ಅಧ್ಯಯನ, ಕಠಿಣ ಪರಿಶ್ರಮವಿದ್ದರೆ ಯಶಸ್ಸು ಸಾಧ್ಯ
ಮೈಸೂರು

ಅಧ್ಯಯನ, ಕಠಿಣ ಪರಿಶ್ರಮವಿದ್ದರೆ ಯಶಸ್ಸು ಸಾಧ್ಯ

June 18, 2019

ಮೈಸೂರು: ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮವಿದ್ದರೆ ವಿದ್ಯಾರ್ಥಿಗಳು ಸ್ಪರ್ಧಾ ಜಗತ್ತಿನಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಅಭಿಪ್ರಾಯಪಟ್ಟರು.

ಮೈಸೂರಿನ ಶೇಷಾದ್ರಿಪುರಂ ರಸ್ತೆ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ಪರಿಚಯಾತ್ಮಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದ ಜೊತೆಗೆ ಎಲ್ಲಾ ವಿಭಾಗದ ತರಬೇತಿ, ನಿರಂತರ ಪರಿಶ್ರಮ, ಸತತ ಅಧ್ಯಯನ, ಶ್ರದ್ಧೆ, ಲಭ್ಯವಿರುವ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಯಶಸ್ಸು ಕಾಣಬೇಕು ಎಂದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್ ಮಾತನಾಡಿ, ಯುವಜನರು ವಿದ್ಯಾಭ್ಯಾಸ ಮತ್ತು ಗುರಿಯನ್ನು ಸಮರ್ಥವಾಗಿ ನಿಭಾಯಿಸಿದರೆ ದೇಶದ ಅಭಿವೃದ್ಧಿಯೂ ಸಾಧ್ಯವಿದೆ ಎಂದರು. ಇದೇ ಸಂದರ್ಭದಲ್ಲಿ ಎಜುಕೇಷನ್ ಕೋಸೆಂಟ್ ವಿಷಯ ಕುರಿತು ಮೈಸೂರು ಮೆಡಿಕಲ್ ಕಾಲೇಜಿನ ಮನೋರೋಗ ಶಾಸ್ತ್ರ ವಿಭಾಗÀದ ಮುಖ್ಯಸ್ಥ ಡಾ.ಬಿ.ಎನ್.ರವೀಶ್ ಉಪನ್ಯಾಸ ನೀಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ಶ್ರೀಶೈಲ ರಾಮಣ್ಣವರ್, ಕಾಲೇಜು ನಿರ್ವಹಣಾ ಮಂಡಳಿ ಅಧ್ಯಕ್ಷ ಟಿ.ನಾಗರಾಜು, ಡಾ.ಬಿ.ಟಿ.ರಘು, ಪ್ರಾಚಾರ್ಯ ಡಾ.ಎಸ್.ಮರಿಗೌಡ, ಮೋಹನ್‍ಕುಮಾರ್, ಇನ್ನಿತರರು ಉಪಸ್ಥಿತರಿದ್ದರು.

Translate »