ಮೈಸೂರು,ಫೆ.22(ಎಂಟಿವೈ)-ಅರಮನೆ ಆವರಣದ ಶ್ರೀ ತ್ರಿನೇಶ್ವರ ದೇವಾಲಯ ದಲ್ಲಿ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಚಿನ್ನದ ಕೊಳಗ(ಮುಖವಾಡ) ಧರಿಸಿ ಕಂಗೊಳಿ ಸುತ್ತಿದ್ದ ಲಿಂಗರೂಪಿ ಶ್ರೀ ತ್ರಿನೇಶ್ವರಸ್ವಾಮಿ ಯನ್ನು ಕಣ್ತುಂಬಿಕೊಂಡು ನಮಿಸಲು 70 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಶುಕ್ರ ವಾರ ನಸುಕಿನಿಂದ ಶನಿವಾರ ಬೆಳಗಿನವ ರೆಗೂ ತಂಡೋಪತಂಡವಾಗಿ ಆಗಮಿಸಿದರು.
ಐತಿಹಾಸಿಕ ಶ್ರೀ ತ್ರಿನೇಶ್ವರ ಸ್ವಾಮಿ ದೇವಾ ಲಯದಲ್ಲಿ ಪ್ರತಿವರ್ಷ ಶಿವರಾತ್ರಿ ದಿನ ನಡೆ ಯುವ ವಿಶೇಷ ಪೂಜಾ ಕೈಂಕರ್ಯಗಳು ಭಕ್ತರನ್ನು ಶಿವಧ್ಯಾನದಲ್ಲಿ ಲೀನವಾಗಿಸು ತ್ತವೆ. ಹಾಗಾಗಿಯೇ ಶಿವರಾತ್ರಿಯಂದು ನಸುಕಿನ 4.30ರಿಂದಲೇ ಆರಂಭಗೊಳ್ಳುವ ಪೂಜೆ, ಅಭಿಷೇಕಗಳನ್ನು ಪ್ರತ್ಯಕ್ಷ ಕಾಣಲು ಮೈಸೂರಿನ ಎಲ್ಲೆಡೆಯ ನಿವಾಸಿಗಳು ಅರಮನೆಗೆ ಧಾವಿಸಿ ತ್ರಿನೇಶ್ವರ ಸ್ವಾಮಿ ದರ್ಶನ ಪಡೆಯಲು ಗುರುವಾರ ಮಧ್ಯ ರಾತ್ರಿಯಿಂದಲೇ ಸಾಲುಗಟ್ಟಿದ್ದರು.
ಶುಕ್ರವಾರ ಸೂರ್ಯೋದಯಕ್ಕೂ ಮುನ್ನ, ನಸುಕಿನ 4.30ರಿಂದ ಪ್ರಧಾನ ಅರ್ಚಕ ಸಂತಾನೋದೀಕ್ಷಿತ್ ಹಾಗೂ ಸ್ಥಾನಿಕ ವೆಂಕ ಟೇಶ್ ನೇತೃತ್ವದಲ್ಲಿ ವಿಶೇಷ ಪೂಜೆಗಳು ಆರಂಭಗೊಂಡವು. ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ಮತ್ತಿತರ ಪೂಜೆಗಳನ್ನು ನಡೆಸಿದ ಬಳಿಕ ಶಿವಲಿಂಗಕ್ಕೆ ಬಂಗಾರದ ಕೊಳಗ ಧಾರಣೆ ಮಾಡಲಾಯಿತು. ಅರ್ಚನೆ, ಧೂಪ, ದೀಪ ಬೆಳಗಿ, ನೈವೇದ್ಯ ಅರ್ಪಿಸ ಲಾಯಿತು. ಮಹಾ ಮಂಗಳಾರತಿ ಬಳಿಕ ಮುಂಜಾನೆ 6 ಗಂಟೆಯಿಂದ ಭಕ್ತರಿಗೆ ಶ್ರೀ ತ್ರಿನೇಶ್ವರಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಯಿತು. ಮೂರು ಸಾಲುಗಳಲ್ಲಿ ಬಂದ ಭಕ್ತರು ಮಹಾಶಿವನಿಗೆ ಜೈಕಾರ ಹಾಕುತ್ತಾ ಗರ್ಭ ಗುಡಿ ಪ್ರಾಂಗಣ ಪ್ರವೇ ಶಿಸಿದರು. ಬಂಗಾರದ ಕೊಳಗ (ಮುಖ ವಾಡ) ಧರಿಸಿ, ಬಗೆ ಬಗೆಯ ಹೂವು ಗಳಿಂದ ಅಲಂಕೃತನಾಗಿ ವಿಶೇಷ ರೀತಿ ಕಂಗೊಳಿಸುತ್ತಿದ್ದ ಮಹಾ ಶಿವನ ದರ್ಶನ ಪಡೆದು ಪುಳಕಿತರಾದರು. ಶನಿವಾರ ಮುಂಜಾನೆವರೆಗೂ ಭಕ್ತರು ಸಾಲಿನಲ್ಲಿ ಬಂದು ತ್ರಿನೇಶ್ವರನಿಗೆ ನಮಿಸಿದರು.
ಪ್ರಸಾದ ವಿತರಣೆ: ಪ್ರತಿ ವರ್ಷದಂತೆ ಈ ಬಾರಿಯೂ ತ್ರಿನೇಶ್ವರ ಸ್ವಾಮಿ ದೇಗುಲ ದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ನಡೆ ಯಿತು. ಹರಕೆ ಹೊತ್ತಿದ್ದ ಭಕ್ತರು ಸಿಹಿ ತಿನಿಸು ತಯಾರಿಸಿ ತಂದು ಭಕ್ತರಿಗೆ ಹಂಚಿದರು. ಇದಕ್ಕಾಗಿ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು.