ಎಲ್ಲಾ ಕುಟುಂಬಕ್ಕೂ ಸೂರು ಕಲ್ಪಿಸುವುದು ಮೋದಿ ಕನಸು
ಮೈಸೂರು

ಎಲ್ಲಾ ಕುಟುಂಬಕ್ಕೂ ಸೂರು ಕಲ್ಪಿಸುವುದು ಮೋದಿ ಕನಸು

February 2, 2019

ಹುಣಸೂರು: ಎರಡು ಸಾವಿರದ ಇಪ್ಪತ್ತೆರಡಕ್ಕೆÉ್ಕ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸುವ ವಜ್ರ ಮಹೋತ್ಸವದ ಅಚರಣೆ ಸಂದರ್ಭದಲ್ಲಿ ದೇಶದಲ್ಲಿನ ಯಾವುದೇ ಕುಟುಂಬಗಳು ಸ್ವಂತ ಸೂರಿನಿಂದ ವಂಚಿತರಾಗಿರಬಾರದು ಎಂಬುದು ಪ್ರಧಾನಿ ಮೋದಿ ಅವರ ಕನಸಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಅವಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು.

ನಗರದ ಪೌರಕಾರ್ಮಿಕರ ಕಾಲೋನಿಯಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಲಿಯಿಂದ ನಗರದ ಪೌರಕಾರ್ಮಿಕರ ಕಾಲೋನಿ, ಸರಸ್ವತಿಪುರಂ, ರೆಹಮತ್ ಮೊಹಲ್ಲಾ ಹಾಗೂ ರಂಗನಾಥ ಬಡಾವಣೆಗಳಲ್ಲಿ 500 ಮನೆಗಳನ್ನು ನಿರ್ಮಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ವಸತಿ ರಹಿತ ಬಡವರಿಗಾಗಿ ಮನೆಗಳನ್ನು ನಿರ್ಮಿಸಿಕೊಡುತ್ತಿರುವ ಈ ಯೋಜನೆ ಪ್ರತಿಯೊಬ್ಬರಿಗೂ ಸ್ವಂತ ಸೂರು ಒದಗಿಸುವುದಾಗಿದೆ. ಹುಣಸೂರು ನಗರದ ವಿವಿಧ ಬಡಾವಣೆಗಳಲ್ಲಿ ಸುಮಾರು 3,366 ಫಲಾನುಭವಿಗಳಿಗೆ ಸ್ವಂತ ಮನೆ ಇಲ್ಲ ಎಂದು ನಗರ ಸಭೆ ಸರ್ವೇಯಿಂದ ತಿಳಿದು ಬಂದಿದೆ. ಸೂರಿಲ್ಲದ ಎಲ್ಲರಿಗೂ ಸ್ವಂತ ಮನೆ ಒದಗಿಸುವ ಈ ಯೋಜನೆಯಲ್ಲಿ ಎಷ್ಟು ಫಲಾನುಭವಿಗಳು ಇರುವರೋ ಎಲ್ಲರನ್ನೂ ಕೇಂದ್ರದ ಯೋಜನೆಗೆ ಆಯ್ಕೆ ಮಾಡಿಸಿ ಕೋಡುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಎ.ಹೆಚ್.ವಿಶ್ವನಾಥ್ ಮಾತನಾಡಿ, ಸೂರಿಲ್ಲದ ಬಡವರಿಗೆ ಮನೆ ಕಟ್ಟಿಕೊಡುವ ಈ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಯುಕ್ತ ಕಾರ್ಯಕ್ರಮವಾಗಿದೆ. ಯಾವುದೇ ಸರ್ಕಾರಗಳು ಬರಲಿ, ಇರಲಿ ಇದು ನಿರಂತರವಾಗಿದೆ. ಜನಾದೇಶ ನೀಡಿದ ಸರ್ಕಾರಗಳು ತಮ್ಮ ಅವಧಿಯಲ್ಲಿ ಬಡಜನರಿಗೆ ಶಾಶ್ವತ ಸೂರು ಒದಗಿಸುವ ಕೆಲಸವನ್ನು ಮಾಡುತ್ತವೆ ಎಂದು ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಂದ ಮೇಲೆ 8 ಎಕರೆ ಭೂಮಿ ಖರೀದಿಸಿದ್ದೇವೆ. ಮುಂದಿನ ಎರಡು ವರ್ಷದಲ್ಲಿ ನಗರ ವ್ಯಾಪ್ತಿಯಲ್ಲಿ ಯಾರೂ ಸೂರಿಲ್ಲದೆ ಬದುಕು ಬಾರದು. ಈ ದಿಶೆಯಲ್ಲಿ ಎಲ್ಲರಿಗೂ ಮನೆ ಸಿಗುವಂತೆ ಮಾಡುತ್ತೇವೆ. ಅಲ್ಲದೆ ಜಿ+3 ಮಾದರಿಯಲ್ಲಿ ಮನೆಗಳ ಸಮುಚ್ಛಯ ನಿರ್ಮಿಸಿ ಮನೆಗಳಿಲ್ಲದ ಎಲ್ಲರಿಗೂ ಸೂರು ಒದಗಿಸುತ್ತೇವೆ ಎಂದರು.

