ಮೈಸೂರಿನ ವಿವಿಧೆಡೆ ಸ್ವಾಮಿ  ವಿವೇಕಾನಂದರ ಜಯಂತಿ ಆಚರಣೆ
ಮೈಸೂರು

ಮೈಸೂರಿನ ವಿವಿಧೆಡೆ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

January 13, 2019

ಮೈಸೂರು: ಮೈಸೂರಿನ ವಿವಿಧೆಡೆ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಇಂದು ರಾಷ್ಟ್ರೀಯ ಯುವ ಜನೋತ್ಸವ ಕಾರ್ಯ ಕ್ರಮ ಏರ್ಪಡಿಸಲಾಗಿತ್ತು.

ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ಕೆಆರ್‍ಎಸ್ ರಸ್ತೆಯ ಚೆಲುವಾಂಬ ಪಾರ್ಕ್ ನಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಜ್ಞಾನಾ ನಂದ ಮಹಾರಾಜ್ ಅವರು ಯುವ ಜನೋತ್ಸವವನ್ನು ಉದ್ಘಾಟಿಸಿದರು.

ಸ್ವಾಮಿ ವಿವೇಕಾನಂದರ ಭಾವಚಿತ್ರ ಇರಿಸಿದ್ದ ರಥವನ್ನು ಶಾಲಾ ಮಕ್ಕಳು ಬ್ಯಾಂಡ್ ನೊಂದಿಗೆ ಪಡುವಾರಹಳ್ಳಿ, ಮಾತೃ ಮಂಡಳಿ ಸರ್ಕಲ್, ಟೆಂಪಲ್ ರಸ್ತೆ ಮಾರ್ಗ ವಾಗಿ ಮೆರವಣಿಗೆಯಲ್ಲಿ ಯಾದವಗಿರಿಯ ಲ್ಲಿರುವ ಶ್ರೀರಾಮಕೃಷ್ಣ ವಿದ್ಯಾಶಾಲೆಗೆ ತಂದರು.
ಶಾಲಾ ಸಭಾಂಗಣದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ದಲ್ಲಿ ಸ್ವಾಮಿ ಆತ್ಮಜ್ಞಾನಾನಂದ ಮಹಾ ರಾಜ್, ರಿಂಸೆ ಅಧ್ಯಕ್ಷ ಸ್ವಾಮಿ ಮಹೇಶಾ ತ್ಮಾನಂದ, ಶ್ರೀರಾಮಕೃಷ್ಣ ವಿದ್ಯಾಶಾಲಾ ಮುಖ್ಯಸ್ಥ ಸ್ವಾಮಿ ಯುಕ್ತೇಶಾನಂದ ಮಹಾ ರಾಜ್, ಪ್ರಾಂಶುಪಾಲ ಬಾಲಾಜಿ, ಶಿಕ್ಷ ಕರು, ವಿದ್ಯಾರ್ಥಿಗಳು ಹಾಗೂ ಆಶ್ರಮದ ಇತರ ಸನ್ಯಾಸಿಗಳು ಭಾಗವಹಿಸಿದ್ದರು.

ಸೈಕಲ್ ಜಾಥಾ: ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕದ ವತಿಯಿಂದ ರಾಷ್ಟ್ರೀಯ ಯುವ ಜನೋತ್ಸವದ ಅಂಗವಾಗಿ ನಡೆದ ಸೈಕಲ್ ಜಾಥಾವನ್ನು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.

