ಮೂಗೂರಿನಲ್ಲಿ ವಿಜೃಂಭಣೆಯ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ
ಮೈಸೂರು

ಮೂಗೂರಿನಲ್ಲಿ ವಿಜೃಂಭಣೆಯ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ

January 24, 2019

ಮೂಗೂರು: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕು ಮೂಗೂರು ಗ್ರಾಮದಲ್ಲಿ ಸುಪ್ರಸಿದ್ಧ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದಿವ್ಯ ಮಹಾಬ್ರಹ್ಮ ರಥೋತ್ಸವ ಹಾಗೂ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.

ಮಂಗಳವಾರ ಸಂಜೆ 7 ಗಂಟೆಗೆ ದೇವಾಲಯದ ಆವರಣದಲ್ಲಿ ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಂಡಿದ್ದ ಹೂವಿನ ಪಲ್ಲಕ್ಕಿಯಲ್ಲಿ ಶ್ರೀ ತ್ರಿಪುರ ಸುಂದರಿ ಅಮ್ಮನವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ವಾದ್ಯ ಮೇಳ, ವೀರಗಾಸೆ ಹಾಗೂ ಡೊಳ್ಳುಕುಣಿತದೊಂದಿಗೆ ಹೊರಟ ಮೆರವಣಿಗೆ ಮಾಡಲಾಯಿತು. ರಥ ಬೀದಿ, ಬಂಡಿ ಬೀದಿ ಹಾಗೂ ಅಂಗಡಿ ಬೀದಿಗಳ ಮುಖಾಂತರ ಸಾಗಿ ಮಧ್ಯ ರಾತ್ರಿ 11.15 ಗಂಟೆಗೆ ಮೆರವಣಿಗೆ ಕಲ್ಯಾಣಿಯನ್ನು ತಲುಪಿತು. ನಂತರ ತೆಪ್ಪೋತ್ಸವಕ್ಕೆ ಚಾಲನೆ ದೊರೆಯಿತು.
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಕಲ್ಯಾಣಿ ಸುತ್ತಲೂ ಕಾದು ಕುಳಿತು ತೆಪ್ಪೋತ್ಸವ ಕಣ್ತುಂಬಿಕೊಂಡರು. ಪಟಾಕಿ, ಬಾಣ-ಬಿರುಸುಗಳ ಪ್ರದರ್ಶನ ನೋಡುಗರ ಮೈನವಿರೇಳಿಸಿತು. ಇದಕ್ಕೂ ಮುನ್ನ ಬೆಳಿಗ್ಗೆ 4 ಗಂಟೆಯಿಂದಲೇ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇಗುಲದಲ್ಲಿ ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯ ನಡೆಸಿದ್ದು, ಮುಂಜಾನೆಯಿಂದ ಸಂಜೆಯವರೆವಿಗೂ ಭಕ್ತರು ಸರತಿ ಸಾಲಿನಲ್ಲಿ ಅಮ್ಮನವರ ದರ್ಶನ ಪಡೆದರು.

ಬುಧವಾರ ಮಧ್ಯಾಹ್ನ 2.30ಕ್ಕೆ ಸರಿಯಾಗಿ ದಿವ್ಯ ಮಹಾಬ್ರಹ್ಮ ರಥೋತ್ಸವಕ್ಕೆ ದೇವಾಲಯದ ಆರ್ಚಕರು ಕಳಸಸ್ಥಾಪನೆ ಮಾಡಿದರು. ನಂತರ ಮಧ್ಯಾಹ್ನ 3.30ಕ್ಕೆ ಶ್ರೀ ತ್ರಿಪುರಸುಂದರಿ ಅಮ್ಮನವರ ಬ್ರಹ್ಮರಥೋತ್ಸವಕ್ಕೆ ಮಹಾಮಂಗಳಾರತಿ ನೆರವೇರಿಸುವ ಮೂಲಕ ವಾಟಾಳು ಶ್ರೀ ಸಿದ್ಧಲಿಂಗಶಿವಚಾರ್ಯ ಸ್ವಾಮೀಜಿ ಹಾಗೂ ಶಾಸಕ ಎಂ.ಅಶ್ವಿನ್ ಕುಮಾರ್ ಚಾಲನೆ ನೀಡಿದರು. ಕಾಂಕ್ರಿಟ್ ರಸ್ತೆ ನಿರ್ಮಾಣದಿಂದಾಗಿ ರಥವು ಯಾವುದೇ ಅಡೆತಡೆಗಳಿಲ್ಲದೇ ಸುಗಮವಾಗಿ ರಥದ ಬೀದಿ, ಅಂಗಡಿ ಬೀದಿ ಮತ್ತು ಬಂಡಿ ಬೀದಿ ಮೂಲಕ ಸಾಗಿ ಸ್ವಸ್ಥಾನಕ್ಕೆ ಮರಳಿತು.

ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ರಾಮನಗರ, ಕನಕಪುರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು, ನವ ಜೋಡಿಗಳು ರಥಕ್ಕೆ ಹಣ್ಣು-ದವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರೆ, ಯುವ ಸಮೂಹ ಉತ್ಸಾಹದಿಂದ ತ್ರಿಪುರ ಸುಂದರಿ ಅಮ್ಮನವರಿಗೆ ಜೈಕಾರ ಕೂಗುತ್ತಾ ತೇರು ಎಳೆದು ಸಂಭ್ರಮಿಸಿದರು. ವೃತ್ತ ನಿರೀಕ್ಷಕ ಎಂ.ಆರ್.ಲವ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ತಾಪಂ ಸದಸ್ಯ ಎಂ.ಚಂದ್ರಶೇಖರ್, ಪಾರುಪ್ತತೇಗಾರ್ ಎಂ.ಬಿ.ಸಾಗರ್, ಮುಖಂಡರಾದ ಎಂ.ಡಿ.ಬಸವರಾಜು, ಎಂ.ಆರ್.ಸುಂದರ್, ತಾಲೂಕು ಬಾಬು ಜಗಜೀವನರಾಂ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜು, ಎಂ.ಆರ್.ಶಿವಮೂರ್ತಿ, ಮೂಗೂರು ನಂಜುಂಡಸ್ವಾಮಿ, ಜಿಲ್ಲಾ ಜೆಡಿಎಸ್ ಮಾಜಿ ಉಪಾಧ್ಯಕ್ಷ ಎಂ.ಕೆ.ಸಿದ್ದರಾಜು, ಸಮಿತಿ ಅಧ್ಯಕ್ಷ ಗೌ.ನಾಗರಾಜು, ಜಗದೀಶ್‍ಮೂರ್ತಿ, ಡೈರಿ ನಾಗೇಂದ್ರ, ಯಜಮಾನ್ ಪುಟ್ಟಮಾದಯ್ಯ, ನಿಂಗಪ್ಪ, ಉಪನ್ಯಾಸಕ ಕುಮಾರಸ್ವಾಮಿ, ರಮೇಶ್‍ನಾಯ್ಕ, ಮಹದೇವನಾಯ್ಕ ಆರ್ಚಕರ ಸಮೂಹ ಗೆಳೆಯರ ಬಳಗದ ನಾಗೇಂದ್ರಸ್ವಾಮಿ, ಜೈಪಾಲ್, ನಂಜಪ್ಪ,ಮಹದೇವಶೆಟ್ಟಿ, ನಂಜಯ್ಯ, ತವಸಾರನಾಯಕ್ ಇತರರಿದ್ದರು.

ರಥೋತ್ಸವದ ಅಂಗವಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮೂಗೂರಿಗೆ ಆಗಮಿಸಿ ಶ್ರೀ ತ್ರಿಪುರ ಸುಂದರಿ ಅಮ್ಮನವರ ದರ್ಶನ ಪಡೆದರು. ನಂತರ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಅನ್ನ ದಾಸೋಹದಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನಿರ್ವಹಿಸುವಂತೆ ಸೇವಾ ಸಮಿತಿ ಮುಖಂಡರಿಗೆ ಸೂಚಿಸಿದರು. ಗ್ರಾಮದಲ್ಲಿ ಬೆಳಿಗ್ಗೆಯಿಂದಲೇ ಅಲ್ಲಲ್ಲಿ ಹರಕೆ ಹೊತ್ತವರು ಹಾಗೂ ನೆರೆದಿದ್ದ ಇತರೆ ಭಕ್ತರಿಗೆ ಬೆಂಗಳೂರು ನಿವಾಸಿ ಹರೀಶ್ ಪಾನಕ, ಮಜ್ಜಿಗೆ, ಕೊಸಂಬರಿ ವಿತರಿದರು.

Translate »