ಅತೃಪ್ತರ ಆಟಕ್ಕೆ ಸದ್ಯಕ್ಕೆ ಸ್ಪೀಕರ್ ಬ್ರೇಕ್
ಮೈಸೂರು

ಅತೃಪ್ತರ ಆಟಕ್ಕೆ ಸದ್ಯಕ್ಕೆ ಸ್ಪೀಕರ್ ಬ್ರೇಕ್

July 10, 2019

ಬೆಂಗಳೂರು,ಜು.9-ಜೆಡಿಎಸ್‍ನ ಹಿರಿಯ ನಾಯಕ ಮಾಜಿ ಸಚಿವ ಹೆಚ್.ವಿಶ್ವನಾಥ್ ಸೇರಿದಂತೆ ಎಂಟು ಶಾಸಕರು ಸಲ್ಲಿಸಿರುವ ರಾಜೀನಾಮೆ ಕ್ರಮಬದ್ಧವಿಲ್ಲ.

ಕಾಂಗ್ರೆಸ್-ಜೆಡಿಎಸ್‍ನ 14 ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಇದನ್ನು ಅಂಗೀ ಕರಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ರಾಜೀ ನಾಮೆ ಪತ್ರಗಳಿಗೆ ಸಂಬಂಧಿಸಿದಂತೆ ಸಭಾಧ್ಯಕ್ಷರು ನಿನ್ನೆ ಸಂಜೆ ವಿಧಾನಸಭೆಯ ಕಾರ್ಯಾಲಯದ ಅಧಿ ಕಾರಿಗಳು ಮತ್ತು ಕಾನೂನು ತಜ್ಞರೊಟ್ಟಿಗೆ ಸಮಾಲೋಚನೆ ನಡೆಸಿದರು. ಇಂದು ರಾಜೀನಾಮೆ ನೀಡಿದ ಪತ್ರಗಳನ್ನು ಕೂಲಂಕುಶವಾಗಿ ಪರಿಶೀಲನೆ ಮಾಡುವ ಸಂದರ್ಭದಲ್ಲೇ ಕೆಪಿಸಿಸಿ ರಾಜೀ ನಾಮೆ ನೀಡಿ ರುವ ತಮ್ಮ ಪಕ್ಷದ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದೆ. ರಾಜೀನಾಮೆ ಪತ್ರ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಭಾ ಧ್ಯಕ್ಷರು, ಜೆಡಿಎಸ್‍ನ ಸದಸ್ಯ ವಿಶ್ವನಾಥ್ ಸೇರಿದಂತೆ ಎಂಟು

ಶಾಸಕರು ತಮ್ಮ ಸ್ಥಾನ ತೊರೆಯಲು ನೀಡಿರುವ ರಾಜೀನಾಮೆಗಳು ಕ್ರಮಬದ್ಧವಾಗಿಲ್ಲ. ವಿಶ್ವನಾಥ್ ಅಲ್ಲದೆ ಕಾಂಗ್ರೆಸ್‍ನ ರಮೇಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಮಹೇಶ್ ಕುಮಟ ಹಳ್ಳಿ ಅವರ ಅರ್ಜಿಗಳು ಕ್ರಮಬದ್ಧವಾಗಿಲ್ಲ. ಇಂತಹವರಿಗೆ ತಿಳುವಳಿಕೆ ನೋಟಿಸ್ ಕೊಟ್ಟಿದ್ದೇನೆ. ಕಾಂಗ್ರೆಸ್‍ನ ರಾಮಲಿಂಗಾ ರೆಡ್ಡಿ, ಆನಂದ್‍ಸಿಂಗ್, ಪ್ರತಾಪ್ ಗೌಡ, ಜೆಡಿಎಸ್‍ನ ನಾರಾಯಣಗೌಡ ಹಾಗೂ ಗೋಪಾಲಯ್ಯ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿವೆ. ಈ ಹಿನ್ನೆಲೆಯಲ್ಲಿ ಜುಲೈ 12 ರಂದು ಪ್ರತಾಪ್‍ಗೌಡ, ಆನಂದ್‍ಸಿಂಗ್ ಹಾಗೂ ನಾರಾಯಣಗೌಡ ಅವರ ಜೊತೆ ಸಮಾಲೋಚನೆ ಮಾಡಿ, ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೀರಿ ಎಂಬ ಮಾಹಿತಿ ಪಡೆಯುತ್ತೇನೆ.

