ಇಂದಿನಿಂದ ಸುತ್ತೂರು ಜಾತ್ರೆ ಆರಂಭ
ಮೈಸೂರು

ಇಂದಿನಿಂದ ಸುತ್ತೂರು ಜಾತ್ರೆ ಆರಂಭ

February 1, 2019

ನಂಜನಗೂಡು: ಕಪಿಲಾ ನದಿ ತೀರದಲ್ಲಿರುವ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಕೃಷಿಗೆ ಪೂರಕವಾಗಿ ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಜನ ಸಾಮಾನ್ಯರ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಸುತ್ತೂರು ಜಾತ್ರಾ ಮಹೋತ್ಸವದ ಆರು ದಿನಗಳ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಜಾತ್ರೆಯ ಪ್ರಮುಖ ಆರ್ಕಷಣೆಯಾಗಿರುವ ವಸ್ತು ಪ್ರದರ್ಶನ, ಕೃಷಿ ಮೇಳಕ್ಕೆ ಅಂತಿಮ ಸ್ಪರ್ಶ ನೀಡಲಾ ಗಿದೆ. ಮಹಾ ದಾಸೋಹಕ್ಕಾಗಿ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ. ಜಾತ್ರೆಯನ್ನು ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ಆತಿಥ್ಯ ನೀಡಲು ಮತ್ತು ಪ್ರತಿದಿನ 45ರಿಂದ 50 ಸಾವಿರ ಭಕ್ತಾದಿಗಳು ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರೆಯ ಮಹಾ ದಾಸೋಹದ ಆಹಾರ ಪದಾರ್ಥಗಳು ಈ ಬಾರಿ 20 ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ತಯಾರಾಗ ಲಿದೆ. ದಾಸೋಹ ಸಮಿತಿ ಬೆಂಗಾವ ಲಾಗಿ ಕಾರ್ಯ ನಿರ್ವಹಿಸಲಿದೆ. ಕುಡಿಯುವ ನೀರಿನ ಟ್ಯಾಂಕುಗಳನ್ನು ಶುದ್ಧೀಕರಣ ಮಾಡಿ, ನೀರಿನ ಗುಣ ಮಟ್ಟ ಪರಿಶೀಲನೆ ಕೂಡ ನಡೆಸಲಾಗಿದೆ. 80ಕ್ಕೂ ಹೆಚ್ಚು ಸದಸ್ಯರು ದಾಸೋಹ ಪರಿಸರದ ಸ್ವಚ್ಛತೆ ಮೇಲ್ವಿ ಚಾರಣೆ ಮಾಡಲಿದ್ದಾರೆ. ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಕನಿಷ್ಠ ಒಂದು ಲಕ್ಷ ಭಕ್ತರಿಗೆ 5 ಕಡೆ ಮಹಾ ದಾಸೋಹ ಕಲ್ಪಿಸಲು ಶ್ರೀಮಠ ಸಜ್ಜಾ ಗಿದೆ. ಗದ್ದುಗೆಗೆ ಹೊಂದಿಕೊಂಡಂತೆ ಬೃಹತ್ ದಾಸೋಹ ಕೇಂದ್ರವಿದೆ.

