ಕೇರಳ, ಕೊಡಗು ನೆರೆ ಸಂತ್ರಸ್ತರ ಪರ 2 ಸಾವಿರ ಬೌದ್ಧ ಭಿಕ್ಷುಗಳಿಂದ ವಿಶೇಷ ಪ್ರಾರ್ಥನೆ
ಮೈಸೂರು

ಕೇರಳ, ಕೊಡಗು ನೆರೆ ಸಂತ್ರಸ್ತರ ಪರ 2 ಸಾವಿರ ಬೌದ್ಧ ಭಿಕ್ಷುಗಳಿಂದ ವಿಶೇಷ ಪ್ರಾರ್ಥನೆ

September 26, 2018

ಬೈಲಕುಪ್ಪೆ: ಕೇರಳ ಮತ್ತು ಕರ್ನಾಟಕದಲ್ಲಿ ಪಕೃತಿ ವಿಕೋಪಕ್ಕೆ ಗುರಿಯಾದ ನೊಂದ ಜೀವಗಳಿಗೆ ನಿರಾಶ್ರಿತ ಟಿಬೇಟಿಯನ್ ಹೃದಯಗಳು ಮಿಡಿಯುತ್ತಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ 7 ದಿನಗಳ ವಿಶೇಷ ಮಹಾ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಪಿರಿಯಾಪಟ್ಟಣ ತಾಲೂಕು ಬೈಲುಕುಪ್ಪೆಯ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಇರುವ ಸೇರಾಮೇ ಧರ್ಮಶಾಲೆ ಟಿಬೆಟ್‍ನಲ್ಲಿ 500 ವರ್ಷಗಳ ಹಿಂದೆ ಸ್ಥಾಪಿತವಾದ ಧರ್ಮಶಾಲೆಯಾಗಿದ್ದು, ಈ ಇತಿಹಾಸ ಹೊಂದಿರುವ ಸೆರಾಮೇ ಧರ್ಮಶಾಲೆಯಲ್ಲಿ ಈ ವಿಶೇಷ ಪ್ರಾರ್ಥನೆ ಕೈಗೊಳ್ಳಲಾಗುತ್ತಿದೆ.

ಮೆಡಿಸಿನ್ ಬುದ್ಧನ ಪ್ರಾರ್ಥನೆ : ಬುದ್ಧನನ್ನು ದೇವರೆಂದು ಪರಿಗಣಿಸುವ ಟಿಬೆಟಿಯನ್ನರು ತಮ್ಮ ಕಷ್ಟಗಳನ್ನು ಪರಿಹರಿಸುವ ದೇವರೆಂದರೆ ಮೆಡಿಸಿನ್ ಬುದ್ಧ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಬುದ್ಧನ ಮೂರ್ತಿಗಳು ಚಿನ್ನದ ಬಣ್ಣದಲ್ಲಿ ಇದ್ದರೆ ಈ ಮೆಡಿಸಿನ್ ಬುದ್ಧನ ಬಣ್ಣ ಕಡುನೀಲಿಯದ್ದಾಗಿದೆ. ಕಡುನೀಲಿ ಸುಲಭವಾಗಿ ಬದಲಾಯಿಸಲಾಗದ ಬಣ್ಣವಾಗಿದೆ. ಆದ್ದರಿಂದ ಎಲ್ಲಾ ರೀತಿಯ ವೈದ್ಯ ದೈವವಾಗಿ ಮೆಡಿಸಿನ್ ಬುದ್ಧನನ್ನು ಪ್ರಾರ್ಥಿಸಲಾಗುತ್ತಿದೆ.

ನೊಂದವರಿಗಾಗಿ ಪ್ರಾರ್ಥನೆ : ಕೇರಳ ರಾಜ್ಯ ಮತ್ತು ಕರ್ನಾಟಕ ರಾಜ್ಯದಲ್ಲಿ ಮಹಾ ಮಳೆಯಿಂದ ಪ್ರಕೃತಿ ವಿಕೋಪಕ್ಕೆ ಒಳಗಾಗಿ ಬದುಕು ಕಳೆದುಕೊಂಡವರ ಜೀವನ ಉತ್ತಮವಾಗಲೆಂದು ಮತ್ತು ಮೃತಪಟ್ಟವರಿಗೆ ಸದ್ಗತಿ ಸಿಗಲೆಂದು ಹಾರೈಸಿ ಈ ವಿಶೇಷ ಪ್ರಾರ್ಥನೆಯನ್ನು ಕೈಗೊಳ್ಳಲಾಗುತ್ತಿದೆ.

2 ಸಾವಿರ ಬೌದ್ಧ ಭಿಕ್ಷುಗಳು : ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಇರುವ 2 ಸಾವಿರ ಬೌದ್ಧ ಭಿಕ್ಷುಗಳು ಈ 7 ದಿನದ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿದಿನ 3 ಹಂತದಲ್ಲಿ ಜರುಗುವ ಈ ವಿಶೇಷ ಪ್ರಾರ್ಥನೆ ಪ್ರತಿ ವಿರಾಮಕ್ಕೆ ಎರಡು ಗಂಟೆ ಬಿಡುವಿನ ಅವಧಿ ನೀಡಲಾಗುತ್ತಿದೆ.

