ಹಾಸ್ಟೆಲ್ ಸೀಟು ಕೊಡಿಸುವುದಾಗಿ ವಂಚಿಸುತ್ತಿದ್ದ ವಿದ್ಯಾರ್ಥಿ ಬಂಧನ
ಮೈಸೂರು

ಹಾಸ್ಟೆಲ್ ಸೀಟು ಕೊಡಿಸುವುದಾಗಿ ವಂಚಿಸುತ್ತಿದ್ದ ವಿದ್ಯಾರ್ಥಿ ಬಂಧನ

November 29, 2019

ಮೈಸೂರು, ನ.28(ಎಸ್‍ಬಿಡಿ)-ಬಿಸಿಎಂ ಹಾಸ್ಟೆಲ್‍ನಲ್ಲಿ ಸೀಟು ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಯುವಕನನ್ನು ಮೈಸೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.ಚಾಮರಾಜನಗರ ಜಿಲ್ಲೆ, ಹನೂರು ತಾಲೂಕಿನ ಪಿ.ವಿನಯ್ (19) ಬಂಧಿತ. ಈತ ಮೈಸೂರಿನ ಪಾಲಿಟೆಕ್ನಿಕ್ ಕಾಲೇಜೊಂದರ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮೈಸೂರಿನ ಆನಂದನಗರ ದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ನಾತಕೋ ತ್ತರ ಬಾಲಕರ ವಿದ್ಯಾರ್ಥಿನಿಲಯದ ಗೂಗಲ್ ಮ್ಯಾಪ್‍ನಲ್ಲಿ ತನ್ನ ಮೊಬೈಲ್ ನಂಬರ್ ಟ್ಯಾಗ್ ಮಾಡಿ, ವಿದ್ಯಾರ್ಥಿಗಳು ಹಾಗೂ ಪೋಷಕ ರನ್ನು ಯಾಮಾರಿಸಿದ್ದ. ಹಾಸ್ಟೆಲ್‍ನ ಗೂಗಲ್ ಮ್ಯಾಪ್ ಹುಡುಕುವ ಸಂದರ್ಭದಲ್ಲಿ ಈ ಮೊಬೈಲ್ ಸಂಖ್ಯೆಯನ್ನು ಕಂಡು, ಕರೆ ಮಾಡಿ ದವರಿಗೆ `ನಾನು ಹಾಸ್ಟೆಲ್‍ನ ವಾರ್ಡನ್, ಅಧಿಕಾರಿ, ಸಿಬ್ಬಂದಿ’ ಎಂದು ಹೇಳಿ, ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ಹಣ ನೀಡಿದರೆ ಹಾಸ್ಟೆಲ್‍ನಲ್ಲಿ ಸೀಟು ಕೊಡಿಸುವುದಾಗಿ ತಿಳಿಸುತ್ತಿದ್ದ. ಅದಕ್ಕೆ ಒಪ್ಪಿದ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ 2-3 ಸಾವಿರ ರೂ. ಹಣವನ್ನು ತನ್ನ ತಾಯಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿ ಕೊಂಡು, ನಂತರ ಕೆಲ ದಿನಗಳ ಕಾಲ ಮೊಬೈಲ್ ಸ್ವಿಚ್ ಆಫ್ ಮಾಡಿ, ಕರೆ ಬರುತ್ತಿದ್ದ ನಂಬರ್ ಅನ್ನು ಬ್ಲಾಕ್ ಮಾಡುತ್ತಿದ್ದ. ಕಡೆಗೆ ಹಣ ನೀಡಿದ್ದವರು ಹಾಸ್ಟೆಲ್‍ಗೆ ಬಂದು ವಿಚಾರಿಸಿದಾಗ ಮೋಸ ಹೋಗಿದ್ದು ಗೊತ್ತಾಗಿ ವಾಪಸ್ಸಾಗಿದ್ದರು. ಹೀಗೆಯೇ 2 ದಿನದ ಹಿಂದೆ ಹಾಸನ ಮೂಲದವರು ಹಾಸ್ಟೆಲ್‍ಗೆ ಬಂದು ವಿನಯ್ ಬಗ್ಗೆ ವಿಚಾರಿಸಿದ್ದಾರೆ. ಈ ಹೆಸರಿನ ಸಿಬ್ಬಂದಿ ಯಾರೂ ಇಲ್ಲ ಎಂದು ಸ್ಪಷ್ಟಪಡಿಸಿದ ವಾರ್ಡನ್ ಎಲ್.ನಾಗೇಶ್, ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ಅರ್ಹ ವಿದ್ಯಾರ್ಥಿಗಳಿಗಷ್ಟೇ ಹಾಸ್ಟೆಲ್‍ನಲ್ಲಿ ಸೀಟು ಕೊಡಲಾಗುತ್ತದೆ. ನಿಮ್ಮನ್ನು ಯಾರೋ ವಂಚಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ಆದರೆ ಮೋಸ ಹೋಗಿದ್ದ ಪೋಷಕರು, ಪೊಲೀಸರ ಸೂಚನೆಯಂತೆ ಬೇರೊಂದು ನಂಬರ್‍ನಿಂದ ವಿನಯ್‍ಗೆ ಫೋನ್ ಮಾಡಿ, ಹಾಸ್ಟೆಲ್‍ನಲ್ಲಿ ಸೀಟು ಕೊಡಿಸುವಂತೆ ಕೇಳಿಕೊಂಡಿದ್ದಾರೆ. ಸೀಟು ಕೊಡಿಸುವುದಾಗಿ ತಿಳಿಸಿದ ವಿನಯ್, ಹಣವನ್ನು ಬ್ಯಾಂಕ್ ಖಾತೆಗೆ ಸಂದಾಯ ಮಾಡುವಂತೆ ಹೇಳಿದ್ದ. ಆದರೆ ಪೋಷಕರು, ನಮಗೆ ಬ್ಯಾಂಕ್ ವ್ಯವಹಾರ ಗೊತ್ತಿಲ್ಲ, ನೇರವಾಗಿ ಹಣ ಕೊಡುತ್ತೇನೆಂದು ಹೇಳಿ, ಬಿಸಿಲು ಮಾರಮ್ಮ ದೇವಾಲಯದ ಬಳಿ ಕರೆಸಿಕೊಂಡು ಹಿಡಿದುಕೊಂಡಿದ್ದಾರೆ.