ಒಳಚರಂಡಿ ಅಭಿವೃದ್ಧಿಗಾಗಿ ಈಗಾಗಲೇ ಸರ್ಕಾರಕ್ಕೆ 95 ಕೋಟಿ ರೂ. ಅನುದಾನ ಕೋರಿ ಅನುಮೋದನೆಗೆ ಕಳುಹಿಸಲಾಗಿದೆ. ಅಲ್ಲದೆ ಕಾವೇರಿ ಕುಡಿಯುವ ನೀರಿನ ಅಭಿವೃದ್ಧಿ ಕೆಲಸಗಳಿಗಾಗಿ 33 ಕೋಟಿ ರೂ. ಒಳಚರಂಡಿ ಅಭಿವೃದ್ಧಿಗಾಗಿ 93 ಕೋಟಿ ರೂ.ಗಳ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ನಗರಾಭಿವೃದ್ಧಿ ಕಾಮಗಾರಿಗಳಿಗಾಗಿ 5 ಕೋಟಿ ರೂ. ನಗರಸಭೆಗೆ ಬಂದಿದ್ದು, ಈಗಾಗಲೇ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.

ಮಾಜಿ ನಗರಸಭಾ ಅಧ್ಯಕ್ಷರಾದ ಎಂ.ಶಿವಕುಮಾರ್, ಲಕ್ಷ್ಮಣ್, ಸದಸ್ಯ ಹೆಚ್.ಪಿ.ಸತೀಶ್ ಮಾತನಾಡಿದರು. ನಗರಸಭಾಧ್ಯಕ್ಷ ಹೆಚ್.ವೈ.ಮಹದೇವ್, ಪೌರಾಯುಕ್ತ ಶಿವಪ್ಪನಾಯ್ಕ, ಸದಸ್ಯರಾದ ಸುನಿತಾ ಜಯರಾಮೇಗೌಡ, ಶಿವರಾಜ್, ಮಾಜಿ ಜಿಪಂ ಸದಸ್ಯ ರಮೇಶ್ ಕುಮಾರ್, ವಕೀಲ ಯೋಗಾನಂದ, ಬಸವಲಿಂಗಯ್ಯ, ಪೆರುಮಾಳ್, ಮಂಜುನಾಥ್, ಜೆಡಿಎಸ್ ಯುವ ಅಧ್ಯಕ್ಷ ರವೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಟೇಶ್, ಡಾ.ಶ್ರೀಕಾಂತ್, ಬಿಜೆಪಿ ನಗರಾಧ್ಯಕ್ಷ ರಾಜೇಂದ್ರ, ಹಳ್ಳದಕೊಪ್ಪಲು ನಾಗಣ್ಣ, ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಎಇಇ ತೇಜಶ್ರೀ, ಇಇ ಬಿ.ಎಂ.ಕಪನಿಗೌಡ, ಎಇ ನುಸ್ರತ್, ಮತ್ತು ಮಹದೇವ್, ಸಿಪಿಐ ಪೂವಯ್ಯ, ಪಿಎಸ್‍ಐ ಮಹೇಶ್ ಉಪಸ್ಥಿತರಿದ್ದರು.

