ಕಾರಂಜಿಕೆರೆ ಉತ್ಸವದಲ್ಲಿ ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳ ಸಂಭ್ರಮ
ಮೈಸೂರು

ಕಾರಂಜಿಕೆರೆ ಉತ್ಸವದಲ್ಲಿ ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳ ಸಂಭ್ರಮ

December 17, 2019

ಮೈಸೂರು,ಡಿ.16(ಎಂಟಿವೈ)- ಮೊಟ್ಟ ಮೊದಲ ಬಾರಿಗೆ ಸೋಮವಾರ ಆರಂಭ ವಾದ ಎರಡು ದಿನಗಳ `ಕಾರಂಜಿಕೆರೆ ಉತ್ಸವ’ದಲ್ಲಿ ಮೈಸೂರಿನ ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಪರಿಸರ ಪ್ರೇಮಿ ಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡು ಕೆರೆ ವೈವಿಧ್ಯತೆ ಕುರಿ ತಂತೆ ಮಾಹಿತಿ ಪಡೆದು ಸಂಭ್ರಮಿಸಿದರು.

ಪ್ರವಾಸಿಗರು ಹಾಗೂ ಪ್ರೇಮಿಗಳೇ ಇರು ತ್ತಿದ್ದ ಕಾರಂಜಿಕೆರೆ ಆವರಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ತಳಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ ಹಬ್ಬದ ಮನೆಯಂತೆ ಶೃಂಗಾರಗೊಂಡಿದ್ದ ಪ್ರವೇಶ ದ್ವಾರ ಸಾರ್ವಜನಿಕರನ್ನು ಕಾರಂಜಿಕೆರೆ ಹಬ್ಬಕ್ಕೆ ಕೈ ಬೀಸಿ ಕರೆಯುತ್ತಿತ್ತು. ಬೆಳಿಗ್ಗೆ 8.30ರಿಂದ ಸಂಜೆ 5.30ರವರೆಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದ್ದ ಕಾರಂಜಿ ಕೆರೆಗೆ ಅಪಾರ ಸಂಖ್ಯೆಯ ಪ್ರವಾಸಿಗರು ಹಾಗೂ ಪರಿಸರ ಪ್ರೇಮಿಗಳು ಪಾಲ್ಗೊಂಡು ಮೊದಲ ದಿನದ ಕೆರೆ ಉತ್ಸವವನ್ನು ಯಶಸ್ವಿಗೊಳಿಸಿದರು.

ಚಾಲನೆ: ಕಾರಂಜಿಕೆರೆ ಪ್ರವೇಶ ದ್ವಾರದ ಬಳಿ ಆಯೋಜಿಸಿದ್ದ `ಕಾರಂಜಿಕೆರೆ ಅಂದು-ಇಂದು’ ಪರಿಕಲ್ಪನೆಯ ಛಾಯಾ ಚಿತ್ರ ಪ್ರದರ್ಶನ ಉದ್ಘಾಟಿಸುವ ಮೂಲಕ ಉತ್ಸವಕ್ಕೆ ಇಂದು ಬೆಳಿಗ್ಗೆ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ ನೀಡಿ ದರು. ಬಳಿಕ ಪ್ರಾಣಿ, ಪಕ್ಷಿ, ಗಿಡ, ಮರ ಸೇರಿದಂತೆ ಪರಿಸರ ವಿಷಯದಲ್ಲಿ ನಡೆದ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂ ಡಿದ್ದ ಪುಟಾಣಿಗಳಿಗೆ ಶುಭ ಕೋರಿದರು.

ಕೆರೆ ದಡದಲ್ಲಿರುವ ಹಳೆಯ ಫುಡ್ ಜೋóóನ್ ಆವರಣದಲ್ಲಿ ನಡೆದ `ಕಾರಂಜಿ ಕೆರೆ ಉತ್ಸವ’ ಸಭಾ ಕಾರ್ಯಕ್ರಮದಲ್ಲಿ ಮೃಗಾಲಯದ ವಾರ್ಷಿಕ ವರದಿಯುಳ್ಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಮೇಯರ್ ಪುಷ್ಪ ಲತಾ ಜಗನ್ನಾಥ್, ಕಾರಂಜಿಕೆರೆ ಉತ್ಸವ ಆಯೋಜಿಸುವ ಮೂಲಕ ಪರಿಸರ, ಕೆರೆ ಸಂರಕ್ಷಣೆಯ ಮಹತ್ವ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೆರೆ ಉತ್ಸವ ಆಯೋಜಿಸಿರುವುದು ಶ್ಲಾಘ ನೀಯ. ಮೈಸೂರು ನಗರ ವ್ಯಾಪ್ತಿಯೊಳ ಗಿರುವ ಕೆರೆಗಳ ಸಂರಕ್ಷಣೆಗೆ ನಗರಪಾಲಿಕೆ ಸಹಕರಿಸಲಿದೆ. ಯಾವುದೇ ಕೆರೆಗಳಿಗೆ ಒಳಚರಂಡಿ ನೀರು ಸೇರದಂತೆ ನೋಡಿ ಕೊಳ್ಳಲು ಮುಂದಾಗುತ್ತದೆ ಎಂದು ಭರವಸೆ ನೀಡಿದರು.

