ರೈಲ್ವೆ ಗೂಡ್ಸ್‍ಶೆಡ್‍ನಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಆಗ್ರಹ ಮುಷ್ಕರ
ಮೈಸೂರು

ರೈಲ್ವೆ ಗೂಡ್ಸ್‍ಶೆಡ್‍ನಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಆಗ್ರಹ ಮುಷ್ಕರ

July 22, 2018

ಮೈಸೂರು: ಮೈಸೂರಿನ ರೈಲ್ವೆ ಗೂಡ್ಸ್‍ಶೆಡ್‍ನಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಲು ಅನುಮತಿ ನೀಡುವವರೆವಿಗೂ ಮುಷ್ಕರ ಕೈಬಿಡುವುದಿಲ್ಲವೆಂದು ರೈಲ್ವೆ ಗೂಡ್ಸ್‍ಶೆಡ್ ಲಾರಿ ಮಾಲೀಕರ ಸಂಘ ಇಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಸ್ಪಷ್ಟಪಡಿಸಿದೆ.

ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇಂದು ಲಾರಿ ಮಾಲೀಕರ ಸಂಘಟನೆಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೋದಂಡರಾಮು, ಚಾಮರಾಜನಗರ-ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಎವಿಆರ್ ವೆಂಕಟೇಶ್, ರೈಲ್ವೆ ಗೂಡ್ಸ್‍ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಶಾಹೀದ್, ಜಿಲ್ಲಾ ಲಾರಿ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಶಂಕರ್, ಗಿರಿಧರ್ ಮುಂತಾದವರು ಭಾಗವಹಿಸಿದ್ದರು.

ರೈಲ್ವೆ ವ್ಯಾಗನ್‍ಗಳಲ್ಲಿರುವ ಅನ್ನಭಾಗ್ಯ ಅಕ್ಕಿ ಸಾಗಾಣಿಕೆ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಲಾರಿ ಮಾಲೀಕರಿಗೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ರೈಲ್ವೆ ಗೂಡ್ಸ್‍ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್ ಅವರು, ದೇಶ ವ್ಯಾಪ್ತಿ ಲಾರಿ ಮುಷ್ಕರ ಅಂತ್ಯವಾದ ನಂತರವೂ ರೈಲ್ವೆ ಗೂಡ್ಸ್‍ಶೆಡ್ ಲಾರಿ ಮಾಲೀಕರು ಮುಷ್ಕರ ಕೈಬಿಡುವುದಿಲ್ಲ. ವ್ಯಾಗನ್‍ಗಳಲ್ಲಿರುವ ಯಾವ ಸರಕನ್ನೂ ಸಾಗಾಟ ಮಾಡಲು ಸಿದ್ಧರಿಲ್ಲ ಎಂದು ನುಡಿದರು.

ರೈಲ್ವೆ ಗೂಡ್ಸ್‍ಶೆಡ್ ರಸ್ತೆಯಿಂದ ರಿಂಗ್ ರಸ್ತೆ ಸಂಪರ್ಕಿಸುವ ಹಳೆ ರಸ್ತೆಯನ್ನು ಅಭಿವೃದ್ಧಿಪಡಿಸಲು ಹಣ ಮಂಜೂರಾಗಿದ್ದು, ಒಂದು ಸೇತುವೆಯನ್ನೂ ನಿರ್ಮಿಸಲಾಗಿದೆ. ಆದರೆ, ರೈಲ್ವೆ ಅಧಿಕಾರಿಗಳು ರಸ್ತೆ ಮಧ್ಯೆ ಮಣ್ಣು ಸುರಿದು ರಸ್ತೆ ಬಂದ್ ಮಾಡಿದ್ದಾರೆ. ಪರ್ಯಾಯ ರಸ್ತೆಯಾದ ಜೋಡಿ ತೆಂಗಿನಮರ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಅಧಿಕವಾಗಿದ್ದು, ಆ ರಸ್ತೆಯಲ್ಲಿ ಲಾರಿಗಳು ಸಂಚರಿಸಿದರೆ ಸಾರ್ವಜನಿಕರು ಗಲಾಟೆ ಮಾಡುತ್ತಿದ್ದಾರೆ. ಆದ್ದರಿಂದ ರಿಂಗ್ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ರೈಲ್ವೆ ಅಧಿಕಾರಿಗಳು ಅವಕಾಶ ನೀಡುವವರೆವಿಗೂ ನಾವು ಮುಷ್ಕರ ಕೈಬಿಡುವುದಿಲ್ಲ. ಅನ್ನಭಾಗ್ಯ ಅಕ್ಕಿ ಸೇರಿದಂತೆ ರೈಲ್ವೆ ವ್ಯಾಗನ್‍ಗಳಲ್ಲಿರುವ ಯಾವುದೇ ಸರಕನ್ನೂ ಸಾಗಾಟ ಮಾಡುವುದಿಲ್ಲ ಎಂದು ತಿಳಿಸಿದರು.

ತಾವು ಬುಧವಾರ ರೈಲ್ವೆ ಇಲಾಖೆಯ ಡಿಆರ್‍ಎಂ ಜೊತೆ ಸಭೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರಾದರೂ, ಲಾರಿ ಮಾಲೀಕರು ರಿಂಗ್ ರಸ್ತೆಯ ಸಂಪರ್ಕ ರಸ್ತೆ ಅಭಿವೃದ್ಧಿಗೆ ಅವಕಾಶ ನೀಡವುವವರೆವಿಗೂ ವ್ಯಾಗನ್‍ಗಳಲ್ಲಿರುವ ಸರಕು ಸಾಗಾಣಿಕೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Translate »