ಮೈಸೂರು, ಸೆ.30- ಇದು ದಸರಾ ಸಮಯ. ಹತ್ತು ಹಲವು ಕಾರ್ಯಕ್ರಮಗಳಲ್ಲಿ ಸಾವಿರಾರು ಮಂದಿ ಸಂಭ್ರಮಿಸುವ ಸಂದರ್ಭ.ಅತೀ ಹೆಚ್ಚು ಜನ ಸೇರುವ ಮೆಗಾ ಸಾಂಸ್ಕೃತಿಕ ಕಾರ್ಯಕ್ರಮಗಳಿರಲೀ, ಅತೀ ಗಣ್ಯರ ಸಮಾರಂಭ ಹಾಗೂ ರಾಜಕೀಯ ಪಕ್ಷಗಳ ಬೃಹತ್ ಸಮಾವೇಶ ಗಳಿಗೆ ಸುರಕ್ಷಿತ ಮಂಟಪ, ಭವ್ಯ ವೇದಿಕೆ, ಆಸನ ಹಾಗೂ ಬ್ಯಾರಿಕೇಡ್‍ಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರುವ ಮೈಸೂರಿನ ‘ಪೆಂಡಾಲ್ ಮ್ಯಾನ್’ ಎಂದೇ ಹೆಸರಾಗಿರುವವರು ಕೆ.ಎಂ. ಷರೀಫ್.
ಮೈಸೂರಿನ ಅಗ್ರಹಾರ ಸರ್ಕಲ್‍ನಲ್ಲಿ ಷರೀಫ್ ಫರ್ನೀಚರ್ಸ್ ಎಂಬ ಪುಟ್ಟ ಅಂಗಡಿ ಇರಿಸಿಕೊಂಡಿರುವ ಅವರು, ಎಂತಹ ಅದ್ಧೂರಿ, ಬೃಹತ್ ಸಮಾ ರಂಭಗಳಿಗೆ ಅಗತ್ಯವಿರುವ ವಾಟರ್ ಪ್ರೂಫ್ ಪೆಂಡಾಲ್, ಛಾವಣಿಯ ಕಬ್ಬಿಣದ ಸರಳು, ಐಷಾರಾಮಿ ಚೇರ್ ಮತ್ತು ಸೋಫಾ, ವೇದಿಕೆಗೆ ಬೇಕಾದ ಮರದ ಅಟ್ಟಣಿಗೆ, ಬ್ಯಾರಿಕೇಡ್‍ಗಳು ಹಾಗೂ ಲಕ್ಷಾಂತರ ಪ್ಲಾಸ್ಟಿಕ್ ಚೇರ್‍ಗಳಂತಹ ಸಲಕರಣೆ ಹೊಂದಿರುವ ಏಕೈಕ ವ್ಯಕ್ತಿ ಎಂತಲೂ ಷರೀಫ್ ಖ್ಯಾತಿಯಾಗಿದ್ದಾರೆ.
35 ವರ್ಷಗಳಿಂದ: ಕಳೆದ 35 ವರ್ಷಗಳಿಂದ ಮೈಸೂರು ದಸರಾ ಉತ್ಸವದ ಕಾರ್ಯಕ್ರಮಗಳಿಗೆ ಪೆಂಡಾಲ್, ವೇದಿಕೆಯನ್ನು ನಿರ್ಮಿಸಿ ಯಾವುದೇ ಸಮಸ್ಯೆಯಾಗದಂತೆ ನಿರ್ವಹಿಸಿಕೊಂಡು ಬಂದು ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಪ್ರಶಂಸೆಗೆ ಪಾತ್ರರಾಗುವ ಜತೆಗೆ ತನ್ನ ಗುಣಾತ್ಮಕ ಕೆಲಸದ ಮೂಲಕ ಅವರ ಪ್ರೀತಿಯನ್ನೂ ಸಂಪಾ ದಿಸಿರುವ ಷರೀಫ್ ತಾವೂ ಸಹ ಸಾಕಷ್ಟು ಬೆಳೆದಿ ದ್ದಾರೆ, ಇನ್ನು ಬೆಳೆಯುತ್ತಿದ್ದಾರೆ.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕ್ರೀಡಾ ಕೂಟ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದ ಆಹಾರ ಮೇಳ ಹಾಗೂ ಬನ್ನಿಮಂಟಪದ ಪಂಜಿನ ಕವಾಯತು ಪ್ರದರ್ಶನವನ್ನು ಹೊರತುಪಡಿಸಿ ಉಳಿ ದಂತೆ ಮೈಸೂರಿನಲ್ಲಿ ನಡೆಯುವ ಎಲ್ಲಾ ದಸರಾ ಕಾರ್ಯಕ್ರಮಗಳಿಗೂ ಇವರೇ ಪೆಂಡಾಲ್ ವ್ಯವಸ್ಥೆ ಮಾಡುತ್ತಿದ್ದಾರೆ. ಮೈಸೂರು ಅರಮನೆ, ಪುರಭವನದ ಬಳಿ ಸೀಟಿಂಗ್ ವ್ಯವಸ್ಥೆ, ರಾಜಮಾರ್ಗದ ಬ್ಯಾರಿಕೇಡ್, ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ, ಮಹಾರಾಜ ಕಾಲೇಜು ಮೈದಾನದ ಯುವ ದಸರಾ, ಮಾನಸ ಗಂಗೋತ್ರಿಯ ಬಯಲು ರಂಗಮಂದಿರದ ಯುವ ಸಂಭ್ರಮ, ಜೆಕೆ ಮೈದಾನದ ಮಹಿಳಾ ದಸರಾ ಅಲ್ಲದೆ ದಸರಾ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿನ ಕಾರ್ಯಕ್ರಮಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯನ್ನು ಕಳೆದ 35 ವರ್ಷಗಳಿಂದ ಷರೀಫ್ ನಿರ್ವಹಿಸುತ್ತಾ ಬಂದಿದ್ದಾರೆ.
