ಕೊಡಗು ಪ್ರವಾಸಿ ಉತ್ಸವದಲ್ಲಿ   ಭರಪೂರ ಮನ‘ರಂಜನೆ’
ಮೈಸೂರು

ಕೊಡಗು ಪ್ರವಾಸಿ ಉತ್ಸವದಲ್ಲಿ ಭರಪೂರ ಮನ‘ರಂಜನೆ’

January 5, 2019

ಮೈಸೂರು: ನೆರೆ ಹಾಗೂ ಭೂ ಕುಸಿತದಿಂದಾಗಿ ತತ್ತರಿಸಿ ರುವ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಜ.11ರಿಂದ 13ರವರೆಗೆ `ಕೊಡಗು ಪ್ರವಾಸಿ ಉತ್ಸವ-2019’ ಹಮ್ಮಿಕೊಂಡಿದೆ.

ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಓಪನ್ ಸ್ಟ್ರೀಟ್ ಫೆಸ್ಟಿವಲ್, ಶ್ವಾನ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯ ಕ್ರಮಗಳ ಮೂಲಕ ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯಲು ಅಣಿಯಾಗಿದೆ.

ಕೊಡಗು ಜಿಲ್ಲಾಡಳಿತ, ಪ್ರವಾಸೋ ದ್ಯಮ ಇಲಾಖೆ, ತೋಟಗಾರಿಕಾ ಇಲಾಖೆ, ಪಶು ಸಂಗೋಪನಾ ಇಲಾಖೆ, ಕೊಡಗು ಜಿಲ್ಲಾ ಹೋಟೆಲ್ ಮತ್ತು ರೆಸಾರ್ಟ್ ಅಸೋಸಿಯೇಷನ್, ಜಿಲ್ಲಾ ಟ್ರಾವೆಲ್ಸ್ ಅಸೋಸಿಯೇಷನ್, ಹೋಂಸ್ಟೇ ಅಸೋಸಿ ಯೇಷನ್ ಹಾಗೂ ಛೇಂಬರ್ಸ್ ಆಫ್ ಕಾಮರ್ಸ್ ಸಂಯುಕ್ತಾಶ್ರಯದಲ್ಲಿ ‘ಕೊಡಗು ಪ್ರವಾಸಿ ಉತ್ಸವ’ ನಡೆಯುತ್ತಿದೆ. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಹೆಸರಾಂತ ಕಲಾವಿದರು ಪ್ರವಾಸಿಗರಿಗೆ ರಸದೌತಣ ಉಣಬಡಿಸಲಿದ್ದಾರೆ.

ಫಲಪುಷ್ಪ ಪ್ರದರ್ಶನ: ಮಡಿಕೇರಿಯ ರಾಜಾ ಸೀಟ್ ಉದ್ಯಾನವನದಲ್ಲಿ ತೋಟ ಗಾರಿಕಾ ಇಲಾಖೆ ಮೂರು ದಿನಗಳ ಫಲ ಪುಷ್ಪ ಪ್ರದರ್ಶನ ಏರ್ಪಡಿಸಿದೆ. ಜ.11 ರಿಂದ 13ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆವರೆಗೂ ಪ್ರವಾಸಿಗರು ವೀಕ್ಷಿಸ ಬಹುದಾಗಿದೆ. ವಯಸ್ಕರಿಗೆ ಪ್ರವೇಶ ಶುಲ್ಕ 10 ರೂ. ನಿಗದಿಪಡಿಸಲಾಗಿದೆ. ಶಾಲಾ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿ ಗಳಿಗೆ ಉಚಿತ ಪ್ರವೇಶ.

ಪ್ರದರ್ಶನದಲ್ಲಿ ಪ್ರಮುಖವಾಗಿ 14 ಅಡಿ ಎತ್ತರದ `ಕಾವೇರಿ ಮಾತೆ’ ಪ್ರತಿಮೆ ವಿವಿಧ ಹೂವುಗಳಿಂದ ಮೂಡಿ ಬರ ಲಿದೆ. ಡಾಲ್ಫಿನ್, ಮಿಕ್ಕಿಮೌಸ್ ಸೇರಿ ದಂತೆ 20ಕ್ಕೂ ಹೆಚ್ಚು ಆಕೃತಿಗಳು ಕಣ್ಮನ ಸೆಳೆಯಲಿವೆ. ದಪ್ಪ ಮೆಣಸಿನಕಾಯಿಯಲ್ಲಿ ಆನೆಯ ಪ್ರತಿಕೃತಿ ರೂಪಿಸಲಾಗುತ್ತಿದೆ. ಲಕ್ಷಾಂತರ ಹೂವುಗಳಿಂದ ಬಗೆ ಬಗೆಯ ಆಕೃತಿಗಳು ರೂಪ ತಳೆಯಲಿವೆ.

ಶ್ವಾನ ಪ್ರದರ್ಶನ: ಜ.12ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೂ ಮಡಿಕೇರಿ ಗಾಂಧಿ ಮೈದಾನ ದಲ್ಲಿ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದೆ.

ವಸ್ತು ಪ್ರದರ್ಶನ: ಗಾಂಧಿ ಮೈದಾನ ದಲ್ಲಿ 3 ದಿನ ವಸ್ತು ಪ್ರದರ್ಶನ ಆಯೋಜಿಸ ಲಾಗಿದ್ದು, ಕೃಷಿ, ತೋಟಗಾರಿಕೆ, ಕಾಫಿ ಬೋರ್ಡ್, ಮಹಿಳಾ ಸಂಘಟನೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಉತ್ಪಾದಿಸಿದ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಇರಲಿದೆ.

ಪ್ರವಾಸ ಪ್ಯಾಕೇಜ್: ಮೂರು ದಿನಗಳ ಕಾಲ ಪ್ಯಾಕೇಜ್ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಮಾರ್ಗ 1ರಲ್ಲಿ ಭಾಗಮಂಡಲ, ತಲಕಾವೇರಿ, ನಲಕನಾಡು ಅರಮನೆ, ಚೆಲು ವಾರ ಜಲಪಾತ, ಮಾರ್ಗ 2ರಲ್ಲಿ ದುಬಾರೆ, ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಮಲ್ಲಳ್ಳಿ ಜಲಪಾತ, ಮಾರ್ಗ 3ರಲ್ಲಿ ಅಬ್ಬೆ ಜಲಪಾತ, ಮಂದಾಲಪಟ್ಟಿ, ಗದ್ದಿಗೆ, ರಾಜಾಸೀಟ್‍ಗೆ ಕರೆದೊಯ್ಯಲಾಗುತ್ತದೆ. ಬೆಳಿಗ್ಗೆ 8.30ಕ್ಕೆ ಮಡಿಕೇರಿಯ ಮಯೂರ ವ್ಯಾಲಿ ಬಳಿಯಿಂದ ಪ್ರವಾಸದ ಬಸ್ ಹೊರಡಲಿದೆ. ಹೆಚ್ಚಿನ ವಿವರಗಳಿಗಾಗಿ 08272-228387, 8970650028 ಸಂಪರ್ಕಿಸಬಹುದು.

Translate »