ಆಡಳಿತ ವ್ಯವಸ್ಥೆಯ ಅಣಕ
ಶಂಕುಸ್ಥಾಪನೆ ಸಮಾರಂಭದಲ್ಲಿ ಅಮಾನತು ಅಧಿಕಾರಿ!!
ಹುಣಸೂರು: ಭ್ರಷ್ಟಾಚಾರದ ಆರೋಪದ ಮೇರೆಗೆ ಜ.29ರಂದು ಅಮಾನತ್ತಿಗೆ ಒಳಗಾಗಿರುವ ಹುಣಸೂರು ನಗರಸಭೆ ಪೌರಯುಕ್ತ ಶಿವಪ್ಪನಾಯಕ ಅವರು ಇಂದು ಸಂಸದರು ಮತ್ತು ಶಾಸಕರು ನೆರವೇರಿಸಿದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿದ್ದು, ಆಡಳಿತ ವ್ಯವಸ್ಥೆಯನ್ನು ಅಣಕ ಮಾಡಿದಂತಾಗಿದೆ.

ಭ್ರಷ್ಟಾಚಾರದ ಆರೋಪದಡಿ ಜ.29ರಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಶೇಖರಪ್ಪ ಅವರು ಇಲ್ಲಿನ ಪೌರಾಯುಕ್ತ ಶಿವಪ್ಪನಾಯಕ ಅವರನ್ನು ಅಮಾನತುಗೊಳಿಸಿದ್ದರು. ಆಶ್ಚರ್ಯವೆಂದರೆ ಇಂದು ಇಲ್ಲಿನ 12ನೇ ವಾರ್ಡ್‍ನಲ್ಲಿ ಕೊಳಚೆ ನಿರ್ಮಾಲನಾ ಮಂಡಳಿ ವತಿಯಿಂದ 500 ಮನೆಗಳ ನಿರ್ಮಾಣಕ್ಕೆ ನಡೆದ ಶಂಕುಸ್ಥಾಪನಾ ಸಮಾರಂಭದಲ್ಲಿ ಶಿವಪ್ಪ ನಾಯಕ ಅವರು ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಎ.ಹೆಚ್.ವಿಶ್ವನಾಥ್ ಅವರೊಂದಿಗೆ ಭಾಗವಹಿಸಿದ್ದರು. ಅಲ್ಲದೆ, ಈ ಸಮಾರಂಭಕ್ಕೆ ಆಗಮಿಸುವಂತೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಫೆ.1ರಂದು ಕೂಡ ಶಿವಪ್ಪ ನಾಯಕ ಸಹಿ ಮಾಡಿದ್ದಾರೆ.

ಅಮಾನತ್ತಾಗಿರುವ ಅಧಿಕಾರಿಯೊಬ್ಬರು ಇನ್ನೂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾ ಸಂಸದರು ಮತ್ತು ಶಾಸಕರು ನೆರವೇರಿಸಿದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು, ಹುಣಸೂರು ಪೌರಾಯುಕ್ತರು ಕಚೇರಿಯಲ್ಲಿ ಕೆಲಸ ನಿರ್ವಹಿಸುವಂತಿಲ್ಲ. ಸರ್ಕಾರಿ ಸಮಾರಂಭದಲ್ಲೂ ಭಾಗವಹಿಸುವಂತಿಲ್ಲ ಹಾಗೇನಾದರೂ ಆಗಿದ್ದರೆ ಅದರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

Translate »