ಸ್ವಾಗತ ಕಮಾನುಗಳು: ದಸರೆಗೆ ಬರುವ ಪ್ರವಾಸಿಗರ ಸ್ವಾಗತಕ್ಕಾಗಿ ಪ್ರತೀ ವರ್ಷ ಅಳವಡಿಸುವ ಸ್ವಾಗತ ಕಮಾನುಗಳನ್ನು ಬೆಂಗಳೂರು-ಮೈಸೂರು ಹೆದ್ದಾರಿ, ಹುಣಸೂರು ರಸ್ತೆ, ಹೆಚ್.ಡಿ.ಕೋಟೆ ರಸ್ತೆ, ನಂಜನ ಗೂಡು ರಸ್ತೆ ಹಾಗೂ ತಿ.ನರಸೀಪುರ ರಸ್ತೆಯ ಟೋಲ್‍ಗೇಟ್ ಬಳಿ ಆಕರ್ಷಕವಾಗಿ ನಿರ್ಮಿಸು ವಲ್ಲಿಯೂ ಷರೀಫ್ ಯಶಸ್ವಿಯಾಗಿದ್ದಾರೆ.
ಎಂ.ಬಿ. ಗೋಪಾಲಕೃಷ್ಣ ಸಾಥ್: ಕಳೆದ 25 ವರ್ಷಗಳಿಂದ ಜೊತೆಯಲ್ಲಿರುವ ಎಂ.ಬಿ. ಗೋಪಾಲ ಕೃಷ್ಣ ನಂಬಿಕಾರ್ಹ ಪಾಲುದಾರ. ಸುಮಾರು ಒಂದೂ ವರೆ ತಿಂಗಳ ಮೊದಲೇ ದಸರಾಗೆ ತಯಾರಿ ನಡೆಸುವ ಇವರು ನಿತ್ಯ 200 ಸಿಬ್ಬಂದಿ ಹಾಗೂ 6ರಿಂದ 8 ಲಾರಿ ಗಳನ್ನು ನಿರ್ವಹಿಸುತ್ತಾರೆ. ಇಡೀ ದಸರಾದಲ್ಲಿ ಅತೀ ದೊಡ್ಡ ಕಾರ್ಯಕ್ರಮವೆಂದರೆ ಯುವ ದಸರಾ, ಮಹಾರಾಜ ಕಾಲೇಜು ಮೈದಾನದಲ್ಲಿ ಪೂರ್ವ-ಪಶ್ಚಿಮ 400 ಅಡಿ, ಉತ್ತರ-ದಕ್ಷಿಣ 200 ಅಡಿ ವಿಸ್ತಾರದ ಮಂಟಪ, 40×80 ಅಡಿ ವೇದಿಕೆ ನಿರ್ಮಿಸಿ 1,000 ವಿಐಪಿ ಚೇರ್ ಸೇರಿದಂತೆ ಒಟ್ಟು 11,000 ಆಸನ ವ್ಯವಸ್ಥೆ ಕಲ್ಪಿಸುತ್ತಾರೆ.
ಗಾಳಿ ಭಯ: ನಮಗೆ ಮಳೆ ಬಂದರೆ ತೊಂದರೆ ಇಲ್ಲ. ಆದರೆ ಗಾಳಿ ಬೀಸಿದರೆ ಮಾತ್ರ ಎತ್ತರದ ಮಂಟಪ ಕುಸಿದು ಬೀಳುತ್ತದೆ ಎಂಬ ಭಯವಿದೆ. ಅದಕ್ಕೆ ಸಪೋರ್ಟ್ ಆಗಿ ಕಬ್ಬಿಣದ ರಾಡ್‍ಗಳನ್ನು ಜೋಡಿಸಿ ರುತ್ತೇವಾದರೂ, ಕೆಲವೊಮ್ಮೆ ಅವಾಂತರವಾಗು ವುದುಂಟು. ಅದಕ್ಕಾಗಿ ನಾನು ಶಾಂತಿಯುತವಾಗಿ ಕಾರ್ಯಕ್ರಮ ಮುಗಿಯಲಿ ಎಂದು ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದೂ ಉಂಟು ಎಂದು ಷರೀಫ್ ‘ಮೈಸೂರು ಮಿತ್ರ’ನಿಗೆ ಆತಂಕ ವ್ಯಕ್ತಪಡಿಸಿದರು.
