ಜಿಟಿಡಿ ನುಡಿದಿದ್ದೆಲ್ಲಾ ನಿಜವಾಗಿದೆ: ಹೆಚ್.ಪಿ.ಮಂಜುನಾಥ್ ಹರ್ಷ
ಮೈಸೂರು

ಜಿಟಿಡಿ ನುಡಿದಿದ್ದೆಲ್ಲಾ ನಿಜವಾಗಿದೆ: ಹೆಚ್.ಪಿ.ಮಂಜುನಾಥ್ ಹರ್ಷ

December 12, 2019

ಮೈಸೂರು,ಡಿ.11(ವೈಡಿಎಸ್)-ಹುಣಸೂರು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಶಾಸಕ ಹೆಚ್.ಪಿ.ಮಂಜುನಾಥ್ ಅವರು ಪತ್ನಿಯೊಂದಿಗೆ ಬುಧವಾರ ವಿಜಯನಗರದಲ್ಲಿರುವ ಶಾಸಕ ಜಿ.ಟಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ, ಜಿಟಿಡಿ ಅವರಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ ಸನ್ಮಾನಿಸಿ, ಆಶೀರ್ವಾದ ಪಡೆದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಂಜುನಾಥ್, ರಾಜಕೀಯದಲ್ಲಿ ಶತ್ರುಗಳೂ ಇಲ್ಲ. ಮಿತ್ರರೂ ಇಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಾನು ತಾಲೂಕಿನಲ್ಲಿ ಸಣ್ಣ ಪುಟ್ಟ ಸಮಾಜ ಸೇವೆ ಮಾಡಿಕೊಂಡಿದ್ದೆ. 2007ರಲ್ಲಿ ನಡೆದ ಶಾಲಾ ಕಾರ್ಯಕ್ರಮವೊಂದರಲ್ಲಿ ನಾನು ಕೊನೆಯಲ್ಲಿ ನಿಂತಿದ್ದೆ. ಈ ವೇಳೆ ಜಿ.ಟಿ.ದೇವೇಗೌಡರು ನನ್ನನ್ನು ಕರೆದು ಮುಂದಿನ ವರ್ಷ ನೀನೇ ಎಂಎಲ್‍ಎ ಆಗುತ್ತೀಯ ಎಂದು ಹೇಳಿ ಹುರಿದುಂಬಿಸಿ ನನ್ನಿಂದಲೇ ಪಾರಿವಾಳ ಹಾರಿ ಬಿಡಿಸಿದ್ದರು. ಅವರ ರಾಜಕೀಯ ವಿಶ್ಲೇಷಣೆ, ನುಡಿದ ಭವಿಷ್ಯ ಅದಾಗಲೇ ನಿಜವಾಗಿದೆ. ಇದಕ್ಕೆ ನಾನೇ ಸಾಕ್ಷಿ ಎಂದು ಜಿಟಿಡಿ ಜತೆಗಿನ ನಂಟನ್ನು ನೆನಪಿಸಿಕೊಂಡರು.

ಜಿಟಿಡಿ ಮಾತು ನಿಜವಾಗಿದೆ: ಜಿ.ಟಿ.ದೇವೇಗೌಡರು, ಮೊದಲು ಸಿದ್ದರಾಮಯ್ಯ ಸಿಎಂ ಆಗಬೇಕು ಎಂದಿದ್ದರು. ಬಳಿಕ `ಕುಮಾರ ಪರ್ವ’ ಮಾಡಿ ಹೆಚ್‍ಡಿಕೆ ಸಿಎಂ ಮಾಡೇ ಮಾಡುತ್ತೇನೆಂದು ಹೇಳಿದ್ದರು. ಪುರಭವನದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಾರೆಂದು ಭವಿಷ್ಯ ನುಡಿದಿದ್ದರು. ಅವರ ರಾಜಕೀಯ ವಿಶ್ಲೇಷಣೆ, ಭವಿಷ್ಯ ಎಲ್ಲವೂ ಸತ್ಯವಾಯಿತು. ಹರೀಶ್‍ಗೌಡ ನನ್ನ ಗೆಲುವಿಗೆ ಸಹಕರಿಸಿದ್ದಾರೆ. ಇದು ನನ್ನ ರಾಜಕೀಯ ಜೀವನದಲ್ಲಿ ಅವಿಸ್ಮರಣೀಯವಾದ ದಿನ ಎಂದರು.

ನನಗೆ ಎರಡು ವರ್ಗಗಳು ಮತ ನೀಡುವುದಿಲ್ಲವೆಂದು ಹೇಳುತ್ತಿದ್ದವು. ಆದರೆ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ತಾಲೂಕಿನ ಎಲ್ಲಾ ಜಾತಿ-ಜನಾಂಗದವರೂ ಮತ ನೀಡಿ ಗೆಲುವಿಗೆ ಶ್ರಮಿಸಿದ್ದಾರೆ. ಸಾಂಪ್ರದಾಯಿಕ ಮತಗಳ ಜತೆ ವಿವಿಧ ಪಕ್ಷಗಳ ಮತಗಳೂ ಲಭಿಸಿವೆ. ಇದು ನನ್ನ ಗೆಲುವಲ್ಲ. ತಾಲೂಕಿನ ಅಸ್ಮಿತೆಯ ಗೆಲುವು ಎಂದರು.