ಡಿಸಿಪಿ ಎಂ.ಮುತ್ತುರಾಜು ಹಾಗೂ ಸಿಸಿಬಿ ಎಸಿಪಿ ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಠಾಣೆ ಇನ್‍ಸ್ಪೆಕ್ಟರ್ ಎನ್. ಜಿ.ಕೃಷ್ಣಪ್ಪ, ಎಎಸ್‍ಐ ಕೆ.ಜಿ.ನಿರಂಜನ್, ಸಿಬ್ಬಂದಿ ಎಂ.ಶಿವಶಂಕರ್, ರವಿಕುಮಾರ್, ನಾಗರಾಜು, ವಿ.ಎ.ಮಧು, ಮಂಜುಳಾ, ವೀಣಾ ಹಾಗೂ ನಾಗರತ್ನ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಹಾಸ್ಟೆಲ್ ವಾರ್ಡನ್ ನೀಡಿದ ದೂರಿನನ್ವಯ ಪ್ರಕರಣ ದಾಖ ಲಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿನಯ್, ಹಣವನ್ನು ತಾಯಿಯ ಖಾತೆಗೆ ಸಂದಾಯ ಮಾಡಿಸಿಕೊಳ್ಳುತ್ತಿ ದ್ದನಾದರೂ ಅವರಿಗೆ ವಿಷಯವೇ ತಿಳಿದಿಲ್ಲ. ಊರಿನಲ್ಲಿ ಹಾಗೂ ಕಾಲೇಜಿನಲ್ಲಿ ವಿನಯ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದ್ದು, ಆದರೂ ಈ ರೀತಿ ವಂಚನೆಗಿಳಿ ದಿದ್ದು ಏಕೆ? ಎನ್ನುವುದು ಮುಂದಿನ ವಿಚಾರಣೆಯಲ್ಲಿ ತಿಳಿಯಬೇಕಿದೆ.

Translate »