ಏಳು-ಬೀಳುಗಳು: ಇಷ್ಟೆಲ್ಲಾ ವ್ಯವಸ್ಥೆ ಮಾಡಿ ಎಚ್ಚರಿಕೆಯಿಂದ ಕೆಲಸ ಮಾಡಿದರೂ, ನಮಗೆ ಸರ್ಕಾರ ದಲ್ಲಿ ಬಿಲ್ ಪಾವತಿಯಾಗುವುದು ಎರಡು-ಮೂರು ತಿಂಗಳ ನಂತರವೇ. ನಾನೇ ಬಂಡವಾಳ, ಶ್ರಮ ಹಾಕಿ ಕಾಯುತ್ತೇನೆ. ಅದೃಷ್ಟವಶಾತ್ ನನಗೆ ಜಿಲ್ಲಾಡಳಿತ ಎಂದೂ ತೊಂದರೆ ಕೊಟ್ಟಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದಿಂದ ತಡವಾಗಿಯಾದರೂ ಹಣ ಪಾವತಿಯಾಗುತ್ತಿದೆ ಎಂದು ನುಡಿದರು.
ಕೆಲವೊಮ್ಮೆ ಮಾಡಿದ ಕೆಲಸಕ್ಕೆ ಬಿಲ್ ಬಾಕಿ ವರ್ಷ ವಾದರೂ ಆಗಲ್ಲ. 2016 ಮತ್ತು 17 ಸಾಲಿನ ದಸರಾ ಬಿಲ್ ಬಾಕಿ ಇನ್ನೂ ಪಾವತಿಯಾಗಿಲ್ಲ. ಕೆಲವು ಕಾರ್ಯಕ್ರಮ ಗಳಲ್ಲಿ ಪೆಂಡಾಲ್ ಕುಸಿದು ಹಾನಿಯಾದರೆ, ಯುವ ದಸರಾದಲ್ಲಿ ಸುಮಾರು 200 ರಿಂದ 300 ಚೇರ್‍ಗಳು ಮುರಿದು ಹೋಗುತ್ತವೆ. ಈ ವೃತ್ತಿಯಲ್ಲಿ ಏಳು-ಬೀಳುಗಳು ಇದ್ದೇ ಇರುತ್ತವೆ ಎಂದು ಷರೀಫ್ ತಿಳಿಸಿದರು.
ಜೆಎಸ್‍ಎಸ್ ನೆರವು: ನನ್ನ ಈ ವೃತ್ತಿಗೆ ಜೆಎಸ್‍ಎಸ್ ಸಂಸ್ಥೆ, ಮಠಾಧೀಶರು ಒತ್ತಾಸೆಯಾಗಿದ್ದಾರೆ. ಪೆಂಡಾಲ್ ಸಾಮಗ್ರಿ ಇರಿಸಿಕೊಳ್ಳಲು ನಜರ್‍ಬಾದ್‍ನ ಗೋಪಾಲ ಗೌಡ ಸ್ಮಾರಕ ಆಸ್ಪತ್ರೆ ಬಳಿ ಪೆಟ್ರೋಲ್ ಬಂಕ್ ಹಿಂಭಾಗ ಸುಮಾರು 7 ಎಕರೆ ಜಾಗವನ್ನು ಗೋಡೌನ್ ಮಾಡಿ ಕೊಳ್ಳಲು ಸ್ವಾಮೀಜಿ ಉಚಿತವಾಗಿ ಕೊಟ್ಟಿದ್ದಾರೆ ಎಂಬು ದನ್ನು ಹೇಳಲು ಷರೀಫ್ ಮರೆಯಲಿಲ್ಲ. ಮಠದ ಎಲ್ಲಾ ಕಾರ್ಯಕ್ರಮಗಳಿಗೂ ನಾನೇ ಸೌಲಭ್ಯ ಒದಗಿ ಸಲು ಅವಕಾಶ ಮಾಡಿದ್ದಾರೆ. ದಸರಾ ಅಲ್ಲದೆ ರಾಷ್ಟ್ರ ಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿಗಳಂತಹ ಅತೀ ಗಣ್ಯರು ಬಂದಾಗ, ಸ್ವಾತಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವ, ಪಂಚಲಿಂಗ ದರ್ಶನ, ಕುಂಭಮೇಳ ದಂತಹ ಸರ್ಕಾರಿ ಕಾರ್ಯಕ್ರಮಗಳಿಗೆ ಹೈ ಸೆಕ್ಯೂರಿಟಿ ಯೊಂದಿಗೆ ಸುರಕ್ಷಿತ ಪೆಂಡಾಲ್, ಬ್ಯಾರಿಕೇಡ್ ಹಾಗೂ ಆಸನ ವ್ಯವಸ್ಥೆಯನ್ನೂ ಮಾಡುತ್ತಿರುವುದಾಗಿ ಅವರು ಹೆಮ್ಮೆಯಿಂದ ತಿಳಿಸಿದರು.
ಎಸ್.ಟಿ.ರವಿಕುಮಾರ್