ಸುಭಾಷ್ ಚಂದ್ರ ಬೋಸರ ವಿಚಾರಧಾರೆ  ಗಂಭೀರವಾಗಿ ಪರಿಗಣಿಸದಿದ್ದರೆ ದೇಶಕ್ಕಿಲ್ಲ ಭವಿಷ್ಯ
ಮೈಸೂರು

ಸುಭಾಷ್ ಚಂದ್ರ ಬೋಸರ ವಿಚಾರಧಾರೆ ಗಂಭೀರವಾಗಿ ಪರಿಗಣಿಸದಿದ್ದರೆ ದೇಶಕ್ಕಿಲ್ಲ ಭವಿಷ್ಯ

January 23, 2019

ಮೈಸೂರು: ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವಿಚಾರಧಾರೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೃಷ್ಣ ಅಭಿಪ್ರಾಯಪಟ್ಟರು.

ಮೈಸೂರು ಮಾನಸಗಂಗೋತ್ರಿಯ ಮೈಸೂರು ವಿವಿ ಗ್ರಂಥಾಲಯದಲ್ಲಿ ಮೈಸೂರು ವಿವಿ, ನೇತಾಜಿ ಜನ್ಮ ಶತ ಮಾನೋತ್ಸವ ಸಮಿತಿ ಜಂಟಿ ಆಶ್ರಯ ದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 122ನೇ ಜನ್ಮ ಶತಾಬ್ಧಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುಭಾಷ್ ಚಂದ್ರ ಬೋಸ್ ಅವರು ಯುವ ಜನರ ಕಣ್ಮಣಿಯಾಗಿದ್ದರು. ಪ್ರಸ್ತುತದಲ್ಲೂ ದೇಶದ ಯುವ ಪೀಳಿಗೆ ಅವರಲ್ಲಿ ಅತ್ಯಂತ ಅಭಿಮಾನ ಹೊಂದಿದೆ. 1936ರಲ್ಲಿ ಸುಭಾಷ್ ಚಂದ್ರ ಬೋಸ್ ತಮ್ಮ ಅಣ್ಣನಿಗೆ ಬರೆದ ಪತ್ರದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ದೇಶದ ಆಡಳಿತದಲ್ಲಿ ಕನಿಷ್ಠ 10 ವರ್ಷ ಸಂಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸದೇ ಅಸಮಾನತೆ ಹಾಗೂ ಬಡತನ ನಿವಾರಿಸುವ ನಿಟ್ಟಿನಲ್ಲಿ ಕಠಿಣ ನಿಲುವು ತಾಳ ಬೇಕೆಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದರು. ಇದೀಗ ದೇಶದಲ್ಲಿ ಪ್ರಜಾ ಪ್ರಭುತ್ವ ವ್ಯವಸ್ಥೆಯಿಂದ ಲಭ್ಯವಾದ ಹಕ್ಕು ಗಳನ್ನು ದುರ್ಬಳಕೆ ಮಾಡಿಕೊಳ್ಳುವವರೇ ಹೆಚ್ಚಿದ್ದಾರೆ. ಕಾನೂನು ಪಾಲನೆಗಿಂತ ಉಲ್ಲಂ ಘನೆಯೇ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿ ಯಲ್ಲಿ ಅಂದು ಸುಭಾಷ್ ಚಂದ್ರ ಬೋಸ್ ಅವರ ನಿಲುವಿನಂತೆ ಸಂಪೂರ್ಣ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಬದಲು ಕೆಲ ವಿಷಯ ಗಳಲ್ಲಿ ಕಟ್ಟುನಿಟ್ಟಿನ ನಿಲುವು ತಾಳುವುದೇ ಸೂಕ್ತ ಎನ್ನುವಂತಾಗಿದೆ ಎಂದು ತಿಳಿಸಿದರು.

ಇವರಿಗ್ಯಾವ ನೈತಿಕತೆ ಇದೆ: ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಅನೇಕ ಮಹಾನ್ ರಾಜಕೀಯ ನಾಯಕರು ಭ್ರಷ್ಟಾಚಾರದ ವಿರುದ್ಧ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ದೇಶದಲ್ಲಿ ಯುಪಿಎ ಆಡಳಿತದಲ್ಲಿದ್ದಾಗ ಅಣ್ಣಾ ಹಜಾರೆ ಅವರು ಲೋಕಪಾಲ ಮಸೂದೆ ಅಂಗೀ ಕರಿಸಲು ಹೋರಾಟ ನಡೆಸಿದ್ದರು. ಇವರ ಹೋರಾಟಕ್ಕೆ ಅಂದು ಬೆಂಬಲ ನೀಡಿದ್ದ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಇದೀಗ ಮೌನಕ್ಕೆ ಶರಣಾಗಿರುವಾಗ ಪ್ರಧಾನಿ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆ ಹೊಂದಿ ದ್ದಾರೆಯೇ? ಎಂದು ಪ್ರಶ್ನಿಸಿದರು.