ನಂತರ ಜುಲೈ 15 ರಂದು ರಾಮಲಿಂಗಾರೆಡ್ಡಿ ಹಾಗೂ ಗೋಪಾಲಯ್ಯ ಅವರನ್ನು ಕರೆದಿದ್ದೇನೆ ಎಂದು ತಿಳಿಸಿದ ಅವರು, ಕಾಂಗ್ರೆಸ್ ಪಕ್ಷದಿಂದ ದೂರು ಬಂದಿದೆ. ಆ ಬಗ್ಗೆ ವಿಚಾರಣೆ ನಡೆಸುತ್ತೇನೆ. ರಾಜೀನಾಮೆ ನೀಡಿದವರು ರಾಜ್ಯಪಾಲರಿಗೂ ದೂರು ನೀಡಿದ್ದರು. ಇದನ್ನು ಪರಿಶೀಲಿಸಿ ಎಂದು ತಮಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ ನೀವು ಸಂವಿಧಾನವನ್ನು ಎತ್ತಿ ಹಿಡಿಯುತ್ತೀರಿ ಎಂಬ ವಿಶ್ವಾಸ ಇದೆ ಎಂದು ರಾಜ್ಯಪಾಲರು ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಅವರಿಗೆ ಪ್ರತಿಯಾಗಿ ಪತ್ರ ಬರೆದಿದ್ದೇನೆ. ಶಾಸಕರು ಖುದ್ದಾಗಿ ತಮ್ಮನ್ನು ಭೇಟಿ ಮಾಡಿ, ರಾಜೀನಾಮೆ ಪತ್ರ ನೀಡಿಲ್ಲ ಎಂದು ನನ್ನ ಪತ್ರದಲ್ಲಿ ಉಲ್ಲೇಖ ಮಾಡಿದ್ದೇನೆ. ಸಾರ್ವಜನಿಕರಿಂದ ಸಾಕಷ್ಟು ದೂರು ಬಂದಿವೆ. ಯಾವ ಪುರುಷಾರ್ಥಕ್ಕಾಗಿ ರಾಜೀನಾಮೆ ಕೊಡುತ್ತಿದ್ದಾರೆ. ಚುನಾವಣೆಗೆ ಹಣ ವ್ಯಯವಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ. ಕೆಲವರು ಸಂವಿಧಾನದ ವಿಚಾರ ಪ್ರಸ್ತಾಪಿಸಿದ್ದಾರೆ. ರಾಜೀನಾಮೆ ಅಂಗೀಕಾರ ಮಾಡಬೇಡಿ ಎಂದಿದ್ದಾರೆ. ದೂರು ನೀಡಿದವರನ್ನು ಕರೆಸಿ ಮಾತನಾಡುತ್ತೇನೆ ಎಂದರು. ವಿಧಾನಮಂಡಲದ ಅಧಿವೇಶನ ನಿಗದಿಯಂತೆ ಜುಲೈ 12 ರಂದು ನಡೆಯಲಿದೆ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.

ಬಂಡಾಯ ಶಾಸಕರ ಒಡೆಯುವ ತಂತ್ರ

ಬೆಂಗಳೂರು:ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಾಸಕರ ಗುಂಪನ್ನೇ ಒಡೆಯುವ ತಂತ್ರಗಾರಿಕೆಯನ್ನು ರಾಜ್ಯ ಪ್ರದೇಶ ಕಾಂಗ್ರೆಸ್ ಅನುಸರಿಸಿದೆ.

ಇದರ ಅಂಗವಾಗಿ ಮಾಜಿ ಸಚಿವ ರೋಷನ್ ಬೇಗ್, ರಮೇಶ್ ಜಾರಕಿಹೊಳಿ, ಬಿಸಿ ಪಾಟೀಲ್ ಹಾಗೂ ಮಹೇಶ್ ಕುಮಟಳ್ಳಿ ಅವರ ವಿಧಾನಸಭಾ ಸದಸ್ಯತ್ವ ಅನರ್ಹಗೊಳಿಸಲು ಅಗತ್ಯವಾದ ದಾಖಲೆಗಳನ್ನು ಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದಲ್ಲಿ ಶಾಸಕಾಂಗ ಸಭೆ ಜರುಗಿದ ನಂತರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ ಸಭಾಧ್ಯಕ್ಷರನ್ನು ಭೇಟಿ ಮಾಡಿ ರಾಮಲಿಂಗಾರೆಡ್ಡಿ, ಆನಂದಸಿಂಗ್ ಹೊರತುಪಡಿಸಿ, ರಾಜೀನಾಮೆ ನೀಡಿರುವ ನಮ್ಮ ಸದಸ್ಯರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಮನವಿ ಮಾಡಿದರು.

ಈ ಮನವಿ ನಂತರ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸಭಾಧ್ಯಕ್ಷರನ್ನು ಭೇಟಿ ಮಾಡಿ, ತಮ್ಮ ಸದಸ್ಯರ ವಿರುದ್ಧ ಏತಕ್ಕೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ.

Translate »