ಮತದಾನಕ್ಕೆ ವಿಕಲಚೇತನರಿಗೆ ವಿಶೇಷ ವ್ಯವಸ್ಥೆ: ವಿಕಲ ವಿಕಾಸ ಟ್ರಸ್ಟ್ ಸ್ವಾಗತ
ಮೈಸೂರು

ಮತದಾನಕ್ಕೆ ವಿಕಲಚೇತನರಿಗೆ ವಿಶೇಷ ವ್ಯವಸ್ಥೆ: ವಿಕಲ ವಿಕಾಸ ಟ್ರಸ್ಟ್ ಸ್ವಾಗತ

April 13, 2019

ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿಕಲಚೇತನರು ಹಾಗೂ ಅಶಕ್ತ ಹಿರಿಯ ನಾಗರಿಕರು ಸುಗಮವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಿರುವುದಕ್ಕಾಗಿ ಮೈಸೂರು ವಿಕಲವಿಕಾಸ ಟ್ರಸ್ಟ್ ಭಾರತ ಚುನಾವಣಾ ಆಯೋಗ ಮತ್ತು ಮೈಸೂರು ಜಿಲ್ಲಾಡಳಿತವನ್ನು ಅಭಿನಂದಿಸಿದೆ.

ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎಸ್.ವೈದ್ಯನಾಥ್ ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಕಲಚೇನತರು ಮತಗಟ್ಟೆ ಗಳಲ್ಲಿ ಸುಗಮ ಚಲನ, ವಲನಕ್ಕಾಗಿ ಕಡ್ಡಾಯ ವ್ಹೀಲ್‍ಚೇರ್ ಸೌಲಭ್ಯ, ಅಲ್ಪ ದೃಷ್ಟಿ ದೋಷ ವುಳ್ಳ ಮತದಾರರಿಗೆ ಮತದಾನ ಮಾಡಲು ಅನುವಾಗುವಂತೆ ಪ್ರತಿ ಮತಗಟ್ಟೆಯಲ್ಲಿ ಬೂದುಗನ್ನಡಿ ಸೌಲಭ್ಯ, ಮತದಾನ ದಿನದಂದು ವಿಕಲಚೇತನರು, ಅಶಕ್ತ ಹಿರಿಯ ನಾಗರಿಕರಿಗೆ ವಾಹನ ಸೌಕರ್ಯ, ದೃಷ್ಟಿಹೀನರಿಗೆ ಚುನಾವಣಾ ಸಂಬಂಧ ಮಾಹಿತಿ ಗಳನ್ನು ಬ್ರೈಲ್ ಲಿಪಿಯಲ್ಲಿ ಮುದ್ರಿಸಿ, ಮತದಾನ ಪ್ರಕ್ರಿಯೆಯಲ್ಲಿ ದೃಷ್ಟಿಹೀನರು ತಮ್ಮ ಹಕ್ಕು ಚಲಾಯಿಸಲು ವ್ಯವಸ್ಥೆ ಮಾಡಿರುವುದು. ಜೊತೆಗೆ ಮತ ಚಲಾಯಿಸಲು ಸಹಾಯ ಕರನ್ನು ನೇಮಕ ಮಾಡಿರುವುದಕ್ಕಾಗಿ ಜಿಲ್ಲಾಡಳಿತವನ್ನು ಅಭಿನಂದಿಸುವುದಾಗಿ ತಿಳಿಸಿದರು.

ವಿಕಲಚೇತನರಿಗೂ ರಾಜಕೀಯ ಮೀಸಲಾತಿ ನೀಡಿ: ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ನಾಮ ನಿರ್ದೇಶನದ ಮೂಲಕ ವಿಕಲಚೇತನರಿಗೂ ರಾಜಕಾರಣದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಶೇ.3ರಿಂದ 4ರಷ್ಟು ಮತದಾರರಿರುವ ನಮಗೆ ಇದುವರೆಗೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ. ಇದನ್ನು ಪರಿಗಣಿಸಿ ವಿಕಲಚೇತನರಿಗೂ ರಾಜಕೀಯ ಮೀಸಲಾತಿ, ನಾಮನಿರ್ದೇಶನಕ್ಕೆ ಒಳಪಡಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಶ್ರೀನಿವಾಸ್, ವಾಸುದೇವ, ಸಂತೋಷ್ ಉಪಸ್ಥಿತರಿದ್ದರು.

Translate »