪತ್ನಿ ಸಂಶಯಾತೀತಳಾಗಿರಬೇಕು. ಆಕೆ ತಪ್ಪು ಮಾಡದಿ ದ್ದರೂ ಇದು ಅನಿವಾರ್ಯ. ಹಾಗೆಯೇ ನಿಮ್ಮ ಮೇಲಿನ ಆರೋಪ ಸುಳ್ಳಾದರೂ ಅದರ ಬಗ್ಗೆ ಸಂಶಯ ಉಳಿಯಲು ಬಿಡಬಾರದು ಎಂದು ಮನವಿ ಮಾಡಿಕೊಂಡರು.
ಕಳ್ಳ ಕಳ್ಳ!: ಈ ಹಂತದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್,ಹಿಂದೆ ಜನಪ್ರತಿನಿಧಿಗಳನ್ನು ಜನರು ದೇವರು ಎಂದು ಕಾಣುವ ಕಾಲವಿತ್ತು.ಆದರೆ ಈಗ ಕಳ್ಳ,ಕಳ್ಳ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಿಮ್ಮ ಮೇಲೆ ಕೇಳಿ ಬಂದ ಆರೋಪದಂತಹ ಘಟನೆಗಳು ಮರುಕಳಿಸದಂತೆ ನೀವು ಕ್ರಮ ಕೈಗೊಳ್ಳಬೇಕು. ಆದರೆ ನೀವು ಭಾವನಾತ್ಮಕ ಸ್ವಭಾವದವರು. ಹೀಗಾಗಿ ಅದನ್ನು ನಿಯಂತ್ರಣದಲ್ಲಿಟ್ಟು ಕೊಂಡು ಒಂದು ನಿರ್ಧಾರಕ್ಕೆ ಬನ್ನಿ ಎಂದು ಮನವಿ ಮಾಡಿಕೊಂಡರು.

ಸಭಾಧ್ಯಕ್ಷರ ಮಾತಿಗೆ ಸ್ಪಂದಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಈ ವಿಷಯದಲ್ಲಿ ನಾವು ಸ್ಪಷ್ಟವಾದ ನಿರ್ಧಾರ ಕೈಗೊಳ್ಳಬೇಕಿದೆ. ಕೈಗೊಳ್ಳುತ್ತೇವೆ. ನೀವು ನೀಡಿದ ಸೂಚನೆಯಂತೆ ವಿಶೇಷ ತನಿಖಾ ದಳವನ್ನು ರಚನೆ ಮಾಡಿ ಹದಿನೈದು ದಿನಗಳಲ್ಲಿ ವರದಿ ತರಿಸುತ್ತೇವೆ ಎಂದರು. ಈ ಹಂತದಲ್ಲಿ ಮಾಧುಸ್ವಾಮಿ, ಗೋವಿಂದ ಕಾರಜೋಳ್ ಸೇರಿದಂತೆ ಹಲವು ಸದಸ್ಯರು ಎಸ್‍ಐಟಿ ಬದಲು ಸದನ ಸಮಿತಿ ರಚಿಸಿ ಎಂದು ಸಲಹೆ ನೀಡಿದರಾದರೂ ಸಭಾಧ್ಯಕ್ಷರು ಅದನ್ನೊಪ್ಪಲಿಲ್ಲ.