ಶೇಷಾದ್ರಿ ಅಯ್ಯರ್ ರಸ್ತೆ, ಜೆ.ಕೆ.ಮೈದಾನ, ಕೆ.ಆರ್.ಆಸ್ಪತ್ರೆ, ಓಲ್ಡ್ ಬ್ಯಾಂಕ್ ರಸ್ತೆ, ದೊಡ್ಡಗಡಿಯಾರ, ಹಾರ್ಡಿಂಗ್ ವೃತ್ತ, ಗನ್‍ಹೌಸ್ ಸರ್ಕಲ್, ಚಾಮರಾಜ ಜೋಡಿ ರಸ್ತೆ, ಎನ್‍ಎಸ್ ರಸ್ತೆ, ಸ್ವಾಮಿ ವಿವೇಕಾ ನಂದ ಸ್ಮಾರಕದ ಮೂಲಕ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ, ಹುಣಸೂರು ರಸ್ತೆ, ವಾಲ್ಮೀಕಿ ರಸ್ತೆ, ಆಕಾಶವಾಣಿ ಸರ್ಕಲ್ ಮಾರ್ಗವಾಗಿ ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿದ ಸೈಕಲ್ ಜಾಥಾ ಪುನಃ ವಿದ್ಯಾ ವರ್ಧಕ ಕಾಲೇಜು ತಲುಪಿತು. ಸಂಸ್ಥೆ ಕಾರ್ಯದರ್ಶಿ ಪಿ.ವಿಶ್ವನಾಥ್, ಸ್ಕೌಟ್ಸ್ ಅಂಡ್ ಗೈಡ್ಸ್ ಮೈಸೂರು ಜಿಲ್ಲಾ ಮುಖ್ಯ ಸಂಘ ಟಕ ಅಬ್ದುಲ್ ಜಮೀಲ್, ಕಾಲೇಜು ಪ್ರಾಂಶು ಪಾಲ ಡಾ.ಎಸ್. ಮರೀಗೌಡ, ಪ್ರೊ. ಹೆಚ್.ಜೆ.ಚಂದ್ರಶೇಖರ್ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಹಾರಾಜ ಕಾಲೇಜು ಪಠ್ಯೇತರ ಚಟುವಟಿಕೆಗಳ ಸಮಿತಿ, ಮೈಸೂರು ನಾಗ ರಿಕರ ಸೇವಾ ಸಮಿತಿ, ವಿಶ್ವ ಹಿಂದೂ ಧರ್ಮ ಸಂರಕ್ಷಣಾ ವೇದಿಕೆ, ನೆಹರು ಯುವ ಕೇಂದ್ರ, ಬಿಜಿಎಸ್ ಬಿಎಡ್ ಕಾಲೇಜು, ಶೇಷಾದ್ರಿಪುರಂ ಪದವಿ ಕಾಲೇಜು, ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜು ಸೇರಿದಂತೆ ಮೈಸೂರು ನಗರ ದಾದ್ಯಂತ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮಗಳು ನಡೆದವು.

ನಿಸ್ವಾರ್ಥ ಕೆಲಸದಿಂದ ಮನಸ್ಸು ಪರಿಶುದ್ಧ

ಮೈಸೂರು: ನಿಸ್ವಾರ್ಥತೆಯಿಂದ ಮಾಡುವ ಕೆಲಸ ನಮ್ಮ ಚಿತ್ತವನ್ನು ಶುದ್ಧಿಗೊಳಿಸುತ್ತದೆ ಎಂದು ಲೇಖಕ ಗೊರೂರು ಶಿವೇಶ್ ತಿಳಿಸಿದರು. ಅವರು ನಗರದ ಮಹಾರಾಜ ಉದ್ಯಾನದಲ್ಲಿರುವ ಶ್ರೀ ವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ವಿವೇಕಾನಂದರ 156ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಳ್ಳೆಯದರಲ್ಲಿ ನಂಬಿಕೆ, ದ್ವೇಷಾಸೂಯೆಗಳನ್ನು ತೊರೆದು ತಾವು ಒಳ್ಳೆಯವರಾಗಿ ಇತರರಿಗೆ ಸನ್ಮಾರ್ಗದಲ್ಲಿ ನಡೆಯಲು ಸಹಕರಿಸುವುದರಿಂದ ಮಾನವ ಜೀವನದ ಶ್ರೇಷ್ಠತೆಯು ಸಾಧಿತವಾಗುತ್ತದೆ ಎಂದು ಪ್ರತಿಪಾದಿಸಿದ ವಿವೇಕಾನಂದರು ನಿರ್ಭೀತ, ತ್ಯಾಗ, ಅವಿಶ್ರಾಂತ ಕ್ರಿಯಾಶೀಲತೆ ತಮ್ಮ ಅಸೀಮ ದೇಶಪ್ರೇಮ, ತಮ್ಮ ಆಳವಾದ ಅಧ್ಯಯನ ಸರಳತೆಯ ವ್ಯಕ್ತಿತ್ವ ಹಾಗೂ ಚಿಕಾಗೋ ಭಾಷಣದಿಂದಾಗಿ ಇಡೀ ವಿಶ್ವವನ್ನು ತಮ್ಮೆಡೆಗೆ ಸೆಳೆದುಕೊಂಡರು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್.ಬಿ.ರಮೇಶ್ 31 ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿ 39ನೇ ವಯಸ್ಸಿಗೆ ದೇಹಾಂತ್ಯವಾಗುವುದರ ನಡುವಿನ 8 ವರ್ಷಗಳ ಅವಧಿಯಲ್ಲಿ ಸಾಧಿಸಿದ್ದು ಅಪಾರ. ಅಷ್ಟಾಂಗ ಯೋಗ ಕ್ರಿಯೆಯನ್ನು ರಾಜ ಯೋಗದ ಮೂಲಕ ವಿಶ್ವಕ್ಕೆ ಯೋಗವನ್ನು ತಿಳಿಸಿಕೊಡುವುದರ ಜೊತೆಗೆ ರಾಮಕೃಷ್ಣ ಮಿಷನ್ ಮತ್ತು ರಾಮಕೃಷ್ಣ ಮಠಗಳನ್ನು ವಿಶ್ವದೆಲ್ಲೆಡೆ ಸ್ಥಾಪಿಸಿ, ಹಿಂದು ಧರ್ಮದ ವೈಶಾಲ್ಯ ಮತ್ತು ವೇದಾಂತ ತತ್ವದ ಗಂಭೀರತೆಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಚೇತನ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅತಿಥಿಯಾಗಿದ್ದ ಸಿ.ಕೆ.ಹರೀಶ್ ಮಾತನಾಡಿ, ಹಿಂದೂ ಧರ್ಮವನ್ನು ವಿಮರ್ಶಿಸಿ ಅದರ ಒಳಿತನ್ನು ಜಗಕ್ಕೆ ಸಾರಿದ ಕೀರ್ತಿ ವಿವೇಕಾನಂದರದ್ದು. ಭಾರತವು ಸಂತರನಾಡು. ಈ ಸಂತರ ಮೂಲಕ ಆಧ್ಯಾತ್ಮವನ್ನು ಪ್ರಪಂಚಕ್ಕೆ ಭರತಖಂಡ ಕೊಡುಗೆಯಾಗಿ ನೀಡಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ಉದ್ಯಮಿ ಹಾಗೂ ಸಮಾಜ ಸೇವಕರಾದ ಗೋಪಾಲಕೃಷ್ಣ ಪ್ರಭು ಶಾಲೆಯ ಆವರಣದಲ್ಲಿರುವ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಣಾರ್ಥಿಗಳಾದ ಜಿಲ್ಲಾ ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಲ್.ಜನಾರ್ಧನ್, ಚಂಗಪ್ಪ, ಶೇಖರ್, ಪುಟ್ಟಪ್ಪ, ರಾಮಚಂದ್ರು, ಆನಂದ್, ಪರಮೇಶ್, ಉಮೇಶ್, ಚಂದ್ರು, ರವೀಶ್, ಸುರೇಶ್, ಜ್ಞಾನೇಶ್ವರ್, ರಾಜೇಶ್, ತೋಟಗಾರಿಕೆ ಇಲಾಖೆಯ ಮಂಜುನಾಥ್, ಶ್ರೀಮತಿ ನಿರ್ಮಲ, ಶ್ರೀಮತಿ ನವೀನಆನಂದ, ಬ್ಯಾಂಕ್ ಅಧಿಕಾರಿಗಳಾದ ಮೈತ್ರಿ, ಶೋಭ, ವೇದ, ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »