ಮಡಿಕೇರಿ: ಬೆಂಗಳೂರಿನಲ್ಲಿ 2008ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದ ಶಂಕಿತ ಆರೋಪಿಯನ್ನು ಅ.20 ರಾತ್ರಿ ವಿರಾಜಪೇಟೆಯ ಪೊಲೀಸ್ ಠಾಣೆಯಲ್ಲಿ ಇಡಲಾಗಿತ್ತು. ಕೇರಳ ಕಣ್ಣನೂರು ತಾಲೂಕಿನ ಪಿಣರಾಯಿ ಗ್ರಾಮದ ನಿವಾಸಿ ಸಲೀಂ(41) ಎಂಬಾತನನ್ನು ಕಳೆದ 15 ದಿನಗಳ ಹಿಂದೆ ಬೆಂಗಳೂರು ಸಿ.ಸಿ.ಬಿ. ಪೊಲೀಸರು ಕೇರಳದಲ್ಲಿ ಬಂಧಿಸಿದ್ದರು. ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪ ಸಲೀಂ ಮೇಲಿದ್ದು, ಸಿ.ಸಿ.ಬಿ. ಪೊಲೀಸರು ಈತನನ್ನು ಮಡಿವಾಳ ಪೊಲೀಸರ ವಶಕ್ಕೆ ನೀಡಿ, ಬಳಿಕ ನ್ಯಾಯಾಧೀಶರು ಬಂಧನಕ್ಕೆ ಒಪ್ಪಿಸಿದ್ದರು.
ತದನಂತರ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರಿಂದ ನ್ಯಾಯಾಂಗ ಆರೋಪಿ ಸಲೀಂನನ್ನು ಮತ್ತೆ ಪೊಲೀಸರ ವಶಕ್ಕೆ ನೀಡಿ ವಿಚಾರಣೆ ನಡೆಸಲು ಅವಕಾಶ ನೀಡಿತ್ತು.
ಈ ಹಿನ್ನಲೆಯಲ್ಲಿ ಸಲೀಂನನ್ನು ಸ್ಥಳ ಮಹಜರು ನಡೆಸಲು ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ಕರೆದೊಯ್ಯಲು ಪೊಲೀಸರು ನಿರ್ಧರಿಸಿದ್ದರು. ಆದರೆ ವಿರಾಜ ಪೇಟೆಗೆ ಆಗಮಿಸುವಾಗ ಕತ್ತಲಾದ ಹಿನ್ನಲೆಯಲ್ಲಿ ಆರೋಪಿ ಸಲೀಂನನ್ನು ಭದ್ರತಾ ದೃಷ್ಟಿಯಿಂದ ವಿರಾಜಪೇಟೆ ಠಾಣೆಯ ಲಾಕಪ್‍ನಲ್ಲಿ ಬಂಧಿಸಿಡಲಾಗಿತ್ತು. ಸಿಸಿಬಿ ಡಿವೈಎಸ್‍ಪಿ ಸುಬ್ರಮಣಿ, ಮನೋಜ್ ಕುಮಾರ್ ನೇತೃತ್ವದಲ್ಲಿ ಮಡಿವಾಳ ಪೊಲೀಸ್ ಠಾಣೆಯ ಉಪ ನಿರೀಕ್ಷಕ ನಾರಾಯಣ ಗೌಡ ಮತ್ತು 15ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಪೊಲೀಸರು ಭದ್ರತಾ ವ್ಯವಸ್ಥೆ ಒದಗಿಸಿದ್ದರು.
ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದ್ದು, ಸಾರ್ವಜನಿಕರಿಗೂ ಠಾಣೆ ಪ್ರವೇಶ ನಿಷೇಧಿಸಲಾಗಿತ್ತು. ಅ. 21ರ ಬೆಳಗ್ಗೆ ಆರೋಪಿಯನ್ನು ಕೇರಳಕ್ಕೆ ಕರೆದೊಯ್ದಿರುವ ಮಾಹಿತಿ ಲಭ್ಯವಾಗಿದೆ. ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಈಗಾಗಲೇ ಜೈಲಿನಲ್ಲಿರುವ ಅಬ್ದುಲ್ ನಾಸೀರ್ ಮದನಿ ನೀಡಿದ ಮಾಹಿತಿ ಆಧರಿಸಿ ಆರೋಪಿ ಸಲೀಂನನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ.