ಮೈಸೂರು ಜಿಪಂ ಹಂಗಾಮಿ ಅಧ್ಯಕ್ಷರಾಗಿ   ಸಾ.ರಾ.ನಂದೀಶ್ ಅಧಿಕಾರ
ಮೈಸೂರು

ಮೈಸೂರು ಜಿಪಂ ಹಂಗಾಮಿ ಅಧ್ಯಕ್ಷರಾಗಿ ಸಾ.ರಾ.ನಂದೀಶ್ ಅಧಿಕಾರ

January 8, 2019

ಮೈಸೂರು: ಮೈಸೂರು ಜಿಲ್ಲಾ ಪಂಚಾಯತ್ ಹಂಗಾಮಿ ಅಧ್ಯಕ್ಷರಾಗಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾ.ರಾ. ನಂದೀಶ್ ಇಂದು ಅಧಿಕಾರ ವಹಿಸಿಕೊಂಡರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ನಯೀಮಾ ಸುಲ್ತಾನ ನಜೀರ್ ಅಹಮದ್ ಅವರು 2018ರ ಡಿಸೆಂಬರ್ 22 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಪ್ರಭಾರ ಅಧ್ಯಕ್ಷರಾಗಿ ಸಾ.ರಾ. ನಂದೀಶ್ ಅವರು ಇಂದು ಅಧಿಕಾರ ವಹಿಸಿಕೊಂಡರು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 179(1) ಪ್ರಕಾರ ಇಂದು ನಯೀಮಾ ಸುಲ್ತಾನ ನಜೀರ್ ಅಹಮದ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ವಿ. ವೆಂಕಟೇಶ್ ಅವರು, ಖಾಲಿ ಇರುವ ಅಧ್ಯಕ್ಷ ಸ್ಥಾನಕ್ಕೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರು ಮೈಸೂರು ಜಿಲ್ಲಾ ಪಂಚಾಯತ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸುವುದೆಂದು ಆದೇಶ ಹೊರಡಿಸಿದ್ದರು.
ಅಧಿಕೃತ ಜ್ಞಾಪನ ಹೊರ ಬೀಳುತ್ತಿದ್ದಂತೆಯೇ ಇಂದು ಮಧ್ಯಾಹ್ನ ಸಾ.ರಾ. ನಂದೀಶ್ ಅವರು ಹಂಗಾಮಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಅವರಿಂದ ಅಧಿಕಾರ ವಹಿಸಿಕೊಂಡರು. ಮುಂದಿನ ಅಧ್ಯಕ್ಷರು ಆಯ್ಕೆಯಾಗುವವರೆಗೆ ನಂದೀಶ್ ಅವರು ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.

Translate »