ಪರಿಸರಕ್ಕೆ ಮಾರಕವಾಗುತ್ತಿದೆ ಮಾನವ ಕೇಂದ್ರಿತ ಅಭಿವೃದ್ಧಿ : ಕರ್ನಾಟಕ ಮೃಗಾ ಲಯ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಬಿ.ಪಿ.ರವಿ ಮಾತನಾಡಿ, ಪರಿಸರ ಸಂರಕ್ಷಣೆ ಸಮತೋಲನ ಕಾಪಾಡಲು ಕೆರೆ ಪ್ರಮುಖ ಪಾತ್ರವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಕೆರೆಗಳ ಸಂರಕ್ಷಣೆ ಅನಿ ವಾರ್ಯ ಎನಿಸಿದೆ. ಆದರೆ ಮನುಷ್ಯ ಸುಸ್ಥಿರ ಅಭಿವೃದ್ಧಿ ಬಿಟ್ಟು ಮಾನವ ಕೇಂದ್ರಿತ ಅಭಿವೃದ್ಧಿ ಕಡೆ ಒಲವು ತೋರುತ್ತಿದ್ದಾನೆ. ಇದರಿಂದ ಪರಿಸರದ ಮೇಲೆ ದುಷ್ಪರಿ ಣಾಮ ಬೀರುತ್ತಿದೆ ಎಂದು ವಿಷಾದಿಸಿದರು.

ಮಾನವ ಕೇಂದ್ರಿತ ಅಭಿವೃದ್ಧಿ ಪರಿ ಸರಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯದ ನಡುವೆ ಹತ್ತು ಪಥದ ರಸ್ತೆ ಮಾಡಿದರೆ, ಆ ಕಾಡಿನಲ್ಲಿರುವ ಏಷ್ಯಾದ ಆನೆ, ಹುಲಿ ಹಾಗೂ ಜೀವ ಸಂಕುಲದ ಕಥೆ ಏನಾಗು ತ್ತದೆ ಎಂಬುದನ್ನು ಯೋಚಿಸಬೇಕು. ಆದರೆ ಕೇವಲ ಅಭಿವೃದ್ಧಿ ಹೆಸರಿನಲ್ಲಿ ಮಾತನಾಡುತ್ತಿರುವುದರಿಂದ ನಾಗರ ಹೊಳೆ ಮತ್ತು ಬಂಡೀಪುರದಲ್ಲಿ ರಸ್ತೆ ಮಾಡಬೇಕೆಂಬ ಪ್ರಸ್ತಾಪ ಮುನ್ನಲೆಗೆ ಬಂದಿತು. ಇಂತಹ ಮನೋಭಾವ ಮುಂದಿನ ದಿನಗಳಲ್ಲಿ ಪರಿಸರದ ಮೇಲೆ ಗಾಢವಾದ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

15 ವರ್ಷದಲ್ಲಿ 9 ಕೋಟಿ ಆದಾಯ: ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಮಾತನಾಡಿ, ಮೈಸೂರಿನ ಹೃದಯ ಭಾಗ ದಲ್ಲಿರುವ ಕಾರಂಜಿಕೆರೆ 1988ರಲ್ಲಿ ಬತ್ತಿ ಹೋಗಿತ್ತು. ಆ ನಂತರ 2019ರಲ್ಲಿ ಫೆಬ್ರ ವರಿಯಲ್ಲೇ ನೀರಿಲ್ಲದೆ ಸೊರಗಿತ್ತು. ಬರ ಡಾಗಿದ್ದ ಈ ಸಂದರ್ಭವನ್ನು ಉಪ ಯೋಗಿಸಿಕೊಂಡು ಜಲತಜ್ಞ ಪ್ರೊ.ಯು. ಎನ್.ರವಿಕುಮಾರ್ ಹಾಗೂ ಇನ್ನಿತರರ ಸಲಹೆ, ಮಾರ್ಗದರ್ಶನ ಪಡೆದು `ಡ್ರಾ ಡೌನ್’ ಮಾದರಿಯಲ್ಲಿ 1600 ಕ್ಯೂಬಿಕ್ ಮೀಟರ್ ಪ್ರದೇಶದಲ್ಲಿ ಹೂಳೆತ್ತಲಾಗಿತ್ತು. 10 ಲಕ್ಷ ರೂ. ವೆಚ್ಚದಲ್ಲಿ ಕೆರೆ ಹೂಳೆತ್ತಿ, ದ್ವೀಪಗಳನ್ನು ದುರಸ್ತಿಗೊಳಿಸಲಾಗಿತ್ತು. ಮಳೆ ನೀರಿನಿಂದ ತುಂಬಿ ತುಳುಕುತ್ತಿರುವ ಕಾರಂಜಿಕೆರೆಯಲ್ಲಿ ಉತ್ಸವ ಮಾಡಿ, ಸಾರ್ವಜನಿಕರಲ್ಲಿ ಕೆರೆ ಸಂರಕ್ಷಣೆ ಮಹತ್ವ ವಿವರಿಸಲಾಗುತ್ತಿದೆ ಎಂದರು.