ಲೋಕಾಯುಕ್ತದ ಹಲ್ಲು ಮುರಿದ ಸಿದ್ದು: ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತ ಇಲಾಖೆಯನ್ನು ಬಲಹೀನ ಗೊಳಿಸಿದರು. ಪರಿಣಾಮ ಇದೀಗ ಲೋಕಾ ಯುಕ್ತ ಹಲ್ಲು ಮುರಿದುಕೊಂಡು ಮೂಲೆ ಗುಂಪಾಗಿದೆ. ನಾನು ವಿಧಾನಸಭೆಯ ಸ್ಪೀಕರ್ ಆಗಿದ್ದ ಹಿನ್ನೆಲೆಯಲ್ಲಿ ಅಧಿವೇಶನ ದಲ್ಲಿ ರಾಜಕೀಯ ಪಕ್ಷಗಳ ಗದ್ದಲ-ಗಲಾಟೆಯನ್ನು ಕಂಡಿದ್ದೇನೆ. ಆಡಳಿತ ಪಕ್ಷದ ವಿರುದ್ಧ ವಿಪಕ್ಷದವರು ಆರೋಪ ಮಾಡಿ ಕೂಗಾಡಿದರೆ, ನೀವು ಅಧಿಕಾರ ದಲ್ಲಿದ್ದಾಗ ಮಾಡಿದ್ದನ್ನೇ ನಾವು ಮಾಡಿ ದ್ದೇವೆ ಎಂದು ಸಮರ್ಥನೆ ಮಾಡಿಕೊಳ್ಳು ತ್ತಾರೆ. ಹೀಗಾಗಿ ಎಲ್ಲರೂ ಒಂದೇ ಎನ್ನು ವಂತಾಗಿದ್ದು, ಒಳ್ಳೆಯತನ ಮರೀಚಿಕೆ ಆಗಿದೆ ಎಂದು ಕೃಷ್ಣ ವಿಷಾದಿಸಿದರು.

ಸುಭಾಷರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಮೇಯರ್ ಪುಷ್ಪಲತಾ ಜಗ ನ್ನಾಥ್ ನಂತರ ಮಾತನಾಡಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನಡೆದ ಹಾದಿಯನ್ನು ಯುವ ಪೀಳಿಗೆ ತಿಳಿದು ಕೊಳ್ಳಬೇಕು. ಇದರಿಂದ ಪ್ರೇರಣಶಕ್ತಿ ಯನ್ನು ಯುವ ಜನತೆ ಪಡೆದುಕೊಳ್ಳ ಬಹುದು. ಅವರ ಕ್ರಾಂತಿಕಾರಕ ನಿಲುವು ಗಳು ಹಾಗೂ ದೇಶಭಕ್ತಿಯ ಕಿಚ್ಚು ಇಂದು ನಮ್ಮ ಯುವ ಸಮುದಾಯಕ್ಕೆ ಅಗತ್ಯ ವಾಗಿದೆ ಎಂದು ನುಡಿದರಲ್ಲದೆ, ದೇಶದಲ್ಲಿ ನಡೆಯುತ್ತಿರುವ ಸ್ವಚ್ಛ ಸರ್ವೇಕ್ಷಣೆ ಸಂಬಂಧ ಮೈಸೂರು ಅಗ್ರಸ್ಥಾನ ಗಳಿಸಲು ನಾಗರಿಕರ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸಲಿದ್ದು, ಹೀಗಾಗಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಪ್ರತಿಕ್ರಿಯೆ ದಾಖಲಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಜಿ. ಕೃಷ್ಣಮೂರ್ತಿ ಮಾತನಾಡಿ, ಸುಭಾಷ್ ಚಂದ್ರ ಬೋಸರು ಮಿಷನರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅವರಿಂದ ಅಪಮಾನ ಅನುಭವಿಸಿದ್ದರು. ಅಂದೇ ಅವರಲ್ಲಿ ದೇಶವನ್ನು ಬ್ರಿಟೀಷರಿಂದ ಮುಕ್ತ ಗೊಳಿಸಬೇಕೆಂಬ ಸ್ವಾತಂತ್ರ್ಯದ ತುಡಿತ ಉಂಟಾಗಿತ್ತು. ಯುವಕರನ್ನು ಸಂಘಟಿಸಿ ಸ್ವಾತಂತ್ರ್ಯ ಕಿಚ್ಚು ಹುಟ್ಟಿಸಿದ್ದರು ಎಂದು ಸ್ಮರಿಸಿದರು.

ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಂಥಾಲಯದ ಸಭಾಂ ಗಣದಲ್ಲಿ ಸಮಾರಂಭಕ್ಕೆ ಎಲ್ಲಾ ಏರ್ಪಾಡು ಮಾಡಿಕೊಳ್ಳಲಾಗಿತ್ತು. ಆದರೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ವೇಳೆ ಸುಭಾಷರ ಕುರಿತ ಪುಸ್ತಕ ಗಳ ಪ್ರದರ್ಶನಕ್ಕೆ ಮೈಸೂರು ವಿವಿ ಕುಲ ಪತಿ ಪ್ರೊ.ಹೇಮಂತ್‍ಕುಮಾರ್ ಚಾಲನೆ ನೀಡಿದರು. ಪತ್ರಿಕೋದ್ಯಮಿ ರವಿಕೋಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ನೇತಾಜಿ ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ಮೈಸೂರು ವಿವಿ ಗ್ರಂಥಪಾಲಕಿ ಡಾ.ಪಿ.ಸರಸ್ವತಿ ಮತ್ತಿತರರು ಹಾಜರಿದ್ದರು.

Translate »