6 ಲಕ್ಷಕ್ಕೂ ಅಧಿಕ ಸಹಾಯ : ಸೇರಾಮೇ ಧರ್ಮಶಾಲೆ ಕೇವಲ ಪ್ರಾರ್ಥನೆಯನಷ್ಟೆ ಸಲ್ಲಸುತ್ತಿಲ್ಲ ಬದಲಾಗಿ ಕೇರಳ ಮತ್ತು ಕರ್ನಾಟಕದಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ. ತೊಂದರೆಗೆ ಒಳಗಾದ ಸಂತ್ರಸ್ತರಿಗೆ 6 ಲಕ್ಷ ರೂ.ಗಳ ಮೌಲ್ಯದ ಬಟ್ಟೆ, ಔಷಧ, ಆಹಾರ ಪಧಾರ್ಥಗಳನ್ನು ನೀಡಲಾಗಿದೆ.

ವಿಶೇಷ ಅಲಂಕಾರ : 7 ದಿನಗಳ ಕಾಲ ಪ್ರಾರ್ಥನೆ ನಡೆಯುವ ಸೆರಾಮೇ ಧರ್ಮಶಾಲೆಯನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು, ಪ್ರಾರ್ಥನೆ ನಡೆಯುವ ಸ್ಥಳದಲ್ಲಿ ಮೇಣದ ಬತ್ತಿಗಳ ದೀಪಾಲಂಕಾರ, ಸೇಬು, ಬಿಸ್ಕತ್, ವಿಶೇಷ ಖಾದ್ಯಗಳನ್ನು ಇಡಲಾಗಿದೆ. ಅಲ್ಲದೆ ದೇವರಿಗೆ ವಿಶೇಷ ಅಲಂಕಾರ ದೊಡ್ಡದೊಡ್ಡ ತುಪ್ಪದ ದೀಪಗಳನ್ನು ಹಚ್ಚಿ ಇಡೀ ದಿನ ಮಂತ್ರಪಠಣೆಯನ್ನು ಕೈಗೊಳ್ಳಲಾಗುತ್ತಿದೆ.

ಹೀಗೆ ಟಿಬೆಟಿಯನ್ನರು ಭಾರತದಲ್ಲಿ ಆಶ್ರಯ ಪಡೆದಿದ್ದು, ನಿರಾಶ್ರಿತರಾದರೂ ಕೂಡ ಇಲ್ಲಿಯವರ ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.

ಪ್ರಕೃತಿ ವಿಕೋಪಕ್ಕೆ ಒಳಗಾದವರಿಗೆ ಸರಾಮೇ ಧರ್ಮಶಾಲೆಯಲ್ಲಿ ಸಾಕಷ್ಟು ಸಹಾಯ ಮಾಡಲಾಗಿದೆ ಅಲ್ಲದೆ ಅವರ ಜೀವನ ಉತ್ತಮವಾಗಲಿ ಎಂದು ಹಾರೈಸಿ ಈ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು 10 ವಯಸ್ಸಿನಿಂದ 70 ವಯಸ್ಸಿನ ವರೆಗಿನ ಎಲ್ಲಾ 2 ಸಾವಿರ ಬೌದ್ಧ ಭಿಕ್ಷುಗಳು ಈ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.
–  ಗೆಶೆ ತಶಿ ತ್ಸೆರಿಂಗ್ ಸೆರಾಮೇ ಧರ್ಮಶಾಲೆಯ ಧರ್ಮಗುರು

ಈಗಾಗಲೇ ಭಾರತದಲ್ಲಿ ಟಿಬೆಟಿಯನ್ನರು ವಾಸಿಸುವ ಕುಲು, ಮನಾಲಿ, ಧರ್ಮಶಾಲೆ ಮುಂತಾದ ಕಡೆಗಳಿಗೆ ತೆರಳಿ ಅಲ್ಲಿ ಕೇರಳ ಮತ್ತು ಕರ್ನಾಟಕದ ನಿರಾಶ್ರಿತರಿಗಾಗಿ 13 ಲಕ್ಷ ಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿ, ನೀಡಲಾಗಿದೆ. ಅಲ್ಲದೆ 7 ದಿನಗಳ ಮೆಡಿಸಿನ್ ಬುದ್ಧನ ಈ ವಿಶೇಷ ಪ್ರಾರ್ಥನೆಯಿಂದ ಒಳಿತಾಗುವ ನಂಬಿಕೆ ಟಿಬೆಟಿಯನ್ನರಿಗೆ ಇರುವುದರಿಂದ ಇದನ್ನು ಕೂಡ ಸೇರಾಮೆ ಧರ್ಮಶಾಲೆಯಲ್ಲಿ ಕೈಗೊಳ್ಳಲಾಗುತ್ತಿದೆ.

Translate »