ಮನೆಯವರಿಗೆ ಮುಖ ತೋರಿಸಲಾಗುತ್ತಿಲ್ಲ…!
ಸದನ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು, ನನಗೆ ಶುಕ್ರವಾರ ಮುಖ್ಯಮಂತ್ರಿಗಳು ಪತ್ರ ಹಾಗೂ ಧ್ವನಿಸುರುಳಿಯೊಂದನ್ನು ನೀಡಿದರು. ದುರದೃಷ್ಟವೆಂದರೆ ಅದರಲ್ಲಿ ನಡೆದ ಚರ್ಚೆಯ ವಿವರಗಳು ನನ್ನನ್ನು ನಾಡಿನ ಜನ ಸಂಶಯದಿಂದ ನೋಡು ವಂತಿದ್ದವು ಎಂದರು. ಚರ್ಚೆ ನಡೆಸುವವರ ಪೈಕಿ ಒಬ್ಬರು ಒಂದು ಹಂತದಲ್ಲಿ,ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಶಾಸಕತ್ವ ಅನರ್ಹಗೊಳ್ಳುವುದಿಲ್ಲವೇ ಎಂದು ಕೇಳುತ್ತಾರೆ. ಆಗ ಮತ್ತೊಬ್ಬರು, ಅದನ್ನೆಲ್ಲ ನಾವು ಮ್ಯಾನೇಜ್ ಮಾಡಿದ್ದೇವೆ. ಹಾಗಾಗದಂತೆ ನೋಡಿಕೊಳ್ಳಲು ಸಭಾಧ್ಯಕ್ಷ ರಮೇಶ್‍ಕುಮಾರ್ ಅವರಿಗೆ ಐವತ್ತು ಕೋಟಿ ರೂ ನೀಡಿ ಬುಕ್ ಮಾಡಿದ್ದೇವೆ ಎನ್ನುತ್ತಾರೆ. ಇದನ್ನು ಕೇಳಿದ ಮೇಲೆ ನಾನು ಭಾವನಾತ್ಮಕ ವಾಗಿ ಕುಸಿದು ಹೋಗಿದ್ದೇನೆ.ಆದರೂ ಸಂವಿಧಾನಾತ್ಮಕವಾಗಿ ಬಜೆಟ್ ಮುಖ್ಯವಾದುದರಿಂದ ಶುಕ್ರವಾರ ಅದನ್ನು ಮಂಡಿ ಸಲು ನಾನು ಅವಕಾಶ ನೀಡಿದೆ. ಆದರೆ ನಂತರ ಶನಿವಾರ, ಭಾನುವಾರ ರಜೆಯಾದ್ದರಿಂದ ಮನೆಯವರಿಗೆ ಮುಖ ತೋರಿಸಲಾಗದೆ ರೈಲು ಹತ್ತಿ ರಾಯಚೂರಿಗೆ ಹೋದೆ.ಆನಂತರ ರಸ್ತೆ ಮುಖಾಂತರವಾಗಿ ವಾಪಸ್ಸಾಗಿದ್ದೇನೆ.

ಧ್ವನಿ ಸುರುಳಿಯಲ್ಲಿ ನನ್ನ ಬಗ್ಗೆ ಆಡಿದ ಮಾತು, ಅದೇ ರೀತಿ ಈ ದೇಶದ ಪ್ರಧಾನಿಯನ್ನು ಸೇರಿಸಿರುವ ರೀತಿ, ಸಂವಿಧಾನಾತ್ಮಕ ಸಂಸ್ಥೆಗಳ ಮುಖ್ಯಸ್ಥರ ಬಗ್ಗೆ ಆಡಿರುವ ಮಾತು ನನಗೆ ಆತಂಕ ಮೂಡಿಸಿದೆ. ನಾನು ವಾಸವಾಗಿರುವ ಬಾಡಿಗೆ ಮನೆಯನ್ನು ಒಮ್ಮೆ ಬಂದು ನೋಡಿ ಐವತ್ತು ಕೋಟಿ ರೂಪಾಯಿ ಪಡೆದಿದ್ದರೆ ಒಂದೋ ಅದನ್ನು ಅಲ್ಲಿ ಮುಚ್ಚಿಡಬೇಕು. ಯಾವುದೇ ಕಾರಣಕ್ಕೂ ಎಸೆಯಲಾಗುವುದಿಲ್ಲವಲ್ಲ ಆದರೂ ನನಗೆ ಈ ಬೆಳವಣಿಗೆಯ ನಂತರ ಮನಸ್ಸು ನೋವಿಗೀಡಾಗಿದೆ.