ಕಾರಂಜಿಕೆರೆ ಈ ಹಿಂದೆ ಮೃಗಾಲ ಯದ ವ್ಯಾಪ್ತಿಗೆ ಸೇರಿರಲಿಲ್ಲ. ನಂತರ ಈ ಕೆರೆಯನ್ನು 2004ರಲ್ಲಿ ಮೃಗಾಲಯ ವ್ಯಾಪ್ತಿಗೆ ತರಲಾಯಿತು. ಯಾವುದೇ ಸೌಲಭ್ಯವಿಲ್ಲದೇ ಇದ್ದ ಹಿನ್ನೆಲೆಯಲ್ಲಿ 1.17 ಕೋಟಿ ರೂ. ವೆಚ್ಚದಲ್ಲಿ ವಾಕಿಂಗ್ ಪಾತ್ ಸೇರಿದಂತೆ ವಿವಿಧ ಮೂಲ ಸೌಲಭ್ಯದ ವ್ಯವಸ್ಥೆ ಮಾಡಲಾಗಿತ್ತು. ನವೀಕರಣ ಗೊಂಡ ಕಾರಂಜಿಕೆರೆ ಉದ್ಯಾನವನ್ನು 2004ರಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಉದ್ಘಾಟಿಸಿದರು. ನಂತರ ಕೆರೆ ಆವರಣ ಪ್ರವೇಶಿಸಲು ದರ ನಿಗದಿ ಪಡಿಸಲಾಯಿತು. ಅಂದಿನಿಂದ ಇದುವರೆಗೂ ಕಾರಂಜಿಕೆರೆಗೆ 48 ಲಕ್ಷ ಪ್ರವಾಸಿಗರು ಕೆರೆಗೆ ಭೇಟಿ ನೀಡಿ ದ್ದಾರೆ. 15 ವರ್ಷದಲ್ಲಿ ಪ್ರವಾಸಿಗರಿಂದ 9 ಕೋಟಿ ರೂ. ಆದಾಯ ಬಂದಿದೆ ಎಂದರು.

ಶುದ್ಧೀಕರಿಸಿದ ನೀರು: ಕಾರಂಜಿಕೆರೆ ವಾತಾವರಣ ವರ್ಷದ ಎಲ್ಲಾ ದಿನಗ ಳಲ್ಲೂ ಉತ್ತಮವಾಗಿರುವಂತೆ ನೋಡಿ ಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಸಿದ್ಧಾ ರ್ಥನಗರ ಬಡಾವಣೆ ರಾಜಕಾಲುವೆ ಮೂಲಕ ಒಳಚರಂಡಿ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರಣ್ಯಪುರಂನಲ್ಲಿರುವ ಒಳಚರಂಡಿ ನೀರು ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿದ ನೀರನ್ನು ಪೈಪ್‍ಲೈನ್ ಮೂಲಕ ಚಾಮುಂಡಿಬೆಟ್ಟದ ತಪ್ಪಲಿನವ ರೆಗೆ ಸರಬರಾಜು ಮಾಡಿ, ಅಲ್ಲಿಂದ ರಾಜಕಾಲುವೆ ಮೂಲಕ ಕಾರಂಜಿಕೆರೆಗೆ ಹರಿಸುವ ಯೋಜನೆ ಇದೆ ಎಂದು ತಿಳಿಸಿದರು.

ಪ್ರಾದೇಶಿಕ ಪ್ರಾಕೃತಿಕ ಇತಿಹಾಸ ವಸ್ತು ಸಂಗ್ರಹಾಲಯದ ನಿರ್ದೇಶಕ ಡಾ.ಇಂದ್ರೇಶ್ ಅವರು ಕವನದ ಮೂಲಕ ಕೆರೆ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆ ಬಗ್ಗ ಕವಿತೆ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಛಾಯಾ ಮತ್ತು ರೂಪ ಪಾಲ್ಗೊಂಡಿದ್ದರು.

Translate »