ಸಾಮಾಜಿಕ, ಮಾನವೀಯ  ಮೌಲ್ಯಗಳು ಅಪಮೌಲ್ಯವಾಗುತ್ತಿವೆ: ಹಿರಿಯ ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಅಭಿಮತ
ಮೈಸೂರು

ಸಾಮಾಜಿಕ, ಮಾನವೀಯ  ಮೌಲ್ಯಗಳು ಅಪಮೌಲ್ಯವಾಗುತ್ತಿವೆ: ಹಿರಿಯ ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಅಭಿಮತ

July 23, 2018

ಮೈಸೂರು:  ಈಗಿನ ಕೌಟುಂಬಿಕ ಜೀವನದಲ್ಲಿ ಮೌಲ್ಯಗಳ ಪಲ್ಲಟವಾಗುತ್ತಿರುವುದರಿಂದ ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳು ಅಪ ಮೌಲ್ಯವಾಗುತ್ತಿವೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಬೇಸರ ವ್ಯಕ್ತಪಡಿಸಿದರು.

ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಅಖಿಲ ಭಾರತ ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅವರ 74ನೇ ಜನ್ಮದಿನ ಅಂಗವಾಗಿ ಗಣ್ಯರಿಗೆ ಅಭಿನಂದನೆ ಹಾಗೂ `ಭೈರವ ವಿಜಯಾಂಜಲಿ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ದಾಂಪತ್ಯ ಕಟ್ಟಡದ ಇಟ್ಟಿಗೆಗಳು ಸಡಿಲವಾಗುತ್ತಿವೆ. ಪರಂಪರಾ ಗತ ದಾಂಪತ್ಯ ಜೀವನ ಶಿಥಿಲವಾಗುತ್ತಿರುವ ಸಂಕ್ರಮಣ ಕಾಲದಲ್ಲಿ ಪ್ರೊ.ಕೆ.ಭೈರವಮೂರ್ತಿ -ವಿಜಯಾ ಕುಮಾರಿ ಅನ್ಯೋನ್ಯ ಜೀವನ ನಡೆಸಿದ ಕುರುಹಾಗಿ ಹೊರ ಬಂದಿರುವ `ಭೈರವ-ವಿಜಯಾಂಜಲಿ’ ಪುಸ್ತಕ ಕೌಟುಂಬಿಕ ಜೀವನಗಳನ್ನು ತಿಳಿದು ಕೊಳ್ಳಲು ಮೌಲಿಕವಾಗಿದೆ ಎಂದರು.

ಪ್ರೊ.ಕೆ.ಭೈರವಮೂರ್ತಿ-ವಿಜಯ ಕುಮಾರಿ ಉತ್ತರ-ದಕ್ಷಿಣ ಧ್ರುವಗಳು ಅಂದರೆ, ಎತ್ತಣ ಚಾಮರಾಜನಗರ, ಎತ್ತಣ ಮಂಡ್ಯ. ಎಲ್ಲಿಂದ ಎಲ್ಲಿಗೆ ವೈವಾಹಿಕ ಸಂಬಂಧ ಬೆಸುಗೆಯಾಗಿರುವುದರ ಹಿಂದೆ ರೋಚಕತೆ ಯಿದೆ. ಇವರಿಬ್ಬರ ದಾಂಪತ್ಯ ಭಾವನೆಗಳು ಗದ್ಯ-ಪದ್ಯ-ಕಾವ್ಯಗಳ ಸಮ್ಮಿಲನವಾಗಿ ಈ ಪುಸ್ತಕ ಮೂಡಿಬಂದಿದೆ ಎಂದರು.

ಭೈರವಮೂರ್ತಿ ಅವರು ಬರೆಯುವ ಎಲ್ಲಾ ಪುಸ್ತಕಗಳಿಗೆ ನಾನೇ ಮುನ್ನುಡಿ, ಇಲ್ಲವೇ ಬೆನ್ನುಡಿ ಬರೆಯಬೇಕು. ಸಾಲ ದೆಂಬಂತೆ ನಾನೇ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನೂ ಉದ್ಘಾಟಿಸಬೇಕು. ಇದು ಅವರ ಬೇಡಿಕೆ. ಇದು ಸ್ವಲ್ಪ ಹುಚ್ಚು ಅನಿಸಬಹುದು. ಇಲ್ಲವೇ ಮಮತೆಯ ಉರುಳು ಅನ್ನಬಹುದು. ಆದರೆ, ಅವರು ನನ್ನ ಮೇಲಿಟ್ಟಿರುವ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ. ಅದಕ್ಕಾಗಿ ಅವರು ಬರೆದ ಎಲ್ಲಾ ಕೃತಿಗಳಿಗೂ ನಾನೇ ಮುನ್ನುಡಿ ಅಥವಾ ಬೆನ್ನುಡಿ ಬರೆದುಕೊಟ್ಟು, ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿ ಸಲು ಹಿಂದಿನಿಂದಿಲೂ ಬರುತ್ತಿದ್ದೇನೆ ಎಂದು ಹಾಸ್ಯ ಧಾಟಿಯಲ್ಲಿ ಹೇಳಿದರು.

ಪ್ರಸ್ತುತ ದಿನಮಾನದಲ್ಲಿ ಮೌಲ್ಯಗಳ ಬಗ್ಗೆ ಮಾತನಾಡುವುದೇ ಹಾಸ್ಯಾಸ್ಪದ. ಮೌಲ್ಯಗಳನ್ನು ಯಾರೂ ತಮ್ಮ ಜೀವನ ದಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಆದ ಕಾರಣ ಈಗಿನ ಕೌಟುಂಬಿಕ ಜೀವನ ಭಾವನಾತ್ಮಕ ಸಂಬಂಧಗಳಾಗಿ ಉಳಿದಿಲ್ಲ. ತೀರಾ ವ್ಯಾವ ಹಾರಿಕವಾಗಿ ಬಿಟ್ಟಿದೆ. ನೈಜ ಅರ್ಥದಲ್ಲಿ ಮೌಲ್ಯದ ಜೀವನ ಬಡ-ಬಗ್ಗರ ವಸ್ತುವಾಗಿದೆ ಎಂದರು.

ವೇದಿಕೆಯಲ್ಲಿ ಹಿರಿಯ ಸಾಹಿತಿ ಡಾ.ಲತಾ ರಾಜಶೇಖರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಜಯಪ್ಪ ಹೊನ್ನಾಳಿ ಅವರನ್ನು ದಾಸ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಡಿ.ತಿಮ್ಮಯ್ಯ ಸನ್ಮಾನಿಸಿದರು. ಸಂಧ್ಯಾ ಸುರಕ್ಷಾ ಟ್ರಸ್ಟ್ ಬಿ.ಆರ್.ನಟರಾಜ ಜೋಯಿಸ್, ರಂಗಕರ್ಮಿ ನಾ.ನಾಗಚಂದ್ರ ಉಪಸ್ಥಿತರಿದ್ದರು. ಆಕಾಶವಾಣಿ ಕಲಾವಿದೆ ಸುನಂದಮ್ಮ ಜಯಪ್ಪ ಹೊನ್ನಾಳಿ ಪ್ರಾರ್ಥಿಸಿದರು.

Translate »