ಮೈಸೂರಲ್ಲಿ ಸಂಕ್ರಾಂತಿ ಸಡಗರ
ಮೈಸೂರು

ಮೈಸೂರಲ್ಲಿ ಸಂಕ್ರಾಂತಿ ಸಡಗರ

January 15, 2019

ಮೈಸೂರು: ಸಂಕ್ರಾಂತಿ ಹಬ್ಬ ಆಚರಣೆಗೆ ಮೈಸೂರಲ್ಲಿ ಸಡಗರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎಳ್ಳು-ಬೆಲ್ಲ ಬೀರಲು ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಸಾಮಗ್ರಿ ಹಾಗೂ ಹೊಸ ಉಡುಪುಗಳ ಖರೀದಿಯಲ್ಲಿ ನಿರತರಾಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ದನಗಳಿಗೆ ಕಿಚ್ಚು ಹಾಯಿಸಲು ಸಂಭ್ರಮದ ಸಿದ್ಧತೆ ನಡೆದಿದೆ.

ಇಂದು ಮೈಸೂರಿನ ದೇವರಾಜ ಮಾರುಕಟ್ಟೆ, ಶಿವರಾಂಪೇಟೆ, ಸಂತೇಪೇಟೆ, ಕೆ.ಆರ್. ಮಾರುಕಟ್ಟೆಗಳಲ್ಲಿ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಕಡಲೆಕಾಯಿ ಬೀಜ, ಉರಿಗಡಲೆ ಮಾರಾಟ ಬಲು ಜೋರಾಗಿತ್ತು. ಬೆಲೆ ಹೆಚ್ಚಾಗಿದ್ದರೂ, ಜನರು ಮಾತ್ರ ಅಂಗಡಿಗಳಿಗೆ ಮುಗಿಬಿದ್ದು, ಖರೀದಿಸುತ್ತಿದ್ದುದು ಕಂಡು ಬಂದಿತು. ಇನ್ನು ದನಕರುಗಳಿಗೆ ಅಲಂಕಾರ ಮಾಡುವ ಕೊಂಬಿನ ಬಣ್ಣ, ಬಣ್ಣಬಣ್ಣದ ಪೇಪರ್‍ಗಳು, ಕೊರಳಿನ ಹಾಗೂ ಕಾಲಿನ ಗೆಜ್ಜೆ, ಬಟ್ಟೆಗಳು ಶಿವರಾಂಪೇಟೆ ರಸ್ತೆ, ಚಿಕ್ಕಗಡಿಯಾರದ ಸುತ್ತಲಿನ ಅಂಗಡಿಗಳಲ್ಲಿ ಮಾರಾಟವಾಗುತ್ತಿದ್ದವು.

ಹಣ್ಣು, ತರಕಾರಿ ಬೆಲೆ ಗಗನಕ್ಕೇರಿದರೂ, ಗ್ರಾಹಕರು ಲೆಕ್ಕಿಸದೆ ದೇವರಾಜ ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದರಲ್ಲದೆ, ಜೆ.ಕೆ.ಮೈದಾನದ ಬಳಿ, ಅಗ್ರಹಾರ ಸರ್ಕಲ್, ಮಾತೃಮಂಡಳಿ ಸರ್ಕಲ್, ರಾಮಕೃಷ್ಣನಗರ ಸರ್ಕಲ್, ಹೆಬ್ಬಾಳಿನ ಸೂರ್ಯ ಬೇಕರಿ ಸರ್ಕಲ್, ಎಸ್‍ಬಿಐ ಎದುರಿನ ಮಾರುಕಟ್ಟೆ ಸೇರಿದಂತೆ ಮೈಸೂರಿನ ಪ್ರಮುಖ ಸರ್ಕಲ್‍ಗಳಲ್ಲಿ ಕಬ್ಬಿನ ಜಲ್ಲೆಗಳ ಮಾರಾಟ ಭರಾಟೆ ಜೋರಾಗಿತ್ತು. ಉಳಿದಂತೆ ಡಿ.ದೇವರಾಜ ಅರಸು ರಸ್ತೆ, ಕಾಳಿದಾಸ ರಸ್ತೆ, ಮಕ್ಕಾಜಿ ಚೌಕ, ಓಲ್ಡ್ ಬ್ಯಾಂಕ್ ರಸ್ತೆಗಳಲ್ಲಿ ಹೊಸ ಉಡುಪುಗಳನ್ನು ಖರೀದಿಸಲು ಜನರು ಮುಗಿಬೀಳುತ್ತಿದ್ದುದು ಸಾಮಾನ್ಯ ವಾಗಿತ್ತು.

ನಾಳೆ(ಜ.15) ಬೆಳಿಗ್ಗೆಯಿಂದ ಸಂಜೆವರೆಗೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಭಕ್ತರು ದೇವರ ದರ್ಶನ ಪಡೆದು ಪರಸ್ಪರ ಸಂಕ್ರಾಂತಿ ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆಯೇ ರಸ್ತೆ, ಸರ್ಕಲ್ ಗಳಲ್ಲಿ ಹುಲ್ಲು, ಹುಲ್ಲಿಗೆ ಬೆಂಕಿ ಹಾಕಿ ದನಕರುಗಳ ಕಿಚ್ಚು ಹಾಯಿಸಿ ರೈತರು ಸಂಭ್ರಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Translate »