ದಸಂಸ ಅವಲೋಕನಕ್ಕಾಗಿ ಚಿಂತನಾ ಸಭೆ
ಮೈಸೂರು

ದಸಂಸ ಅವಲೋಕನಕ್ಕಾಗಿ ಚಿಂತನಾ ಸಭೆ

March 19, 2020

ಮೈಸೂರು, ಮಾ.18(ವೈಡಿಎಸ್)- ದಲಿತ ಸಂಘರ್ಷ ಸಮಿತಿಯು ರೈತ ಮತ್ತು ಪ್ರಗತಿಪರ ಚಳವಳಿಗಳಿಗೆ ತಾಯಿ ಇದ್ದಂತೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಹರಿಹರ ಆನಂದಸ್ವಾಮಿ ಹೇಳಿದರು.

ಅಗ್ರಹಾರದ ನವಗ್ರಹ ದೇವಸ್ಥಾನ ರಸ್ತೆಯ ವಿವಿ ಮಾರ್ಕೆಟ್ ಕಟ್ಟಡದಲ್ಲಿ ಆಯೋಜಿಸಿದ್ದ `ದಲಿತ ಸಂಘರ್ಷ ಸಮಿತಿ ಅವ ಲೋಕನಕ್ಕಾಗಿ ಚಿಂತನಾ ಸಭೆ’ ಉದ್ಘಾಟಿಸಿದ ಅವರು, 1970ರ ವೇಳೆ ಬೂಸಾ ಚಳವಳಿ ಪ್ರಾರಂಭವಾದಾಗ ಬಿ.ಬಸವಲಿಂಗಪ್ಪ ಅವರು ವೈದಿಕಶಾಹಿ ನಿಲುವುಗಳನ್ನು ಖಂಡಿಸುತ್ತಿದ್ದರು. ಈ ವೇಳೆ ದಸಂಸ ದೊಡ್ಡ ಚಳವಳಿಯಾಗಿ ಹುಟ್ಟಿಕೊಂಡಿತು. ಮೊದಲನೇ ಬಾರಿಗೆ ಭದ್ರಾವತಿಯಲ್ಲಿ ಕಾರ್ಮಿಕ ಸಂಘಟನೆಯಾಗಿ ಜನ್ಮತಾಳಿ, ದಸಂಸವಾಗಿ ರೂಪ ತಳೆದು ರಾಜ್ಯ ಮತ್ತು ದಕ್ಷಿಣ ಭಾರತದಲ್ಲಿ ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಲ್ಲಿ ಭರವಸೆಯ ಬೆಳಕನ್ನು ಮೂಡಿಸಿತು ಎಂದರು.

ಬುದ್ಧ, ಅಂಬೇಡ್ಕರ್ ಚಿಂತನೆಯೊಂದಿಗೆ ಕಟ್ಟಿದ ಸಂಘಟನೆ 1985ರ ನಂತರ ಬಣಗಳಾಗಿ ವಿಭಜನೆಗೊಂಡಿತು. ಕೆಲವರು ಅಧಿಕಾರಿಶಾಹಿಗಳಿಗೆ ಹತ್ತಿರವಾದರು. ಪರಿಣಾಮ ಸಂಘ ಟನೆಯ ಶಕ್ತಿ ಕುಂದಿತು. ಹಾಗಾಗಿ ಹೋರಾಟದ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಇಂದು ಎಲ್ಲಾ ಬಣಗಳನ್ನು ಒಗ್ಗೂಡಿಸುವ ಅನಿವಾರ್ಯವಿದೆ. ಹಾಗಾಗಿ ಈ ಸಭೆ ಆಯೋಜಿಸಲಾಗಿದೆ ಎಂದರು. ದಸಂಸ ಮುಖಂಡರಾದ ಬಿ.ಡಿ.ಶಿವಬುದ್ದಿ, ಆಲಗೂಡು ಚಂದ್ರಶೇಖರ್, ಎಸ್.ನಾಗರಾಜ್, ಡಿ.ಎನ್.ಬಾಬು, ದಯಾನಂದ ಮತ್ತಿತರರಿದ್ದರು.

Translate »