ನಾನು ನನ್ನ ತಂದೆ, ತಾಯಿಗೆ ಎಂಟನೇ ಮಗ. ಬಡತನದಲ್ಲಿದ್ದ ನಮ್ಮ ಕುಟುಂಬದ ಸದಸ್ಯರಿಗೆ ನಮ್ಮ ತಾಯಿ ಒಂದು ಮಾತು ಹೇಳುತ್ತಿದ್ದರು. ಉಳ್ಳವರ ಮನೆಗೆ ಹೋಗಿ ವಾಪಸ್ಸು ಬರುವಾಗ ಕಾಲನ್ನು ನೆಲಕ್ಕೆ ಹಾಕಿ ಉಜ್ಜಿ ಬಿಡಿ. ಯಾಕೆಂದರೆ ಅವರ ಮನೆಯ ಧೂಳೂ ನಮ್ಮ ಕಾಲಲ್ಲಿರಬಾರದು ಅಂತ. ಅಂತಹ ತಾಯಿಯ ಮಗ ನಾನು.ಆಕೆಯೇ ನನ್ನ ಟೀಚರ್, ಫಿಲಾಸಫರ್, ಗೈಡ್, ಹೀಗಿರುವಾಗ ಐವತ್ತು ಕೋಟಿ ರೂಪಾಯಿಗಳ ಲಂಚವನ್ನು ಪಡೆದಿದ್ದೇನೆ ಎಂಬ ಮಾತು ಬಂದಿದೆ. ಮತ್ತದು ನಾಡಿನಾದ್ಯಂತ ಪಸರಿಕೊಂಡಿದೆ. ಹೀಗಿರುವಾಗ ನಾನು ನನ್ನ ಹೆಂಡತಿ, ಮಕ್ಕಳು, ಇರುವ ಅಣ್ಣನನ್ನು ಯಾವ ಮುಖ ಎತ್ತಿಕೊಂಡು ನೋಡಲಿ ಎಂದು ಪ್ರಶ್ನಿಸಿದರು.

ಸದನ ಸಮಿತಿ ಇಲ್ಲವೇ ನ್ಯಾಯಾಂಗ ತನಿಖೆ ನಡೆಸಿ
ಆಪರೇಷನ್ ಧ್ವನಿ ಸುರುಳಿ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ವಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ಬಿಜೆಪಿ, ಸದನ ಸಮಿತಿ ಇಲ್ಲವೆ ನ್ಯಾಯಾಂಗ ತನಿಖೆಗೆ ವಹಿಸಿ ಎಂದು ವಿಧಾನ ಸಭೆಯಲ್ಲಿಂದು ಆಗ್ರಹಿಸಿದೆ. ಭೋಜನ ವಿರಾಮಕ್ಕೂ ಮುನ್ನ ಎಸ್‍ಐಟಿ ತನಿಖೆಗೆ ಸಮ್ಮತಿಸಿ ಹೊರ ನಡೆದ ಬಿಜೆಪಿ ಸದಸ್ಯರು ನಂತರ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದರು. ಬಿಜೆಪಿ ಸದಸ್ಯರ ಕೋರಿಕೆ ನಯವಾಗಿ ತಳ್ಳಿ ಹಾಕಿದ ಸಭಾಧ್ಯಕ್ಷ ರಮೇಶ್‍ಕುಮಾರ್, ನೀವು ಹೇಳಿದ ಎರಡು ತನಿಖೆಗಳಿಂದ ನನಗೆ ತ್ವರಿತ ನ್ಯಾಯ ದೊರೆಯುವುದಿಲ್ಲ. ಅದರಲ್ಲೂ ನನ್ನ ವ್ಯಾಪ್ತಿಯಲ್ಲಿ ನ್ಯಾಯಾಂಗ ತನಿಖೆ ನಡೆಸಲು ಸಾಧ್ಯವೇ ಇಲ್ಲ. ನನ್ನ ರೂಲಿಂಗ್‍ನಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿ ಸಿದರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ತಮ್ಮ ಪಟ್ಟಿಗೆ ಅಂಟಿ ಕೊಂಡಿದ್ದಲ್ಲದೆ, ಧ್ವನಿಸುರುಳಿಯನ್ನು ಬಹಿರಂಗ ಪಡಿಸಿರುವುದೇ ಮುಖ್ಯಮಂತ್ರಿ ಕುಮಾರಸ್ವಾಮಿ. ಅವರಡಿಯಲ್ಲಿ ಬರುವ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಿದರೆ, ನಮಗೆ ನ್ಯಾಯ ದೊರೆ ಯುವುದಿಲ್ಲ. ರಾಜ ಕೀಯವಾಗಿ ಇದನ್ನು ಬಳಸಿಕೊಳ್ಳುತ್ತಾರೆ ಎಂದು ದೂರಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

Translate »