ಮಹಿಳೆಯರಿಗೆ ಎರಡು ಹಾಗೂ ಪುರುಷರಿಗೆ ನಾಲ್ಕು ಕೌಂಟರ್ ತೆರೆಯಲಾಗಿದೆ, ಸ್ವಯಂ ಸೇವಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ದಾಸೋಹಕ್ಕಾಗಿ ಈಗಾಗಲೇ ಉಗ್ರಾಣದಲ್ಲಿ ಅಗತ್ಯ ದಾಸ್ತಾನು ಶೇಖರಿಸಲಾಗಿದೆ. ಮಾನ್ವಿಯಿಂದ 1,200 ಕ್ವಿಂಟಾಲ್ ಅಕ್ಕಿ, 1.200 ಅಡಿಗೆ ಎಣ್ಣೆ ಟಿನ್, 12 ಟನ್ ಬೆಲ್ಲ, ಗುಲ್ಬರ್ಗದಿಂದ 250 ಕ್ವಿಂಟಾಲ್ ತೊಗರಿಬೇಳೆ, ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ 150 ಕ್ವಿಂಟಾಲ್ ಸಕ್ಕರೆ, 16 ಸಾವಿರ ತೆಂಗಿನಕಾಯಿ, 8 ಕ್ವಿಂಟಾಲ್ ಗೋಡಂಬಿ-ದ್ರಾಕ್ಷಿ ಪೂರೈಕೆಯಾಗಿದೆ. ಪ್ರತಿನಿತ್ಯ 7 ಸಾವಿರ ಲೀಟರ್ ಹಾಲು ಹಾಗೂ 25 ಸಾವಿರ ಲೀಟರ್ ಮೊಸರು ಪೂರೈಕೆಯಾಗಲಿದೆ. ಇದಕ್ಕಾಗಿ ಪ್ರತ್ಯೇಕ ಶೇಖರಣಾ ಘಟಕವನ್ನು ತೆರೆಯಲಾಗಿದೆ. ಮೈಸೂರು-ಗುಂಡ್ಲುಪೇಟೆ ಹಾಗೂ ಪಾಂಡವಪುರ ಎಪಿಎಂಸಿಗಳಿಂದ ಪ್ರತಿ ದಿನ ತರಕಾರಿಯನ್ನು ಸೇವಾರ್ಥದಾರರು ಒದಗಿಸಲಿದ್ದಾರೆ, ದಾಸೋಹ ಸಿದ್ಧಪಡಿಸಲು 500 ಬಾಣಸಿಗರು ಹಾಗೂ ಸುತ್ತಮುತ್ತಲ ಹಳ್ಳಿಗಳ ಸಂಘ-ಸಂಸ್ಥೆಗಳು, ಜೆಎಸ್‍ಎಸ್ ಸಂಸ್ಥೆಗಳ ನೌಕರರು ಸೇರಿ 2000 ಸ್ವಯಂ ಸೇವಕರು ದಾಸೋಹ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

30 ಬೃಹತ್ ಒಲೆಗಳಲ್ಲಿ ದಾಸೋಹ ಸಿದ್ಧಗೊಳ್ಳಲಿದೆ. ಒಮ್ಮೆಗೆ ಬೃಹತ್ ಕೊಪ್ಪರಿಕೆಗಳಲ್ಲಿ 5 ಕ್ವಿಂಟಾಲ್ ಅನ್ನ ತಯಾರಿಸಲಾಗುತ್ತದೆ. ಸಿದ್ಧನಂಜ ದೇಶಿಕೇಂದ್ರ ಮಂಟಪದಲ್ಲಿ ಪ್ರತ್ಯೇಕವಾಗಿ 100 ಕ್ವಿಂಟಾಲ್ ವಿವಿಧ ಸಿಹಿ ಖಾದ್ಯಗಳು ತಯಾರು ಆಗಲಿವೆ. ಕೊಯಮತ್ತೂರಿನಿಂದ ಯಂತ್ರಗಳನ್ನು ತರಿಸಿಕೊಳ್ಳಲಾಗಿದೆ.

ಚಾಮರಾಜನಗರದ ಜೆಎಸ್‍ಎಸ್ ತರಬೇತಿ ಕೇಂದ್ರದಲ್ಲಿ 9 ಲಕ್ಷ ಪೇಪರ್ ತಟ್ಟೆ ತಯಾರಿಸಲಾಗಿದೆ, ಆರು ದಿನಗಳವರೆಗೂ ಮಹಾ ದಾಸೋಹ ತಯಾರಿಗೆ ಅಗತ್ಯ ಸೌದೆ ಸಂಗ್ರಹಿಸಲಾಗಿದೆ, ಈ ಬಾರಿ ಸ್ವಯಂ ಸೇವಕರ ಕೌಂಟರ್‍ನಲ್ಲಿ ಪ್ರಾಯೋಗಿಕವಾಗಿ ಸ್ಟೀಲ್ ಪ್ಲೇಟ್ ಬಳಕೆ ಮಾಡಲು ಮಠ ಮುಂದಾಗಿದೆ. ಇದರ ಸಾಧಕ-ಬಾಧಕ ಗಮನಿಸಿ ಮುಂದಿನ ವರ್ಷ ಮಹಾ ದಾಸೋಹಕ್ಕೂ ಬಳಕೆಗೆ ಮಾಡುವ ಚಿಂತನೆ ನಡೆಸಲಾಗಿದೆ.

ಕೃಷಿ ಮೇಳ: 3 ಎಕರೆ ಪ್ರದೇಶದಲ್ಲಿ ಕೃಷಿಮೇಳ ಆಯೋಜಿಸಲಾಗಿದೆ. ಕಡಿಮೆ ಅವಧಿಯಲ್ಲಿ ಲಾಭದಾಯಕ ವೈವಿಧ್ಯತೆಯ ಬೆಳೆಗಳ ಪ್ರದರ್ಶನವಿದೆ. 30 ದಿನದಿಂದ 90 ದಿನಗಳೊಳಗೆ ಬೆಳೆಯಬಹುದಾದ 160 ಬೆಳೆಗಳ ಪ್ರಾತ್ಯಕ್ಷತೆ ಕಾಣಬಹುದಾಗಿದೆ. 112 ದೇಸಿ ಪದಾರ್ಥಗಳು, 60 ತೋಟಗಾರಿಕೆ ಬೆಳೆ, 30 ಮೇವು ಬೆಳೆ, 10 ಹೂಮಾದರಿಗೆ ಈ ಬಾರಿ ಒತ್ತು ನೀಡಲಾಗಿದೆ. ಜತೆಗೆ ಭೌಗೋಳಿಕ ಹಿನ್ನೆಲೆಯುಳ್ಳ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಚಿಗುರೆಲೆ ಹಾಗೂ ಈರನಗೆರೆ ಬದನೆ ಬೆಳೆಯಲಾಗಿದ್ದು, ರೈತರಿಗೆ ಅರಿವು ಮೂಡಿಸುವುದು ಕೃಷಿ ಮೇಳದ ಉದ್ದೇಶವಾಗಿದೆ.

ಸಾಮೂಹಿಕ ವಿವಾಹ: ಉಚಿತ ಸಾಮೂಹಿಕ ವಿವಾಹವನ್ನು ಫೆ.2ರಂದು ಏರ್ಪಡಿಸಲಾಗಿದ್ದು, ಎಲ್ಲಾ ಧರ್ಮ, ಜಾತಿಯವರಿಗೂ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. 185 ಜೋಡಿಗಳು ಸಾಮೂಹಿಕ ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದು, ವಧು-ವರ ಜೋಡಿ ಮತ್ತು ಸಂಬಂಧಿಗಳಲ್ಲಿ 50 ಜನರಿಗೆ ಛತ್ರದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಧುವಿಗೆ ಮಾಂಗಲ್ಯ, ಸೀರೆ, ಕಾಲುಂಗುರ ಹಾಗೂ ವರನಿಗೆ ಪಂಚೆ-ವಲ್ಲಿ, ಷರ್ಟ್ ನೀಡಲಾಗುತ್ತದೆ.

ಜ್ಯೋತಿರ್ಲಿಂಗ ಸ್ಥಾಪನೆ: ಬ್ರಹ್ಮಕುಮಾರಿ ಈಶ್ವರೀಯ ಮಹಾವಿದ್ಯಾಲಯದ ವತಿಯಿಂದ ವಸ್ತುಪ್ರದರ್ಶನದ ಆವರಣದಲ್ಲಿ ಜ್ಯೋತಿರ್ಲಿಂಗ ಸ್ಥಾಪಿಸಲಾಗಿದೆ.

ಚಿತ್ರ ಸಂತೆ: ರಾಜ್ಯದ ಕಲಾವಿದರನ್ನು ಒಂದೇ ಸೂರಿನಡಿ ಸಮಾವೇಶಗೊಳಿಸಿ ಸ್ಥಳದಲ್ಲೇ ಚಿತ್ರ ರಚಿಸಿ ಕಲಾಕೃತಿಗಳನ್ನು ಪ್ರದರ್ಶನ, ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ. ವಸ್ತುಪ್ರದರ್ಶನದಲ್ಲಿ 350 ಮಳಿಗೆ ತೆರೆಯಲಾಗಿದೆ.

Translate »