ಉಪ ಚುನಾವಣೆಗೂ ಮುನ್ನವೇ ಜಿ.ಟಿ.ದೇವೇಗೌಡರು, ಶೆಟ್ಟರ ಹುಡುಗ ಮಂಜು ನಾಥ್ ಗೆಲ್ಲುತ್ತಾನೆ ಎಂದು ಹೇಳಿದ್ದು ನನಗೆ ದೊಡ್ಡ ಶಕ್ತಿ ಸಿಕ್ಕಿದಂತಾಯಿತು. ಜಿಟಿಡಿ ತಟಸ್ಥರಾಗಿದ್ದರೂ ಲಲಿತಮ್ಮ, ಹರೀಶ್‍ಗೌಡರು ಸಂಪೂರ್ಣ ಬೆಂಬಲ ನೀಡಿದ್ದಾರೆ. 2008ರಲ್ಲಿ ಚಿಕ್ಕಮಾದು, ಜಿಟಿಡಿ ಅವರನ್ನು ಸೋಲಿಸಿ ಗೆದ್ದಿದ್ದೆ. ಆದರೆ, ಈಗ ಚಿಕ್ಕಮಾದು, ಜಿಟಿಡಿ ಅವರ ಕುಟುಂಬಗಳವರೇ ನನಗೆ ಬೆಂಬಲ ನೀಡಿ ಗೆಲ್ಲಿಸಿದ್ದಾರೆ. ಸುನೀಲ್ ಬೋಸ್, ಗಣೇಶ್ ಪ್ರಸಾದ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಹರೀಶ್‍ಗೌಡ ಯುವ ಸಮೂಹವೇ ನನ್ನನ್ನು ಬೆಂಬಲಿಸಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ತಾಲೂಕಿಗೆ ನೀಡಿದ್ದ ಹಲವು ಯೋಜನೆಗಳು ಅರ್ಧಕ್ಕೇ ನಿಂತಿದ್ದು, ಮತ್ತೆ ಅವುಗಳನ್ನು ಚಾಲನೆಗೊಳಿಸಿ ಜನರಿಗೆ ತಲುಪುವಂತೆ ಮಾಡಲು ಶ್ರಮಿಸುತ್ತೇನೆ ಎಂದರು.

ನಂತರ ಶಾಸಕ ಜಿ.ಟಿ.ದೇವೇಗೌಡರು ಮಾತನಾಡಿ, `ಹರೀಶ್‍ಗೌಡರು ನನ್ನ ಗೆಲುವಿಗೆ ಸಹಕರಿಸಿದ್ದು, ಅವರನ್ನು ಅಭಿನಂದಿಸಲು ಬಂದಿದ್ದೇವೆ’ ಎಂದರು. ಆದರೆ, ಮನೆಯಲ್ಲಿ ಪುತ್ರನಿಲ್ಲದ್ದರಿಂದ ನನ್ನಿಂದ ಆಶೀರ್ವಾದ ಪಡೆದಿದ್ದಾರೆ. ಈ ಹಿಂದೆ ಮಂಜುನಾಥ್‍ಗೆ ಟಿಕೆಟ್ ನೀಡುವ ಸಂದರ್ಭ ಇರಲಿಲ್ಲ. ಕಾಕತಾಳೀಯ ಎಂಬಂತೆ ನಾನು ಜೆಡಿಎಸ್ ಬಿಟ್ಟು ಬಿಜೆಪಿಗೆ ಹೋದಾಗ ಮುನ್ಸಿಪಾಲಿಟಿ ಅಧ್ಯಕ್ಷನಾಗಿದ್ದ ಮಂಜುನಾಥ್‍ಗೆ ಕಾಂಗ್ರೆಸ್ ಟಿಕೆಟ್ ನೀಡಿತು, ಗೆದ್ದರು. ಕಳೆದ ಬಾರಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗ ಬೇಕಿತ್ತು. ಒಂದೊಂದು ಸೀಟೂ ಮುಖ್ಯವಾಗಿದ್ದವು. ಹಾಗಾಗಿ ಹೆಚ್.ವಿಶ್ವನಾಥ್ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದೆವು. ಈಗ ಅವರು ಬಿಜೆಪಿಗೆ ಹೋದರು. ನಾನು ತಟಸ್ಥನಾದೆ ಮತ್ತೆ ಮಂಜುನಾಥ್ ಗೆಲುವು ಸಾಧಿಸಿದರು ಎಂದು ತಮ್ಮದೇ ಧಾಟಿಯಲ್ಲಿ ವ್ಯಾಖ್ಯಾನಿಸಿದರು.

Translate »