ಮೈಸೂರು, ಮಾ.18(ಆರ್‍ಕೆಬಿ)- ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮೈಸೂರು ರೈಲು ನಿಲ್ದಾಣದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಮತ್ತು ಮೈಸೂರು ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಹಾಗೂ ವಿಭಾಗೀಯ ಅಧಿಕಾರಿಗಳ ತಂಡ ಬುಧವಾರ ಪರಿಶೀಲಿಸಿತು. ನಿಲ್ದಾಣದಲ್ಲಿ ಸ್ಯಾನಿಟೈಸರ್ ದ್ರಾವಣವನ್ನು ಪುನರಾವರ್ತಿಸುತ್ತಿರುವಂತೆ ಅಪರ್ಣಾ ಗರ್ಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈಲು ನಿಲ್ದಾಣದಲ್ಲಿನ `ಕೋವಿದ್-19’ ಸಹಾಯವಾಣಿಗೆ ದಾರಿ ತೋರುವ ದಿಕ್ಸೂಚಿ ಫಲಕಗಳನ್ನು ನಿಲ್ದಾಣದ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ, ಪಾದಚಾರಿ ಸೇತುವೆ, ಎಸ್ಕಲೇಟರ್, ಲಿಫ್ಟ್ ಸೇರಿದಂತೆ ಪ್ರಯಾಣಿಕರು ಬಂದಿಳಿಯುವ ಸ್ಥಳ ಮತ್ತು ಟಿಕೆಟ್ ಬುಕಿಂಗ್ ಕೌಂಟರ್ ಬಳಿ ಅಳವಡಿಸುವಂತೆ ಸೂಚಿಸಿದರು.
ಸೋಂಕು ತಡೆಗೆ ಎಲ್ಲಾ ಗಾಜಿನ ಫಲಕ, ಬಾಗಿಲು ಮತ್ತು ಕಿಟಕಿಗಳನ್ನು ಸ್ವಚ್ಛಗೊಳಿಸು ವಂತೆ, ಬೋಗಿಗಳ ಒಳ-ಹೊರಗೆ ಸೋಂಕು ನಿವಾರಕ ದ್ರಾವಣ ಯಥೇಚ್ಚವಾಗಿ ಬಳಸಿ ಸ್ವಚ್ಛಗೊಳಿಸಿ ಎಂದು ಯಾಂತ್ರಿಕ ಇಲಾಖೆಗೆ ಸೂಚಿಸಿದರು.
ಅನಧಿಕೃತ ವ್ಯಕ್ತಿಗಳ ಪ್ಲಾಟ್‍ಫಾರಂ ಪ್ರವೇಶ ತಡೆಗೆ ಭದ್ರತಾ ಸಂಸ್ಥೆ ನಿರಂತರ ಕಾರ್ಯ ಪ್ರವೃತ್ತರಾಗಿರಬೇಕು ಎಂದು ನಿರ್ದೇಶನ ನೀಡಿದರು. ನಂತರ ಅಧಿಕಾರಿಗಳ ತಂಡ ಅಶೋಕಪುರಂನ ಮಲ್ಟಿ ಡಿಸಿಪ್ಲಿನರಿ ಟ್ರೈನಿಂಗ್ ಸೆಂಟರ್‍ಗೂ ತೆರಳಿ ಪರಿಶೀಲನೆ ನಡೆಸಿತು.
ಫ್ಲಾಟ್‍ಫಾರಂ ಪ್ರವೇಶ ತುಟ್ಟಿ
ನಿಲ್ದಾಣದಲ್ಲಿ ಜನ ದಟ್ಟಣೆ ತಪ್ಪಿಸುವ ಸಲುವಾಗಿ ಮೈಸೂರು, ಹಾಸನ, ಶಿವಮೊಗ್ಗ ಟೌನ್ ಮತ್ತು ದಾವಣ ಗೆರೆ ರೈಲು ನಿಲ್ದಾಣ ಗಳ ಪ್ಲಾಟ್‍ಫಾರಂ ಟಿಕೆಟ್ ದರವನ್ನು ತಕ್ಷಣ ದಿಂದ 50 ರೂ.ಗೆ (ಈವರೆಗೆ 10ರೂ.) ಏರಿಸಲಾಗಿದೆ.