ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಎಸ್‍ಯುಸಿಐ-ಕಮ್ಯೂನಿಸ್ಟ್ ಪ್ರತಿಭಟನೆ
ಮೈಸೂರು

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಎಸ್‍ಯುಸಿಐ-ಕಮ್ಯೂನಿಸ್ಟ್ ಪ್ರತಿಭಟನೆ

December 12, 2019

ಮೈಸೂರು,ಡಿ.11(ಪಿಎಂ)-ಕೇಂದ್ರ ಸರ್ಕಾ ರದ `ಪೌರತ್ವ ತಿದ್ದುಪಡಿ ಮಸೂದೆ’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ’ ವಿರೋ ಧಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ-ಕಮ್ಯೂನಿಸ್ಟ್) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ತಿದ್ದುಪಡಿ ಇದಾಗಿದ್ದು, ನಮ್ಮ ಸಂವಿಧಾನದ ಆಶಯ ಗಳಿಗೆ ಈ ತಿದ್ದುಪಡಿ ಸಂಪೂರ್ಣ ವಿರುದ್ಧ ವಾಗಿದೆ ಎಂದು ಕಿಡಿಕಾರಿದರು.

1955ರ ಭಾರತೀಯ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ನೆರೆಯ ಮುಸ್ಲಿಂ ದೇಶ ಗಳಾದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ನಿರಾಶ್ರಿತ ಅಲ್ಪಸಂಖ್ಯಾತರಿಗೆ ದೇಶದಲ್ಲಿ ಪೌರತ್ವ ನೀಡುವ ತಿದ್ದುಪಡಿ ಇದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿ ಕೊಂಡಿದೆ. ಈ ತಿದ್ದುಪಡಿಯ ಪ್ರಕಾರ ಈ 3 ದೇಶಗಳ ಹಿಂದೂ, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿ, ಸಿಖ್ ಸಮುದಾಯಗಳ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡಿ, ಮುಸ್ಲಿಂ ರನ್ನು ಮಾತ್ರ ನುಸುಳುಕೋರರು ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ಭಾರತದಲ್ಲಿ ಈ ರೀತಿ ಧರ್ಮ ಆಧಾರಿತ ಪೌರತ್ವ ನೀಡುವುದು ಖಂಡ ನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದೆಡೆ, 2024ರೊಳಗೆ ಇಡೀ ದೇಶ ದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ಮಾಡಲಾಗುವುದು ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಇದರ ಪ್ರಕಾರ 40ರಿಂದ 50 ವರ್ಷಗಳಷ್ಟು ಹಳೆಯ ಪೌರತ್ವ ದಾಖಲೆಗಳನ್ನು ಹೊಂದಿಲ್ಲದವರು ಅಕ್ರಮ ವಲಸಿಗರಾಗುತ್ತಾರೆ. ನಮ್ಮ ದೇಶದ ಬಹು ತೇಕ ಬಡವರು, ದಲಿತರು, ಆದಿವಾಸಿಗಳು, ಕೂಲಿಕಾರ್ಮಿಕರು ಸೂಕ್ತ ದಾಖಲೆಗಳನ್ನು ಹೊಂದಿಲ್ಲ. ಕೆಲವೇ ಮಂದಿ ವಲಸಿಗರನ್ನು ಪತ್ತೆ ಮಾಡಲು ಇಡೀ ದೇಶದ 130 ಕೋಟಿ ಜನಸಂಖ್ಯೆಯನ್ನು ಆತಂಕಕ್ಕೆ ದೂಡುವ ಕ್ರೂರ ಕ್ರಮ ಇದು ಎಂದು ಖಂಡಿಸಿದರು.

ಎಸ್‍ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಸಂಘಟನೆ ಮುಖಂಡರಾದ ಚಂದ್ರ ಶೇಖರ್, ಸಂಧ್ಯಾ, ಸೀಮಾ, ಜಿ.ಎಸ್. ಹರೀಶ್, ಸುನಿಲ್ ಇತರರು ಪ್ರತಿಭಟನೆಯಲ್ಲಿದ್ದರು.

Translate »